ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಲಕೋಟೆ ಅರಣ್ಯ ಪ್ರದೇಶದಲ್ಲಿ ಅಡಗಿರುವ ಶಂಕಿತ ಉಗ್ರರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬಂದಿ ಗಾಯಗೊಂಡ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.
“ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಜಾಗರೂಕರಾಗಿರಲು ಮತ್ತು ಅರಣ್ಯ ವಲಯಗಳಲ್ಲಿ ಅಡಗಿರುವ ಶಂಕಿತ ಉಗ್ರರನ್ನು ಪತ್ತೆಹಚ್ಚಲು ತಾಂತ್ರಿಕ ಮತ್ತು ಕಣ್ಗಾವಲು ಗ್ಯಾಜೆಟ್‌ಗಳನ್ನು ಬಳಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸೋಮವಾರ, ಸಂದೇಹಾಸ್ಪದ ಚಲನವಲನಗಳ ಬಗ್ಗೆ ಮಾಹಿತಿಯ ಮೇರೆಗೆ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡವು ಕಲಕೋಟೆಯ ಬ್ರೋಹ್ ಮತ್ತು ಸೂಮ್ ಅರಣ್ಯ ವಲಯವನ್ನು ಸುತ್ತುವರೆದಿದ್ದು, ಸೈನಿಕರ ಮೇಲೆ ಉಗ್ರರು ಗುಂಡು ಹಾರಿಸಿದ್ದು, ಇಬ್ಬರು ಸೇನಾ ಸಿಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪಿರ್ ಪಂಜಾಲ್ ಕಣಿವೆಯ ರಜೌರಿ ಮತ್ತು ಪೂಂಚ್ ಗಡಿ ಜಿಲ್ಲೆಗಳಲ್ಲಿ ಈ ವರ್ಷ ಉಗ್ರರ ಚಟುವಟಿಕೆಗಳು ಹೆಚ್ಚಿವೆ.