Advertisement
ಮರಗಳ ಮೇಲೆ 11 ಸಿಬಂದಿ ಕಾವಲಿದ್ದು, ಹುಲಿಯ ಸಂಚಾರದ ಬಗ್ಗೆ ನಿಗಾ ವಹಿಸಿದ್ದರು. ಸುತ್ತಮುತ್ತ 17 ಕೆಮರಾಗಳನ್ನು ಅಳವಡಿಸಲಾಗಿತ್ತು. ಹುಲಿಯ ಚಲನವಲನದ ಬಗ್ಗೆ ಕೆಮರಾಗಳಿಂದ ಸಿಕ್ಕ ಮಾಹಿತಿ ಗಮನಿಸಿ ಈ ಭಾಗದಲ್ಲಿ ಬೆಳಗಿನಿಂದಲೇ ಮತ್ತಿಗೋಡು ಆನೆ ಕ್ಯಾಂಪ್‌ನಲ್ಲಿದ್ದ ಅಭಿಮನ್ಯು, ಕೃಷ್ಣ, ದ್ರೋಣ ಹಾಗೂ ಭೀಮ ಎಂಬ ಸಾಕಾನೆಗಳ ಸಹಾಯ ಪಡೆದು ತೋಟ ಹಾಗೂ ಕಾಡಿನಲ್ಲಿ ಸಂಚಾರ ನಡೆಸಿ ಹುಲಿ ಸೆರೆಗೆ ಪ್ರಯತ್ನ ಮಾಡಿದರು. ಬೆಳಗ್ಗೆ 10 ಗಂಟೆಯವರೆಗೆ ಸತತವಾಗಿ ಕಾರ್ಯಚರಣೆ ನಡೆಸಿದರಾದರೂ ಹುಲಿಯ ಜಾಡು ಸಿಗಲೇ ಇಲ್ಲ.
ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರ ಕೊಟ್ಟಿಗೆಯಲ್ಲಿದ್ದ 3 ಹಸುಗಳನ್ನು ಕೆಲವು ದಿನಗಳ ಹಿಂದೆ ಹುಲಿಯು ತಿಂದು ಹಾಕಿತ್ತು. ಅನಂತರ ಅರಣ್ಯ ಇಲಾಖೆಯ ಸಿಬಂದಿ ಈ ಭಾಗದಲ್ಲಿ ಹುಲಿ ಸೆರೆಗೆ ಬೋನು ಇರಿಸಿ ಪ್ರಯತ್ನ ನಡೆಸಿದ್ದರು. ಆದರೆ ಹುಲಿ ಬೋನಿನತ್ತ ಸುಳಿದಿರಲಿಲ್ಲ. ರೈತ ಸಂಘ ಹಾಗೂ ಜೆಡಿಎಸ್ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಇಲಾಖೆ ಮುಂಜಾನೆಯಿಂದಲೇ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ನಾಗರಹೊಳೆ, ತಿತಿಮತಿ, ಭಾಗದ ಅರಣ್ಯ ಅಧಿಕಾರಿಗಳು, ಸಿಬಂದಿ, ರ್ಯಾಪಿಡ್ ಫೋರ್ಸ್ ಸಿಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹುಲಿ ಸೆರೆಗೆ ಪ್ರಯತ್ನ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಎಫ್ಒ ಕೃಷ್ಣರಾಜ್, ಎಸಿಎಫ್ ಪೌಲ್ ಆ್ಯಂಟೋನಿ, ಆರ್‌ಎಫ್ಒ ಗಂಗಾಧರ್, ಕಿರಣ್, ಅಶೋಕ್ ಹುನಗುಂದ, ಸ್ನೇಕ್ ಸತೀಶ್, ಸ್ಥಳೀಯರು ಹಾಜರಿದ್ದರು.