Advertisement

ಸರ್ಜನ್‌ನೇ ಆಪರೇಶನ್‌ ಟೇಬಲ್‌ ಏರಿದಾಗ!

12:30 AM Dec 21, 2018 | |

ಈಗ ಸರಿಯಾಗಿದ್ದೇನೆ. ಕುತ್ತಿಗೆಯ ಮೇಲೊಂದು ಗಾಯದ ಕಲೆ, ಸರ್ಜನ್‌ಗಳ ಹಸ್ತಾಕ್ಷರದಂತೆ. ಮತ್ತದೇ ಜೀವನದ ಜಂಜಾಟ. ಮತ್ತದೇ ಆಸ್ಪತ್ರೆಯ ಕರ್ತವ್ಯ. ರೋಗಿಗಳೊಡನೆ ಸರಾಗವಾಗಿ ಸಾಗುವ ದಿನಗಳು. ಆದರೆ ವೈದ್ಯ ರೋಗಿಯಾಗುವ ವಿಪರ್ಯಾಸದಲ್ಲಿ ಕಂಡ ಜೀವನ ಸತ್ಯಗಳೆಷ್ಟೋ. ಸಾವಿನ ಭಾವವೆಷ್ಟೋ.

Advertisement

ವಿಚಿತ್ರ ವಿಪರ್ಯಾಸ! ಸರ್ಜನ್‌ ಆದ ನಾನೇ ಆಪರೇಶನ್‌ ಟೇಬಲ್‌ ಏರಿದ್ದೆ, ಇನ್ನುಳಿದ ಪೇಶಂಟ್‌ಗಳ ಹಾಗೇನೇ. ಹೌದು, ರೋಗಗಳಿಗೇನು ಗೊತ್ತು, ಇವನು ಡಾಕ್ಟರ್‌ ಎಂದು? ಯಾಕೆಂದರೆ ರೋಗಗಳು ಸರ್ವರನ್ನೂ ಸಮಾನವಾಗಿ ಕಾಣುವ ಸೂಪರ್‌ ಸಮಾಜವಾದಿಗಳು. 

ಅಂಥ ಒಂದು ರೋಗ, ಒಂದು ರೀತಿಯ ಧೈರ್ಯವಂತನಾದ ನನ್ನನ್ನು ಒಂದು ವಾರ ಹಿಂಡಿಬಿಟ್ಟಿತು. ಸುಮಾರು ಒಂದು ವರ್ಷದ ಹಿಂದೆ ಮೊದಲು ಕಾಣಿಸಿಕೊಂಡ, ಎಡಗೈಯನ್ನು ಸಂಪೂರ್ಣ ಆವರಿಸಿದ್ದ 10 ನಿಮಿಷಗಳ ಖ.ಐ.ಅ.ದಿಂದಾಗಿ ಗಾಬರಿ… (ಮೆದುಳಿಗೆ ರಕ್ತ ಸರಬರಾಜು ನಿಂತಾಗ ಆಗುವ ಸ್ಥಿತಿಗೆ Transient Ischemic Attack ಎನ್ನುತ್ತಾರೆ. ಅದು ಗಂಭೀರ ಸ್ಥಿತಿ ತಲುಪಿದರೆ, ಪಾರ್ಶ್ವವಾಯುವಿಗೆ ದಾರಿಮಾಡುತ್ತದೆ ಎನ್ನುವುದನ್ನು ಅರಿತರೆ ಅದರ ಗಾಂಭೀರ್ಯತೆ ಅರ್ಥವಾಗುತ್ತದೆ) ಯಾವುದೇ ದುಶ್ಚಟಗಳಿಲ್ಲದ, ಕೊಲೆಸ್ಟರಾಲ್‌, ಸುಗರ್‌, ಬಿ.ಪಿ., ಇತ್ಯಾದಿಗಳನ್ನು ಪುಸ್ತಕದಲ್ಲಿ ಬರೆದಷ್ಟೇ ನಿಖರವಾಗಿ ಕಾಯ್ದುಕೊಂಡು ಬಂದವ ನಾನು. ಆದರೆ ಹಣೆಬರಹ (ಅಥವಾ ಜೀನ್ಸ್ ಬರಹ) ಯಾರನ್ನೂ ಬಿಟ್ಟಿಲ್ಲವಲ್ಲ!

ಅಲ್ಲದೆ ವಯಸ್ಸಾಗುವುದೂ ಒಂದು ಕಾಯಿಲೆಯೇ, ಅಲ್ಲವೇ? ಆಗ ನಾನು ಡ್ರೈವ್‌ ಮಾಡುತ್ತಿದ್ದೆ. ಡ್ರೈವ್‌ ಮಾಡುವುದು ನನಗೆ ಅತ್ಯಂತ ಖುಷಿ ನೀಡುವ ಕಾರ್ಯಗಳಲ್ಲೊಂದು. ಇಂಥ ಅಧ್ವಾನ ರಸ್ತೆಗಳು, ರಸ್ತೆ ನಿಯಮಗಳನ್ನು ಪಾಲಿಸಿದರೆ ತಮ್ಮ ಗೌರವ ಕಡಿಮೆಯಾಗುತ್ತದೆ ಎಂಬುದನ್ನು ಗಟ್ಟಿಯಾಗಿ ನಂಬಿಕೊಂಡು ಅದನ್ನು ಪಾಲಿಸುವ ಜನಗಳಿದ್ದಾಗ್ಯೂ ಕೂಡ. ಆಗ ಸುಮ್ಮನೆ ಒಂದಿಷ್ಟು ಜುಮ್‌ ಎಂದ ನನ್ನ ಎಡಗೈ ಒಮ್ಮಿಂದೊಮ್ಮೆಲೆ ನಿಶ್ಶಕ್ತವಾಗಿಬಿಟ್ಟಿತು. ನನಗೆ ಒಂದಿಷ್ಟು  ಗಾಬರಿ. ಬದಿಯಲ್ಲಿ ಕುಳಿತ ಪತ್ನಿ ನಡುಗಿಬಿಟ್ಟಳು. ಆದರೆ ನಾನು  ಧೈರ್ಯ ಕಳೆದುಕೊಳ್ಳದೆ ಕಾರನ್ನು ಬದಿಗೆ ನಿಲ್ಲಿಸಿದೆ. ಬಲಗೈಯಿಂದಲೇ ಗೇರು ಬದಲಿಸಿ ಪಾರ್ಕಿಂಗ್‌ ಮಾಡಿದೆ. ಹಿಂದೆ ಇನ್ನೊಂದು ಕಾರಿನಲ್ಲಿ ಬರುತ್ತಿದ್ದ ನನ್ನ ಮಗನ ಕಾರಲ್ಲಿ ಮುಧೋಳಕ್ಕೆ ಬಂದು, ಅಲ್ಲಿಂದ ಬೆಳಗಾವಿಗೆ ಹೋಗಿ ಎಲ್ಲ ಇನ್ವೆಸ್ಟಿಗೇಶನ್‌ ಮುಗಿಸಿದಾಗ ಕಂಡದ್ದು ಬಲ ಕೆರೋಟಿಡ್‌ ರಕ್ತನಾಳದ‌ಲ್ಲಿ ಸ್ಥಾಯಿಯಾಗಿದ್ದ ಮೇದಸ್ಸು, (ಕೊಲೆಸ್ಟರಾಲ್‌), ನೀರಿನ ಪೈಪಿನಲ್ಲಿ ಬೆಳೆದ ತುಕ್ಕಿನಂತೆ. ಬ್ಲಾಕ್‌ 60%!

ಮೆದುಳಿಗೆ ರಕ್ತ ಸರಬರಾಜು ಮಾಡುವ ಮುಖ್ಯ 
ರಕ್ತನಾಳಗಳಿಗೆ “ಕೆರೋಟಿಡ್‌’ ಎಂದು ಹೆಸರು. ಈ ರಕ್ತನಾಳಗಳಲ್ಲಿ ಶೇಖರವಾಗುವ ಕೊಲೆಸ್ಟೆರಾಲ್‌ನಿಂದಾಗಿ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುವುದರಿಂದ ಮೆದುಳಿಗೆ ರಕ್ತ ಸರಬರಾಜು ಸರಿಯಾಗಿ ಆಗುವುದಿಲ್ಲ. “ಪ್ಲಾಕ್‌’ ಎಂದು ವೈದ್ಯಕೀಯ ಭಾಷೆಯಲ್ಲಿ  ಕರೆಯಲ್ಪಡುವ ಇದು ಕೆಲವೊಮ್ಮೆ ಹೆಪ್ಪುಗಟ್ಟಿದ ರಕ್ತದ ಸಣ್ಣ ಸಣ್ಣ ಕಣಗಳನ್ನು ಮೆದುಳಿನೆಡೆ ತೂರಿಬಿಡುತ್ತದೆ. ಅದರ ಪ್ರಮಾಣ ಕಡಿಮೆಯಿದ್ದರೆ, ಮೇಲೆ ವಿವರಿಸಿದ  ಖ.ಐ.ಅ. ಎಂಬ ತಾತ್ಕಾಲಿಕ ಪರಿಣಾಮವಾಗಿ, ಮತ್ತೆ ಮೊದಲಿನಂತೆ ಶಕ್ತಿ ಬರುತ್ತದೆ. ಹೆಚ್ಚಿನ ಪ್ರಮಾಣದ, ಮತ್ತು ದೊಡ್ಡ ಗಾತ್ರದ ಹೆಪ್ಪುಗಟ್ಟಿದ ರಕ್ತದ ಉಂಡೆಗಳು ಮೆದುಳಿನೆಡೆಗೆ ಚಿಮ್ಮಲ್ಪಟ್ಟರೆ ಶಾಶ್ವತ ಪಾರ್ಶ್ವ ವಾಯುವಿಗೆ ಕಾರಣವಾಗುತ್ತದೆ. ಯಾಕೆಂದರೆ ಮೆದುಳಿನ ಜೀವಕೋಶಗಳು ತಿರುಗಿ ಬೆಳೆಯಲಾರವು. ಇದೇ ಪ್ರಕ್ರಿಯೆ ಹೃದಯದ ರಕ್ತನಾಳಗಳಲ್ಲಿ ಸಂಭವಿಸಿದರೆ ಹೃದಯಾಘಾತ ವಾಗುತ್ತದೆ. ಹೀಗಾಗಿ  ರಕ್ತದಲ್ಲಿನ ಕೊಲೆಸ್ಟೆರಾಲ್‌ನ ಪ್ರಮಾಣವನ್ನು ಹದ್ದುಬಸ್ತಿನಲ್ಲಿಡುವುದು ತುಂಬ ಅವಶ್ಯ. ಜಿಡ್ಡಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದು, ಸಿಗರೇಟ್‌ ಸೇವನೆ, ಯಾವುದೇ ರೀತಿಯ ವ್ಯಾಯಾಮ ಮಾಡದೇ ಇರುವುದು, ಮಿತಿಮೀರಿದ ದೇಹತೂಕ, ಅತೀ ಒತ್ತಡದಲ್ಲಿ ಕೆಲಸ ಮಾಡುವುದು, ಇತ್ಯಾದಿಗಳು ಕೊಲೆಸ್ಟೆರಾಲ್‌ನ್ನು ಹೆಚ್ಚಿಸುತ್ತವೆ. ಇವಾವುದೂ ಇಲ್ಲದೆ ಇದ್ದರೂ ಕೆಲವೊಮ್ಮೆ ವಂಶವಾಹಿನಿಯಿಂದಾಗಿಯೂ ಇದರ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ. ನನಗೆ ಆಗಿದ್ದು ಇದರಿಂದಲೇ. ಪಿತ್ರಾರ್ಜಿತ ಆಸ್ತಿ ಬೇಕು, ಅಪ್ಪನ ವಂಶವಾಹಿನಿಯಿಂದಾಗಿ ಬರುವ ರೋಗಗಳು ಬೇಡವೆಂದರೆ ಹೇಗೆ?!

Advertisement

ರಕ್ತ ಈ ರೀತಿ ಹೆಪ್ಪುಗಟ್ಟದಂತಿರಲು ಅನೇಕ ರೀತಿಯ ಔಷಧೋಪಚಾರಗಳ ಲಭ್ಯತೆಯಿದೆ. ರಕ್ತನಾಳಗಳು ಪ್ರತಿಶತ 50 ರಿಂದ 70 ಬ್ಲಾಕ್‌ ಇ¨ªಾಗ ಆಸ್ಪಿರಿನ್‌, ಕ್ಲೋಪಿಡೊಗ್ರಿಲ್‌ನಂಥ ಮಾತ್ರೆಗಳು ಉಪಯುಕ್ತ ಪಾತ್ರವಹಿಸುತ್ತವೆ.  ಇಂತಹ Dual antiplatelet ಹಾಗೂ statinಗಳಂಥ ಮಾತ್ರೆಗಳಿಂದ ನನ್ನ  ಒಂದು ವರ್ಷದ ಬದುಕೇನೋ ಸಹನೀಯ ವಾಗಿತ್ತು. ಆದರೆ ಮೆದುಳಿನ ಮುಖ್ಯ ರಕ್ತನಾಳದ ಬ್ಲಾಕ್‌ ಅನ್ನುವುದು, ನೆತ್ತಿ ಮೇಲಿನ ತೂಗುಗತ್ತಿಯಾಗಿ ಕಾಡುತ್ತಿತ್ತು. ಯಾಕೆಂದರೆ ಈ ಪ್ಲಾಕ್‌ ಎನ್ನುವುದೇನು ಸುಮ್ಮನೇ ಕುಳಿತಿರಲು ಬಂದದ್ದೇನು? ಈಗ ಇಪ್ಪತ್ತು ದಿನಗಳ ಹಿಂದಿನ ಗುರುವಾರ ಸಾಯಂಕಾಲ ವಾಕಿಂಗ್‌ ಮುಗಿಸಿ ಮನೆಯಲ್ಲಿ ಕುಳಿತಿದ್ದೆ ನೋಡಿ, ಮತ್ತೆ ಒಂದಿಷ್ಟು ಅದುರಿ ಮೈ ಕೊಡವಿಬಿಟ್ಟಿತು. ಆಗ ಮೆದುಳಿನಕಡೆ ಸಾಗಿದ “ತ್ರಾಂಬಸ್‌’ ಎಂಬ ಹೆಪ್ಪುಗಟ್ಟಿದ ರಕ್ತ, ರಕ್ತನಾಳದ ತುದಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿತ್ತು. ನೋಡ ನೋಡುವುದರೊಳಗೆ ಎಡಗೈ ಹಾಗೆಯೇ ಮಲಗಿಬಿಟ್ಟಿತು, ನಿಶ್ಚೇಷ್ಟಿತ…! ಮೊದಲೇ ಪೇಸ್‌ಮೇಕರ್‌ ಸಹಾಯದಿಂದ ಹೇಗೋ ಕುಂಟುತ್ತ ಸಾಗಿದ್ದ ನನ್ನ ಎದೆಬಡಿತ ಮತ್ತಷ್ಟು ತಾಳ ತಪ್ಪಿತ್ತು. ಒಂದು ಕೈಯಿಲ್ಲದವ ಅದೆಂಥ  ಸರ್ಜನ್‌? ಎಂದು ಮನಸ್ಸು ವಿಹ್ವಲ. ಸುಮ್ಮನೆ ಕಣ್ಮುಚ್ಚಿ ಕುಳಿತೆ, ಬಲಗೈಯಿಂದ ನಿಶ್ಚೇಷ್ಟಿತ ಎಡಗೈಯನ್ನು ಸಂಭಾಳಿಸುತ್ತ, ನನಗೆ ನಾನೇ ಧೈರ್ಯ ಹೇಳುತ್ತ. ಮಾಡುವುದೇನು? ಅಪ್ಪ ನೆನಪಾದ. 

ಅಪ್ಪನೂ ಪಾರ್ಶ್ವವಾಯು ಪೀಡಿತನಾಗಿ ಹತ್ತಾರು ವರ್ಷ ಕಷ್ಟಪಟ್ಟಿದ್ದನ್ನು ಕಣ್ಣಾರೆ ಕಂಡವ ನಾನು. ಹತ್ತು ನಿಮಿಷ ಆಟ ಆಡಿಸಿದ ಕೈ ಮತ್ತೆ ಜೀವ ಪಡೆಯಿತು ತಂತಾನೆ! ಬಹುಶಃ ನಾನು ಮಾಡಿದ ಒಂದಿಷ್ಟು ಪುಣ್ಯದ ಕೋಟಾ ಇತ್ತೆಂದು ತೋರುತ್ತದೆ. ಸಮಾಧಾನದ ನಿಟ್ಟುಸಿರು. ಬೆಳಗಾವಿಯ ಸ್ನೇಹಿತ ನ್ಯುರೋಲೊಜಿಸ್ಟ್ರವರಿಗೆ ಫೋನಾಯಿಸಿ ರಾತ್ರಿಯೇ ಬೆಳಗಾವಿಗೆ. ಕೈಯಲ್ಲಿ ಶಕ್ತಿ ಬಂದಿದ್ದರೂ ಯಾವಾಗ ಏನಾಗುತ್ತದೋ ಎಂಬ ಭಯವಿದ್ದೇ ಇತ್ತು. ಬೆಳಿಗ್ಗೆ ಅವರ ಸಲಹೆ ಪಡೆದು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯೆಡೆಗೆ. ಈ ಬಾರಿ ಕನjರ್ವೇಟಿವ್‌ಗೆ ವಿದಾಯ. ಯಾಕೆಂದರೆ ಬ್ಲಾಕ್‌ 75%! ಸೋಮವಾರಕ್ಕೆ Carotid Endarterectomy ಫಿಕ್ಸ್

ರಕ್ತನಾಳಗಳಲ್ಲಿ ಶೇಖರಣೆಯಾದ ಕೊಲೆಸ್ಟೆರಾಲ್‌ ಪ್ಲಾಕ್‌ನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವ ಕ್ರಿಯೆಗೆ ಎಂಡಾರ್ಟೆಕ್ಟಮಿ ಎನ್ನುತ್ತಾರೆ. ಅದೊಂದು ತುಂಬ  ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ. ಕೆಲವೇ ವೈದ್ಯಕೀಯ ಕೇಂದ್ರಗಳಲ್ಲಷ್ಟೇ ಈ ಚಿಕಿತ್ಸೆ ಲಭ್ಯ. ಮೆದುಳಿಗೆ ರಕ್ತ ಸರಬರಾಜು ಮಾಡುವ ಮುಖ್ಯ ರಕ್ತನಾಳವನ್ನು  ಛೇದಿಸಿ ಅದರೊಳಗಿನ ಪ್ಲಾಕ್‌ನ್ನು ತೆಗೆಯುವ ಈ ಕ್ರಿಯೆ ಮುಗಿಯುವವರೆಗೆ ಆ ರಕ್ತನಾಳವನ್ನು ಬಂದ್‌ ಮಾಡಬೇಕಾಗುತ್ತದೆ. ಅಂದರೆ ಈ ಕ್ರಿಯೆ ಮುಗಿವವರೆಗೂ ಮೆದುಳಿಗೆ ರಕ್ತ ಪೂರೈಕೆ ಇಲ್ಲ. ಅರಿವಳಿಕೆ ಕೊಟ್ಟಮೇಲೆ ಇ.ಇ.ಜಿ. ಮುಖೇನ  ಮೆದುಳಿನ ಕ್ರಿಯೆಯನ್ನು ವೀಕ್ಷಿಸುತ್ತ ರಕ್ತದ ಹರಿವನ್ನು ನಿಲ್ಲಿಸಿ, ರಕ್ತ ಸರಬರಾಜಿಲ್ಲದ ಸ್ಥಿತಿಯನ್ನು ಮೆದುಳು ಎಷ್ಟೊತ್ತಿನವರೆಗೆ ತಡೆದುಕೊಳ್ಳಬಹುದು ಎಂದು ಅಂದಾಜಿಸಲಾಗುತ್ತದೆ. ನನ್ನದು ಎಂಟು ನಿಮಿಷ ಸಹಿಸಿಕೊಂಡಿತ್ತಂತೆ. ಹೀಗಾಗಿ ನನ್ನ ಶಸ್ತ್ರಕ್ರಿಯೆಯ ಮುಖ್ಯ ಘಟ್ಟ ಎಂಟು ನಿಮಿಷದೊಳಗೆ ಮುಗಿಸಬೇಕು, ಇಲ್ಲವೇ ಅವಘಡ!

ಸೋಮವಾರ ( 30-12-18) ಬೆಳಿಗ್ಗೆ ವಿಕ್ರಮ್‌ದ ಆಪರೇಶನ್‌ ಥೇಟರ್ಗೆ ಎಂಟ್ರಿ. Just like a layman! ನಾನು ರೋಗಿಯಾದೆನೆಂದರೆ ಲೇಮ್ಯಾನ್‌ ಆಗಿಬಿಡುತ್ತೇನೆ. ಅವರೇನು ಹೇಳುತ್ತಾರೋ ಅದನ್ನು ತಲೆಬಗ್ಗಿಸಿ ಅನುರಿಸುತ್ತ, ಅವರಿಗೂ ನಿರಾಳ, ನನ್ನ ಅಹಂಗೂ ಪೆಟ್ಟಾಗಲಾರದು. ಲೇಮ್ಯಾನ್‌ ಆಗುವುದರಲ್ಲಿ ಸುಖವಿದೆ. “ನಾನು ಸೀನಿಯರ್‌ ಸರ್ಜನ್‌, ನನ್ನದೂ ಆಸ್ಪತ್ರೆ ಇದೆ, ನನ್ನ ಕೈಯಲ್ಲಿ ಅಷ್ಟೊಂದು ಸಿಬ್ಬಂದಿ ಇದ್ದಾರೆ’ ಇತ್ಯಾದಿ ಅಹಮಿಕೆಯನ್ನು ಹೊರಗಿಟ್ಟು ಹೋದರೆ ಎಲ್ಲ ನಿರಾಳ. ಅಲ್ಲದೇ ನಾನು ಮೇಲಿಂದ ಮೇಲೆ ಪೇಶಂಟ್‌ ಆದವ. ಏಳು ವರ್ಷಗಳ ಹಿಂದೆ ಹೃದಯ ಬಡಿತ ಏರುಪೇರಾದಾಗ “ಪೇಸ್‌ ಮೇಕರ್‌’ ಹಾಕಿಸಿಕೊಂಡವ. ಐದು ತಿಂಗಳ ಹಿಂದೆ ಅಪೆಂಡಿಕ್ಸ್ ಆಪರೇಶನ್‌ ಮಾಡಿಸಿಕೊಂಡವ. ಹೀಗಾಗಿ ಒಂದು ರೀತಿಯ  ಅನಿವಾರ್ಯ ಧೈರ್ಯವಂತ. ಆದರೆ ಈ ಸರ್ಜರಿಯ ಅಡ್ಡಪರಿಣಾಮಗಳು ಗೊತ್ತಿದ್ದ ನನಗೆ ಒಂದಿಷ್ಟು ಭಯವಾದದ್ದು ನಿಜ. ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ ಕೈಕಾಲು ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ, ಇಲ್ಲವೇ ನಾಲಿಗೆಯ ನರಕ್ಕೆ ಪೆಟ್ಟಾದರೆ ಮಾತಾಡಲಾಗದ ಸ್ಥಿತಿ, ಇತ್ಯಾದಿಗಳೆಲ್ಲ ಮನದಲ್ಲಿ ಮೂಡಿದವು. 

ಮೊನ್ನೆ ತಾನೆ “ನಾನಿಲ್ಲವಾದಾಗ’ ಎಂಬ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ನೆನಪಾಯ್ತು. ಆದರೆ ಅವ್ವನನ್ನು ನೆನೆಯುತ್ತ ಕಣ್ಮುಚ್ಚಿದೆ! ನಾಸ್ತಿಕನಾದ ನಾನು ಎಂದೂ ದೇವರನ್ನು ನೆನೆದಿಲ್ಲ. ಆದರೆ ಕಷ್ಟಗಳು ಬಂದಾಗಲೆಲ್ಲ ಅವ್ವ ನೆನಪಾಗುತ್ತಾಳೆ. ಬೇರೆ ದಾರಿ ಯಾವುದಯ್ಯ? ಓ.ಟಿ.ಯವರೆಗೂ ನನ್ನ ಕೈ ಹಿಡಿದುಕೊಂಡು ಹಿಂಬಾಲಿಸಿದ್ದ ಮಗ. ಅವನೂ ಸರ್ಜನ್‌. ಆದರೆ ಒಳಬರಲಿಲ್ಲ, ಅವರು ಕರೆದರೂ ಕೂಡ. ಬೇರೆಯವರ ಕೆಲಸದಲ್ಲಿ ಮೂಗು ತೂರಿಸಿ ಕೆಲಸ ಕೆಡುವಂತಾಗಬಾರದಲ್ಲ. ಬೇರೆಯವರು ನಮ್ಮವರ ಆಪರೇಶನ್‌ ಮಾಡುವಾಗ ನಾವು ಒಳಗಿರುವುದು ಒಳ್ಳೆಯದಲ್ಲ. ಅವರಿಗೂ ಟೆನ್ಶನ್‌. ನಮಗೂ ಕೂಡ. ಹೊರಗೆ ಆತಂಕದಲ್ಲಿ ಕಣ್ಣೀರಾದ ಹೆಂಡತಿ, ಅಳಿಯ, ಮಗಳು, ಸೊಸೆ. ದೂರ ದೂರುಗಳಲ್ಲಿ ಚಿಂತೆ ಹಚ್ಚಿಕೊಂಡ ಬಂಧುಗಳು, ಬಾಂಧವರು, ಸಿಬ್ಬಂದಿ. ಹರಕೆ ಹೊತ್ತವರೆಷ್ಟೋ! ನಾನು ಸುದೈವಿ ಎನಿಸಿತು. ಎಷ್ಟೊಂದು ಜನ ನನ್ನ ಒಳಿತನ್ನು ಬಯಸಿದರಲ್ಲ ಎಂದು. ಅದಕ್ಕೇ ಕಷ್ಟಕಾಲದಲ್ಲಿ ಮಾತ್ರ ಗೊತ್ತಾಗುತ್ತದೆ, ನಾವೆಷ್ಟು ಜನರಿಗೆ ಬೇಕಾದವರೆಂದು.

ಸಲೈನ್‌ಗೆಂದು ಕೈಯಲ್ಲಿ ಸೂಜಿ, ಬಿ.ಪಿ. ನೋಡಲು ಮತ್ತೂಂದು ಸೂಜಿ, ಕುತ್ತಿಗೆಯಲ್ಲಿ ದೊಡ್ಡದೊಂದು ಪೈಪ್‌, ಎದೆಗೆ ಅಂಟಿಸಿದ ಇ.ಸಿ.ಜಿ. ಪ್ಯಾಡ್‌ಗಳು, ಹೀಗೆ ಮೈತುಂಬ ವೈರ್‌ಗಳು, ಸೂಜಿಗಳು, ಪೈಪ್‌ಗ್ಳು… ಮೂಗಿಗೆ ಮಾಸ್ಕ್ ಹಿಡಿದದ್ದಷ್ಟೇ ಗೊತ್ತು, ಆಮೇಲೆ ಮರಣದ ಮನೆ ಬಾಗಿಲಿನಲ್ಲಿ ಮಲಗಿದ ಸ್ಥಿತಿ! 

ಮೂರು ಗಂಟೆಯಾಯಿತಂತೆ, ಇಡೀ ಶಸ್ತ್ರಚಿಕಿತ್ಸೆ. ಆದರೆ ಮುಖ್ಯ ಕ್ರಿಯೆಯನ್ನು  ಬರೀ ಆರು ನಿಮಿಷಗಳಲ್ಲಿ ಮಾಡಿ ಮುಗಿಸಿದ್ದರು, ಅದ್ಭುತ ಸರ್ಜನ್‌ಗಳು.  ಕುತ್ತಿಗೆಯಲ್ಲಿನ ರಕ್ತನಾಳ ಛೇದಿಸಿ ಒಳಗಿಂದ ಬ್ಲಾಕ್‌ ತೆಗೆಯುವ ಶಸ್ತ್ರಚಿಕಿತ್ಸೆ ಕೆಲವರಿಂದ ಮಾತ್ರ ಸಾಧ್ಯ. ನಿಖರವಾದ ವೇಳೆಯಲ್ಲಿ ಮುಗಿಸಬೇಕಾಗುತ್ತದೆ. ಇಲ್ಲವೇ ಅಪಾಯ. ಕಣ್ಣು ತೆರೆಯಿರಿ, ಎಂದಾಗ ನಾನು ಮಾಡಿದ ಮೊದಲ ಕೆಲಸ ಕೈಕಾಲು ಆಡಿಸಿ ನೋಡಿದ್ದು, ಸರಿಯಾಗಿವೆಯೇ ಎಂದು!

ಈಗ ಸರಿಯಾಗಿದ್ದೇನೆ. ಕುತ್ತಿಗೆಯ ಮೇಲೊಂದು ಗಾಯದ ಕಲೆ, ಸರ್ಜನ್‌ಗಳ ಹಸ್ತಾಕ್ಷರದಂತೆ. ಮತ್ತದೇ ಜೀವನದ 
ಜಂಜಾಟ. ಮತ್ತದೇ ಆಸ್ಪತ್ರೆಯ ಕರ್ತವ್ಯ. ರೋಗಿಗಳೊಡನೆ ಸರಾಗವಾಗಿ ಸಾಗುವ ದಿನಗಳು. ಆದರೆ ವೈದ್ಯ ರೋಗಿಯಾಗುವ ವಿಪರ್ಯಾಸದಲ್ಲಿ ಕಂಡ ಜೀವನ ಸತ್ಯಗಳೆಷ್ಟೋ. ಸಾವಿನ ಭಾವವೆಷ್ಟೋ. ನನ್ನ ಮೂವತ್ತೆಂಟು ವರ್ಷಗಳ  ವೈದ್ಯಕೀಯದಲ್ಲಿ ನಾನು ಪಾಲಿಸಿಕೊಂಡು ಬಂದ ನಿಯಮವೆಂದರೆ ರೋಗಿಯ ಸ್ಥಳದಲ್ಲಿ ನನ್ನನ್ನೇ ನಾನು ಕಲ್ಪಿಸಿಕೊಳ್ಳುವುದು. ಅದರಂತೆ ಅವರೊಡನೆ ಸಂವಹನ ಮಾಡುವುದು. ಆದರೆ ಈಗ ನಿಜವಾದ ರೋಗಿಯಾಗಿ, ಅದೂ ಅತ್ಯಂತ  ಕ್ಲಿಷ್ಟ ಸಮಸ್ಯೆಯನ್ನು ಎದುರಿಸಿ, ರೋಗಿ-ವೈದ್ಯ ಸಂಬಂಧದಲ್ಲಿ ಇನ್ನಷ್ಟು ಪಕ್ವತೆ ಪಡೆದೆ. 

ಬದುಕು ನಿತ್ಯ ಶಿಕ್ಷಕ. ನಾನು ನಿತ್ಯ ವಿದ್ಯಾರ್ಥಿ…!

ಡಾ. ಶಿವಾನಂದ ಕುಬಸದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next