ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಗೋಕಾಕ ಸಾಹುಕಾರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸದ್ದಿಲ್ಲದೆ ಮತ್ತೊಂದು ಆಪರೇಷನ್ ಮಾಡಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮ ಪಂಚಾಯತಿಯ ಐವರು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ, ಉಚಗಾಂವ, ಬೆಳಗುಂದಿ, ತುರಮರಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವ ಸಚಿವ ರಮೇಶ್ ಜಾರಕಿಹೊಳಿ, ಐವರು ಸದಸ್ಯರನ್ನು ಇಂದು ಮಾರಿಹಾಳ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಆಯ್ಕೆಮಾಡಿದ್ದಾರೆ.
ಆಯ್ಕೆಯಾದ ಬಸವರಾಜ ಮಾದಮ್ಮನವರ, ಮಲ್ಲವ್ವ ಕುಳ್ಳನ್ನವರ, ರೇಖಾ ತಳವಾರ, ಗಂಗವ್ವ ಅಮಾತಿ ಹಾಗೂ ತೌಸೀಫ ಫಣಿಬಂಧ ಅವರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ:ಜಿಲ್ಲಾ ಕೇಂದ್ರದ ಹೈಟೆಕ್ ಗ್ರಂಥಾಲಯ ಕಾಮಗಾರಿಗೆ ಗ್ರಹಣ
ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೆ ಅಖಾಡ ಸಿದ್ದಗೊಳಿಸುತ್ತಿರುವ ಸಚಿವ ರಮೇಶ್ ಜಾರಕಿಹೊಳಿ, ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಗ್ರಾಮಪಂಚಾಯತ್ ಚುನಾವಣೆಗೆ ಬಹುತೇಕ ಅಭ್ಯರ್ಥಿಗಳು ಇವರ ಸಹಾಯದಿಂದಲೇ ಸ್ಪರ್ಧಿಸಿದ್ದು, ಫಲಿತಾಂಶ ಬಂದ ಬಳಿಕ ಇವರ ಪ್ರಾಬಲ್ಯ ಇನ್ನಷ್ಟು ಹಚ್ಚಾಗುವ ಸಾಧ್ಯತೆಗಳಿವೆ .