Advertisement

ಆಶ್ರಯ ಮನೆಗಳಿಗೆ ಸಿಗದ ಕಾರ್ಯಾದೇಶ:ಆಕ್ರೋಶ

12:34 AM Aug 03, 2019 | Team Udayavani |

ಅಜೆಕಾರು: 2017-18ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ವಸತಿ ಗ್ರಾಮ ಸಭೆ ಮೂಲಕ ಪಂಚಾಯತ್‌ ಆಡಳಿತ ಅರ್ಹ ಫ‌ಲಾನುಭವಿಗಳನ್ನು ಆಯ್ಕೆ
ಮಾಡಿದ್ದರೂ ಸರಕಾರ ದಿಂದ ಕಾರ್ಯಾದೇಶ ಸಿಗದೆ ಫ‌ಲಾನುಭವಿ ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯರ್ಲಪಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಯರ್ಲಪಾಡಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಆ.2ರಂದು ಪಂಚಾಯತ್‌ ಸಭಾಭವನದಲ್ಲಿ ಪಂ. ಅಧ್ಯಕ್ಷ ವಸಂತ ಕುಲಾಲ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಸತಿ ಯೋಜನೆಯಡಿ ಶೀಘ್ರ ದಲ್ಲಿಯೇ ಮನೆ ಮಂಜೂರಾತಿ ಆದೇಶ ಬರುವುದೆಂದು ಹಳೆ ಮನೆ ಕೆಡವಿ ಹೊಸದಾಗಿ ತಳಪಾಯ ಹಾಕಿ ಒಂದು ವರ್ಷ ಕಳೆದರೂ ಸರಕಾರದಿಂದ ಕಾರ್ಯಾದೇಶ ಬಾರದೆ ಅತಂತ್ರ ಸ್ಥಿತಿಯಲ್ಲಿ ಫ‌ಲಾನುಭವಿಗಳಿದ್ದಾರೆ. ಬಿಸಿಲು ಮಳೆಗೆ ಸೂರಿಲ್ಲದೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು
ಸಭೆಯ ಗಮನಕ್ಕೆ ತಂದರು.

ತತ್‌ಕ್ಷಣ ಮಂಜೂರಾತಿ ಪತ್ರ ದೊರೆತಲ್ಲಿ ಮನೆ ಕಟ್ಟಲು ಅನುಕೂಲ ಪರಿಸ್ಥಿತಿ ಇದ್ದು ಇನ್ನೂ ತಡವಾದಲ್ಲಿ ಮನೆ ಕಟ್ಟುವ ಸಮಯದಲ್ಲಿ ನೀರಿನ ಸಮಸ್ಯೆ ಉಂಟಾಗಿ ಮನೆ ನಿರ್ಮಾಣ ಅಸಾಧ್ಯ. ಒಂದು ವೇಳೆ ಸಕಾಲದಲ್ಲಿ ಮನೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಪಿಡಿಒರವರು ನೋಟಿಸ್‌ ಜಾರಿ ಮಾಡುತ್ತಾರೆ. ಆಗ ನೀರಿನ ಸಮಸ್ಯೆ ಇದ್ದರೆ ಮನೆ ಕಟ್ಟುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ಪಿಡಿಒ ಪ್ರಮೀಳಾ ನಾಯಕ್‌ ಯರ್ಲಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ 18 ಅರ್ಹ ಫ‌ಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಸರಕಾರದಿಂದ ಕಾರ್ಯಾದೇಶ ಬರಲು ಬಾಕಿ ಇದೆ ಎಂದರು.ಇದಕ್ಕೆ ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಗಂಭೀರ ಸಮಸ್ಯೆಯಾಗಿರುವ ವಸತಿ ಯೋಜನೆ ಬಗ್ಗೆ ಜಿಲ್ಲಾ ಪಂಚಾಯತ್‌ ಸಭೆಯಲ್ಲಿ ಪ್ರಸ್ತಾವಿಸಿ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.

Advertisement

ಅಸಮರ್ಪಕ ಪಡಿತರ ವಿತರಣೆ
ಪಂಚಾಯತ್‌ ವ್ಯಾಪ್ತಿಯ ಕಾಂತರ ಗೋಳಿ, ಯರ್ಲಪಾಡಿ, ಹೆಪ್ಪಳ, ಜಾರ್ಕಳ ಭಾಗದವರಿಗೆ ವಿತರಣೆ ಮಾಡುವ ಪಡಿತರ ಕೇಂದ್ರ ಅಸಮರ್ಪಕತೆಯಿಂದ ಕೂಡಿದ್ದು ಗ್ರಾಹಕರಿಗೆ ತೀವ್ರ ತೊಂದರೆ ಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಖಾಸಗಿ ವ್ಯಕ್ತಿಯವರು ಪಡಿತರ ವಿತರಣೆ ನಡೆಸುತ್ತಿದ್ದು ಇದು ಅಸಮರ್ಪಕತೆಯಿಂದ ಕೂಡಿದೆ. ಪಡಿತರ ವಸ್ತುಗಳನ್ನು ಪಡೆಯಲು ಹೋದರೆ ನಿಂದಿಸುತ್ತಾರೆ,ಅಲ್ಲದೆ ಅಕ್ಕಿ ಸೇರಿದಂತೆ ಪಡಿತರ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿಯೇ ಹರಡಿರುತ್ತಾರೆ. ಇದನ್ನೇ ಗ್ರಾಹಕರಿಗೆ ನೀಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನಿಂದಿಸುವ ಜತೆಗೆ ಸಾಮಾಜಿಕ ಜಾಲತಾಣ ಗಳಲ್ಲಿ ಅಸಭ್ಯವಾಗಿ ಬರೆಯುತ್ತಾರೆ ಎಂದು ಗ್ರಾಮಸ್ಥರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯವ ರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ 3 ವರ್ಷಗಳಿಂದ ಈ ಸಮಸ್ಯೆ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ದೂರು ಸಲ್ಲಿಸಲಾಗಿತ್ತು. ಆದರೆ ತನಿಖೆಗೆ ಬಂದ ಅಧಿಕಾರಿ ಗ್ರಾಮಸ್ಥರನ್ನು ಸಂಪರ್ಕಿಸದೇ ಕೇವಲ ಪಡಿತರ ವಿತರಕರ ಮಾಹಿತಿ ಪಡೆದು ಹಿಂತಿರುಗಿದ್ದಾರೆ. ಯರ್ಲಪಾಡಿ ಗ್ರಾಮದ ಪಡಿತರ ವ್ಯವಸ್ಥೆ ಪಂಚಾಯತ್‌ ಆಡಳಿತವೇ ವಹಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಆಟದ ಮೈದಾನಕ್ಕೆ ಮನವಿ: ಯರ್ಲಪಾಡಿ ಸಂಯುಕ್ತ ಪ್ರೌಢ ಶಾಲೆಗೆ ಆಟದ ಮೈದಾನದ ಕೊರತೆಯಿದೆ. ಶಾಲೆಗೆ ಆಟದ ಮೈದಾನಕ್ಕಾಗಿ ಜಾಗ ವನ್ನು ಖಾಯ್ದಿರಿಸಿದ್ದರೂ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದಾಗಿ ಮೈದಾನ ಇಲ್ಲದಂತಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಸುಪ್ರಿಂ ಕೋರ್ಟ್‌ನಲ್ಲಿದ್ದು ಕೋರ್ಟ್‌ ಆದೇಶ ಬರದೇ ಏನೂ ಮಾಡುವಂತಿಲ್ಲ ಎಂದರು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ಯರ್ಲಪಾಡಿ ಅಂಗನವಾಡಿಯಲ್ಲಿ ಮೂಲ ಸೌಕರ್ಯವಿಲ್ಲದೆ

ಮಳೆಗಾಲದಲ್ಲಿ ಮಕ್ಕಳು ನೀರಿನಲ್ಲೇ ಕಾಲ ಕಳೆಯ ಬೇಕಾಗಿದೆ. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದರು.ವಾಮಾಚಾರಪಂಚಾಯತ್‌ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಪ್ರತೀ ತಿಂಗಳ ಅಮವಾಸ್ಯೆ ಯಂದು ವ್ಯಕ್ತಿಯೋರ್ವರು ಹೋಮ ದಂತಹ ಪೂಜೆಯನ್ನು ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಭಯಭೀತಿ ಹುಟ್ಟಿಸುತ್ತಿದ್ದಾರೆ. ವಾಮಾಚಾರದಂತಹ ಇಂತಹ ಕೃತ್ಯಗಳ ಬಗ್ಗೆ ಪೊಲೀಸ್‌ ಇಲಾಖೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತ್‌ ವ್ಯಾಪ್ತಿಯಲ್ಲಿ ಅಕ್ರಮ ಗೂಡಂಗಡಿಗಳು ಕಟ್ಟಡಗಳು ತಲೆಯೆತ್ತು ತ್ತಿದ್ದು ಇವುಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಸಭೆಯಲ್ಲಿ ಪ.ಜಾತಿ, ಪ.ಪಂಗಡದವರಿಗೆ ಸಹಾಯಧನ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಮಾತನಾಡಿ ಪಂಚಾಯತ್‌ ವ್ಯಾಪ್ತಿಯ ಸಪ್ತಗಿರಿ ಭಾಗಕ್ಕೆ ಕುಡಿಯುವ ನೀರಿಗಾಗಿ 15 ಲಕ್ಷ ರೂ. ಅನುದಾನ ಒದಗಿಸಿದ್ದು ಕಾಮಗಾರಿ ನಡೆಯಲಿದೆ. ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಸೇರಿ ಚಿಂತನೆ ನಡೆಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯರಾದ ನಿರ್ಮಲಾ, ಪಿಡಿಒ ಪ್ರಮೀಳಾ ನಾಯಕ್‌, ಕಾರ್ಯದರ್ಶಿ ಸುನಂದ, ಸದಸ್ಯರಾದ ಶ್ರೀನಿವಾಸ ಪೂಜಾರಿ, ಜಯರಾಮ್‌ ಶೆಟ್ಟಿ, ಉಷಾ ಪೂಜಾರಿ, ಕುಸುಮಾ ಪೂಜಾರಿ, ಸಂತೋಷ್‌ ಶೆಟ್ಟಿ, ಜ್ಯೋತಿ ನಾಯ್ಕ, ಉಮಾವತಿ, ಸುಧಾಕರ್‌ ಹೆಗ್ಡೆ, ಸುಜಾತಾ, ಸುನೀತಾ ಉಪಸ್ಥಿತರಿದ್ದರು.

ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಪಶುಸಂಗೋಪನೆ ಇಲಾಖೆಯ ಸುಭ್ರಮಣ್ಯ ಪ್ರಸಾದ್‌ ಭಾಗವಹಿಸಿದ್ದರು.ತೋಟಗಾರಿಕೆ, ಆರೋಗ್ಯ, ಕಂದಾಯ, ಶಿಕ್ಷಣ, ಪಶುಸಂಗೋಪನೆ, ಕೌಶಲಾಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಮೆಸ್ಕಾಂ, ಅರಣ್ಯ, ಕೃಷಿ, ಆಹಾರ ಮತ್ತು ನಾಗರೀಕ ಸರಬರಾಜು, ಸಿಂಡ್‌ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮಸ್ಥರ ಪರವಾಗಿ ಪ್ರವೀಣ್‌, ಸುಚೀಂದ್ರ, ಕರುಣಾಕರ ಪೂಜಾರಿ, ಜ್ಯೋತಿ, ದೀಪಕ್‌, ಹರೀಶ್ಚಂದ್ರ ರಾವ್‌ ಮಾತನಾಡಿದರು. ಸಿಬಂದಿ ಕಾಂತ ಪೂಜಾರಿ ವರದಿ ಮಂಡಿಸಿದರು. ಕಾರ್ಯದರ್ಶಿ ಸುನಂದಾ ಎಸ್‌. ಸ್ವಾಗತಿಸಿ ವಂದಿಸಿದರು.

ಮಳೆಕೊಯ್ಲು ಪ್ರಾತ್ಯಕ್ಷಿಕೆ
ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆಕೊಯ್ಲನ್ನು ಯಶಸ್ವಿಯಾಗಿ ಅನುಷ್ಠಾನಗೊಳಿ ಸುವ ನಿಟ್ಟಿನಲ್ಲಿ ಮಳೆಕೊಲ್ಯು ಪ್ರಾತ್ಯಕ್ಷಿಕೆ ಸಭೆಯಲ್ಲಿ ನಡೆಸಲಾಯಿತು. ಪಂಚಾಯತ್‌ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ಪರವಾನಿಗೆಯನ್ನು ಮುಂದೆ ನೀಡುವಾಗ ಮಳೆಕೊಯ್ಲು ಕಡ್ಡಾಯವಾಗಿದೆ ಆದ್ದರಿಂದ ಪ್ರತೀಯೋರ್ವರು ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳ ಬೇಕು ಎಂದು ಪಿಡಿಒ ಹೇಳಿದರು.

ಅಪಾಯಕಾರಿ ವಿದ್ಯುತ್‌ ತಂತಿ
ಯರ್ಲಪಾಡಿ ಸಂಯುಕ್ತ ಪ್ರೌಢ ಶಾಲೆ, ಅಂಗನವಾಡಿ, ಸಮೀಪದಲ್ಲಿಯೇ ಅಪಾಯಕಾರಿಯಾಗಿ ವಿದ್ಯುತ್‌ ತಂತಿ ಗಳಿದ್ದು ಇದನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೆ ಅರ್ಬಿ ಪ್ರದೇಶದಲ್ಲಿ ವಿದ್ಯುತ್‌ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಮೆಸ್ಕಾಂ ಅಧಿಕಾರಿಯವರ ಗಮನ ಸೆಳೆಯಲಾಯಿತು.

ಅಸಮರ್ಪಕ ಮೊಟ್ಟೆ ವಿತರಣೆ
ಸರಕಾರವು ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡಲು ಆದೇಶ ನೀಡಿದ್ದರೂ ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆಯನ್ನು ಬೇಯಿಸಿ ಕೊಡದೇ ಮಕ್ಕಳ ಮನೆಗೆ ಕಳುಹಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಹೇಳಿದರು.

ರಸ್ತೆಯಲ್ಲಿಯೇ ನೀರು
ಪಂಚಾಯತ್‌ ಸಮೀಪದ ಮುಖ್ಯ ರಸ್ತೆಯಲ್ಲಿಯೇ ಮಳೆ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು. ಮೋರಿಯಲ್ಲಿ ಹೂಳು ತುಂಬಿ ಮಳೆ ನೀರು ರಸ್ತೆಯಲ್ಲಿಯೇ ಶೇಖರಣೆಗೊಳ್ಳುತ್ತಿದೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದರು. ಒಂದೆರಡು ದಿನದಲ್ಲಿ ಹೂಳನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅಧ್ಯಕ್ಷ ವಸಂತ ಕುಲಾಲ್‌ ಹೇಳಿದರು.

ಅಂಗನವಾಡಿ ಶಿಥಿಲಾವಸ್ಥೆ
ಜಾರ್ಕಳ ಅಂಗನವಾಡಿಯಲ್ಲಿ ಸುಮಾರು 40ರಷ್ಟು ಮಕ್ಕಳಿದ್ದು ಕಟ್ಟಡ ಮಾತ್ರ ಶಿಥಿಲಾವಸ್ಥೆಯಲ್ಲಿದೆ. ಅಲ್ಲದೆ ಕಟ್ಟಡವು ವಿಶಾಲವಾಗಿರದೆ ಇಕ್ಕಟ್ಟಿನಿಂದ ಕೂಡಿದೆ ಎಂದು ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯವರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next