ಇಬ್ಬರು ಹೊಂಚು ಹಾಕಿ ಎನ್.ಸಿ.ಸಿ. ಸರ್ ಟಾಯ್ಲೆಟ್‌ಗೆ ಹೋಗುವುದನ್ನೇ ಕಾದು ಕುಳಿತಿದ್ದರು. ಸರ್ ಒಳಗೆ ಹೋಗಿದ್ದನ್ನು ನೋಡಿ ಹೊರಬದಿಯ ವೆಂಟಿಲೇಷನ್‌ನಿಂದ ಬೆಕ್ಕನ್ನೆತ್ತಿ ಟಾಯ್ಲೆಟ್ ಒಳಗೆಸೆದಿದ್ದರು…
ಆಗ ನಾನು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದೆ. ಪ್ರಿನ್ಸಿಪಾಲ್ ಎಂ.ಪಿ.ಎಲ್ ಶಾಸ್ತ್ರಿಯವರ ದಕ್ಷ ಆಡಳಿತ, ಪ್ರೊಫೆಸರ್‌ಗಳ ಮಾರ್ಗದರ್ಶನ, ಸೂಕ್ತ ಪ್ರವಚನ, ಸುಸಜ್ಜಿತ ಲ್ಯಾಬ್, ಶಿಸ್ತಿನ ವಾತಾವರಣವಿದ್ದುದರಿಂದ ನಮ್ಮ ಕಾಲೇಜು ಬೆಂಗಳೂರಿನಲ್ಲಿ 2ನೇ ಸ್ಥಾನ ಗಳಿಸಿತ್ತು. ನಮ್ಮದೊಂದು ಕಿರಿಕ್ ಪಾರ್ಟಿ ಇತ್ತು. ಓದಿನಲ್ಲಿ ಮುಕ್ಕಾಲಾದರೂ ಚೇಷ್ಟೆಯಲ್ಲಿ ನೂರ್ಪಾಲು!
ಕಾಲೇಜ್ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಗೋ, ಕೆಟ್ಟ ಕುತೂಹಲಕ್ಕೋ ನಾನೂ ಆಗಾಗ ಅವರ ಕಲ್ಯಾಣ ಗುಣಗಳ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಿದ್ದೆ. ನಮ್ಮ ಎನ್‌ಸಿಸಿ ಮಾಸ್ತರರು ಕೊಂಚ ಸ್ಟ್ರಿಕುr. ನೀಟಾಗಿ ಪರೇಡ್ ನಡೆಯದಿದ್ದರೆ ಸಿಟ್ಟಾಗುತ್ತಿದ್ದರು. ಒಂದು ದಿನ ಪರೇಡ್‌ನಲ್ಲಿ ನಮ್ಮ ಪಾರ್ಟಿಯ ಇಬ್ಬರು ಪುನಃ ಪುನಃ ತಪ್ಪು ಹೆಜ್ಜೆ ಹಾಕಿದರು. ಸಣ್ಣಪುಟ್ಟದ್ದಕ್ಕೂ ಮಾಸ್ತರರದು ದಂಡಂ ದಶಗುಣಂ ಭವೇತ್ ಸಿದ್ಧಾಂತ.
ಇಬ್ಬರಿಗೂ ಮೊಣಕಾಲುಗಂಟಿಗೆ ದೊಣ್ಣೆಯಿಂದ ಬಾರಿಸಿ ಮತ್ತೆ ಮತ್ತೆ ಪರೇಡ್ ಮಾಡಿಸಿದರು. ಎಲ್ಲರ ಮುಂದೆ ಪೆಟ್ಟು ತಿಂದ ನಮ್ಮ ಹೀರೋದ್ವಯರಿಗೆ ಮಾಸ್ತರರ ಮೇಲೆ ತುಂಬಾ ಕೋಪ ಬಂತು. ಎನ್.ಸಿ.ಸಿ. ಸರ್‌ಗೆ ಏನಾದರೂ ಕಿರಿಕ್ ಮಾಡಿ, ಈಗ ಆಗಿರುವ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಎಲ್ಲರೂ ಸೇರಿ ಒಂದು ಐಡಿಯಾ ಮಾಡಿದರು. ಮಾಸ್ತರರಿಗೆ ಬೆಕ್ಕು ಅಂದ್ರೆ ಭಯ ಅನ್ನೋದು ಗೊತ್ತಿತ್ತು.
ಅದನ್ನೇ ಅಸ್ತ್ರವಾಗಿಸಿಕೊಂಡು ಒಂದು ಬೆಕ್ಕನ್ನು ಹಿಡಿದು ತಂದರು. ಸ್ಟಾಫ್ರೂಮ್‌ಗೆ ಹೊಂದಿಕೊಂಡಂತಿದ್ದ ಟಾಯ್ಲೆಟ್‌ಗೆ ಹೊರಗಿನಿಂದ ಸಣ್ಣದಾಗಿ ಗಾಳಿಯಾಡಲು ವೆಂಟಿಲೇಷನ್ ಬಿಟ್ಟಿದ್ದರು. ಆಗೆಲ್ಲ ಅದಕ್ಕೆ ಗ್ಲಾಸ್ ಹಾಕುತ್ತಿರಲಿಲ್ಲ. ನಮ್ಮ ಕಿರಿಕ್‌ಪಾರ್ಟಿಯ ಇಬ್ಬರು ಹೊಂಚು ಹಾಕಿ ಎನ್.ಸಿ.ಸಿ. ಸರ್ ಟಾಯ್ಲೆಟ್‌ಗೆ ಹೋಗುವುದನ್ನೇ ಕಾದು ಕುಳಿತಿದ್ದರು. ಸರ್ ಒಳಗೆ ಹೋಗಿದ್ದನ್ನು ನೋಡಿ ಹೊರಬದಿಯ ವೆಂಟಿಲೇಷನ್‌ನಿಂದ ಬೆಕ್ಕನ್ನೆತ್ತಿ ಟಾಯ್ಲೆಟ್ ಒಳಗೆಸೆದಿದ್ದರು.
ಮರುಕ್ಷಣದಲ್ಲಿ ಸರ್ ಚೀರಾಟ, ಹೋರಾಟದೊಂದಿಗೆ ಪ್ಯಾಂಟ್ ಏರಿಸಿಕೊಂಡು ಎದ್ದೆನೋ ಬಿದ್ದೆನೋ ಎಂದು ಹೊರಗೋಡಿ ಬಂದರಂತೆ. ಪುಣ್ಯಕ್ಕೆ ಈ ಮಹತ್ಕಾರ್ಯ ನಡೆದ ದಿನ ನಾನು ಕಾಲೇಜಿಗೆ ಹೋಗಿರಲಿಲ್ಲ. ಮಾಸ್ತರರು ತಕ್ಷಣ ಪತ್ತೇದಾರ ಪುರುಷೋತ್ತಮನಂತೆ ಅಪರಾಧಿಗಳ ಶೋಧನೆಯಲ್ಲಿ ತೊಡಗಿದರು. ಈ ಮಹತ್ಕಾರ್ಯವನ್ನು ಕಣ್ಣಾರೆ ನೋಡಿದ್ದ ತೋಟದ ಮಾಲಿ ಗುಟ್ಟಾಗಿ ಅವರಿಗೆ ವಿಷಯ ತಿಳಿಸಿಬಿಡಬೇಕೇ? ಮರುದಿನ ನಮ್ಮ ಕಿರಿಕ್ ಪಾರ್ಟಿಯ ಆ ಇಬ್ಬರಿಗೂ ಮಧ್ಯಾಹ್ನ 12 ಗಂಟೆಯ ಬಿಸಿಲಿನಲ್ಲಿ ಕಾಲೇಜು ಮೈದಾನಕ್ಕೆ 50 ಸುತ್ತು ಓಡುವ ಶಿಕ್ಷೆ ಜಾರಿಯಾಗಿತ್ತು!
* ಕೆ. ಶ್ರೀನಿವಾಸರಾವ್ ಹರಪನಹಳ್ಳಿ