Advertisement

ಜೆಡಿಎಸ್‌ ಕೋಟೆಯಲ್ಲಿ ಆಪರೇಷನ್‌ ಕಮಲ ಭೀತಿ?

03:42 PM Apr 26, 2019 | Team Udayavani |

ಮಂಡ್ಯ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪರ್ವ ಮುಗಿದ ಬಳಿಕ ಆಪರೇಷನ್‌ ಕಮಲ ಪ್ರಕ್ರಿಯೆ ಪುನರಾರಂಭಗೊಂಡಿದ್ದು, ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಕೂಡ ಆಪರೇಷನ್‌ ಕಮಲ ಭೀತಿ ಕಾಣಿಸಿಕೊಂಡಿದೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರನ ವಿರುದ್ಧ ಪ್ರಸಿದ್ಧ ಚಿತ್ರನಟ ಅಂಬರೀಶ್‌ ಪತ್ನಿ ಸುಮಲತಾ ಸ್ಪರ್ಧೆಯ ಕಾರಣಕ್ಕಾಗಿಯೇ ರಾಜ್ಯದಲ್ಲೇ ಹೈವೋಲೆrೕಜ್‌ ಕದನವಾಗಿ ಮಾರ್ಪ ಟ್ಟಿದ್ದ ಮಂಡ್ಯ ಕ್ಷೇತ್ರದಲ್ಲಿ ಈಗ ಚುನಾವಣೆಯ ನಂತರ ಮತ್ತೆ ಆಪರೇಷನ್‌ ಕಮಲದ ಗುಸುಗುಸು ಶುರುವಾಗಿದೆ.

ನಿಖೀಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಜಿದ್ದಾಜಿದ್ದಿನ ಹೋರಾಟವೇ ನಡೆದಿದ್ದು, ಸಾರ್ವಜನಿಕವಾಗಿ ಇನ್ನೂ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪದಚ್ಯುತಿಯ ಹೋರಾಟವನ್ನು ಬಿಜೆಪಿ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಮಂಡ್ಯದ ಜೆಡಿಎಸ್‌ ಶಾಸಕರು ಯಾರಾದರೂ ಒಂದಿಬ್ಬರು ಶಾಸಕರು ಕೈ ಜೋಡಿಸುತ್ತಾರಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದೆ.

ನಿಖೀಲ್ ಸ್ಪರ್ಧೆಯ ಕಾರಣಕ್ಕಾಗಿಯೇ ಚುನಾವಣಾ ಸಂದರ್ಭದಲ್ಲಿ ಒಂದು ವಾರಕ್ಕೂ ಹೆಚ್ಚಿನ ಕಾಲ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಸಂಚಲನವನ್ನು ಉಂಟು ಮಾಡಿದ್ದರು. ಕೆಲವು ಶಾಸಕರ ಅಸಮ್ಮತಿಯ ನಡುವೆಯೂ ನಿಖೀಲ್ ಸ್ಪರ್ಧೆಗೆ ಉತ್ಸಾಹ ತೋರಿದ್ದು ಚುನಾವಣೆಯ ನಂತರ ಜೆಡಿಎಸ್‌ ಪಕ್ಷದ ಮೇಲೆ ಪ್ರಭಾವ ಬೀರಲಿದೆಯೇ ಎಂಬುದು ಕೂಡ ಮತ್ತೂಂದು ಪ್ರಶ್ನೆಯಾಗಿದೆ.

ಸ್ಥೈರ್ಯದ ರಾಜಕಾರಣ: ಈಗಾಗಲೇ ಜೆಡಿಎಸ್‌ ವರಿಷ್ಠರ ನಿಲುವುಗಳ ವಿರುದ್ಧ ಸಿಡಿದು ಪಕ್ಷ ತೊರೆದಿರುವ ಮಾಜಿ ಶಾಸಕರಾದ ಎನ್‌.ಚಲುವರಾಯಸ್ವಾಮಿ ಮತ್ತು ರಮೇಶ್‌ ಬಂಡಿಸಿದ್ದೇಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಚುನಾವಣಾ ಚಂಡಮಾರುತದಲ್ಲಿ ಕೊಚ್ಚಿ ಹೋಗಿದ್ದರೂ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆಯಿಂದಾಗಿ ಮತ್ತೂಮ್ಮೆ ಸ್ಥೈರ್ಯದ ರಾಜಕಾರಣ ನಡೆಸಿದ್ದು, ಒಂದು ವೇಳೆ ಸುಮಲತಾ ಗೆಲುವು ಸಾಧಿಸಿದರೆ ಜಿಲ್ಲೆಯಲ್ಲಿ ಕೂಡ ರಾಜಕೀಯವಾಗಿ ಕೆಲವು ಮಹತ್ವದ ಬದಲಾವಣೆಗಳು ಕಂಡುಬರುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

Advertisement

ವರಿಷ್ಠರೊಡನೆ ಶೀತಲಸಮರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪರವಾದ ಅಲೆ ಇದ್ದ ಕಾರಣದಿಂದಾಗಿ ಪಕ್ಷದ ಶಾಸಕರು ವರಿಷ್ಠರ ನಿಲುವಿಗೆ ಬದ್ಧತೆಯನ್ನು ಪ್ರದರ್ಶಿಸಿದ್ದರು.

ಪಕ್ಷದ ನಿಲುವನ್ನು ಧಿಕ್ಕರಿಸಿ ಹೊರನಡೆದಿರುವ ಚಲುವರಾಯಸ್ವಾಮಿ ಮತ್ತು ರಮೇಶ್‌ಬಾಬು ಅವರಿಗೆ ಆದಂತಹ ಸೋಲಿನ ಶಿಕ್ಷೆ ನಮಗೂ ಆಗಬಹುದು ಎಂಬ ಭಯ ಜೆಡಿಎಸ್‌ ಶಾಸಕರು ಹೊಂದಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ವಿರೋಧಿ ಅಲೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ವರಿಷ್ಠರೊಡನೆ ಶೀತಲ ಸಮರ ನಡೆಸುತ್ತಿರುವ ಕೆಲವು ಜೆಡಿಎಸ್‌ ಶಾಸಕರು ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷಾಂತರ ತೀರ್ಮಾನ ತೆಗೆದುಕೊಳ್ಳಬಹುದೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ.

ದೇವೇಗೌಡರ ಮಗಳು ಅನಸೂಯ ಎಂಟ್ರಿಯಿಂದ ಅಸಮಾಧಾನ:
ಪ್ರಸ್ತುತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೂಡ ದೇವೇಗೌಡರ ಪುತ್ರಿ ಅನಸೂಯ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ನಿರ್ವಹಿಸಿದ್ದು ಕೂಡ ನಾರಾಯಣಗೌಡ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೂಂದೆಡೆ ಮುಂದಿನ ವಿಧಾನ ಸಭಾ ಚುನಾವಣಾ ವೇಳೆ ದೇವೇಗೌಡರ ಕುಟುಂಬದ ಸದಸ್ಯರೊಬ್ಬರು ಕೆ.ಆರ್‌.ಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆಂಬ ದಟ್ಟ ವದಂತಿ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ನಾರಾಯಣಗೌಡರಿಗೆ ಜೆಡಿಎಸ್‌ನಲ್ಲಿ ತಮ್ಮ ರಾಜಕೀಯ ಮುಂದುವರಿಸುವುದು ಸವಾಲಾಗಿ ಪರಿಣಮಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕೆ.ಸಿ.ನಾರಾಯಣಗೌಡರಿಗೆ ಜೆಡಿಎಸ್‌ ವರಿಷ್ಠರು ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡಲಿಲ್ಲ. ಎರಡನೇ ಹಂತದಲ್ಲಿ ಘೋಷಣೆ ಮಾಡಿದರಾದರೂ, ಮಧ್ಯಂತರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಹೆಸರನ್ನು ದೇವೇಗೌಡರ ಪುತ್ರಿ ಅನಸೂಯ ಒತ್ತಾಸೆ ಮೇರೆಗೆ ತೇಲಿ ಬಿಡಲಾಗಿತ್ತು. ಈ ಸಂದರ್ಭದಲ್ಲಿ ನಾರಾಯಣಗೌಡರು ಮತ್ತು ದೇವೇಗೌಡರ ಕುಟುಂಬದ ನಡುವೆ ಚುನಾವಣಾ ಸಮರವೇ ನಡೆಯಿತು. ಆ ಬಳಿಕ ಅಂತಿಮವಾಗಿ ಜೆಡಿಎಸ್‌ ವರಿಷ§ರು ನಾರಾಯಣಗೌಡರನ್ನೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು.
ಬಿಜೆಪಿ ಹೊಸ್ತಿಲಲ್ಲಿ ನಾರಾಯಣಗೌಡ ?

ಚುನಾವಣಾ ಪೂರ್ವದಲ್ಲಿ ಆಪರೇಷನ್‌ ಕಮಲ ಬಿರುಸಾಗಿ ನಡೆದಿದ್ದು, ಆ ಸಂದರ್ಭದಲ್ಲಿ ಕೆ.ಆರ್‌.ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ ಅವರು ಬಿಜೆಪಿಯ ಹೊಸ್ತಿಲಲ್ಲಿದ್ದಾರೆಂಬ ಮಾತುಗಳು ದಟ್ಟವಾಗಿ ಕೇಳಿಬಂದವು. ಬಜೆಟ್ ಅಧಿವೇಶನಕ್ಕೂ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕ್ಷೇತ್ರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಅತೃಪ್ತಿಯನ್ನು ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದರು ಎಂದು ಹೇಳಲಾಗು ತ್ತಿದ್ದು, ಈಗ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ನಾರಾಯಣ ಗೌಡರ ನಿಲುವು ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅನಿವಾರ್ಯ ಹೊಂದಾಣಿಕೆ:

ಈ ಎಲ್ಲ ಬೆಳವಣಿಗೆಗಳ ನಂತರವೂ ದೇವೇಗೌಡರ ಕುಟುಂಬದೊಡನೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡು ಮುಂದುವರಿ ಯುತ್ತಿರುವ ಕೆ.ಆರ್‌.ಪೇಟೆ ಶಾಸಕ ನಾರಾಯಣ ಗೌಡರನ್ನು ಬಿಜೆಪಿ ಗುರಿಯಾಗಿಸಿಕೊಂಡಿದ್ದು, ಇವರ ಜೊತೆಗೆ ಜಿಲ್ಲೆಯ ಜೆಡಿಎಸ್‌ನ ಮತ್ತೋರ್ವ ಶಾಸಕರನ್ನೂ ಸೆಳೆಯುವ ಸಾಹಸಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next