ದೇರಳಕಟ್ಟೆ: ಮಂಗಳೂರು ನಗರದಲ್ಲಿ ಮೊತ್ತ ಮೊದಲ ಬಾರಿಗೆ ವಯಸ್ಕ ಲಿಂಪೋಮ ರೋಗಿಗೆ ರಕ್ತ ರಹಿತ ಮೂಳೆ ಮಜ್ಜೆಯ ಕಸಿಯನ್ನು ದೇರಳಕಟ್ಟೆ ಯೇನಪೊಯ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಕ್ಯಾನ್ಸರ್ ತಜ್ಞ ಡಾ| ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಯೇನಪೊಯ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಾದ 67 ವಯಸ್ಸಿನ ರಕ್ತ ಕ್ಯಾನ್ಸರ್ (ಲಿಂಪೋಮ)ನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕಿಮೋಥೆರಪಿಗೆ ಒಳಪಡಿಸಿದಾಗ ಅವರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಅನಂತರದ ದಿನಗಳಲ್ಲಿ ಕ್ಯಾನ್ಸರ್ ರೋಗಿಯ ಮೂಳೆಯ ಕಾಂಡಕೋಶಗಳನ್ನು ಸಂಗ್ರಹಿಸಿ ಮತ್ತೆ ಅವರಿಗೆ ವರ್ಗಾವಣೆ ಮಾಡಲಾಯಿತು.
65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮೂಳೆ ಮಜ್ಜೆಯ ಕಸಿ ಮಾಡುವುದೇ ಅತೀ ಅಪರೂಪವಾಗಿದ್ದು,ರಕ್ತರಹಿತವಾಗಿ ಮಾಡುವುದು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಸವಾಲಾಗಿದೆ. ಹೆಚ್ಚಿನ ರೋಗಿಗಳು ಧಾರ್ಮಿಕ ಉದ್ದೇಶದಿಂದ ಅಥವಾ ಸೋಂಕು ತಡೆಗಟ್ಟಲು ರಕ್ತ ರಹಿತ ಮೂಳೆ ಮಜ್ಜೆಯ ಕಸಿಯನ್ನು ಮಾಡಲು ಬೇಡಿಕೆ ಸಲ್ಲಿಸುತ್ತಾರೆ.
ವಯಸ್ಕ ಲಿಂಫೋಮ ರೋಗಿಗೆ ರಕ್ತ ರಹಿತ ಮೂಳೆ ಮಜ್ಜೆಯ ಕಸಿಯನ್ನು ಜಗತ್ತಿನ ಆಯ್ದ ಸ್ಥಳಗಳಲ್ಲಿ ಮಾತ್ರ
ಮಾಡಲಾಗುತ್ತಿದೆ. ಅದರಲ್ಲಿಯೂ ಮಂಗಳೂರಿನಲ್ಲಿ ಇದು ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಯೇನಪೊಯ ವೈದ್ಯಕೀಯ ಕಾಲೇಜಿನ ಪ್ರಕಟನೆ ತಿಳಿಸಿದೆ.