Advertisement

ಕಾರ್ಕಳ ಗ್ರಾಮಾಂತರ ಠಾಣೆ ನಗರದಲ್ಲಿ ಕಾರ್ಯಾಚರಣೆ

03:42 PM Feb 03, 2023 | Team Udayavani |

ಕಾರ್ಕಳ: ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ, ನಗರ ಠಾಣೆ, ಗ್ರಾಮಾಂತರ ಈ ಮೂರು ಠಾಣೆಗಳು ನಗರದಲ್ಲಿ ಒಂದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಮಾಂತರ ಠಾಣೆ ಗ್ರಾಮೀಣದಲ್ಲಿರದೆ ನಗರದಲ್ಲಿರುವುದರಿಂದ ಗ್ರಾಮೀಣ ಜನರಿಗೆ ಠಾಣೆ ಸೇವೆ ದೂರವಾದರೆ, ಪೊಲೀಸರಿಗೂ ಓಡಾಟಕ್ಕೆ ದೂರವಾಗುತ್ತಿದೆ. ನಗರದಿಂದ ಗ್ರಾಮಾಂತರ ಠಾಣೆಯನ್ನು ಬೇರ್ಪಡಿಸಿ ಗ್ರಾಮಾಂತರ ಭಾಗಕ್ಕೆ ಸ್ಥಳಾಂತರಿಸಿದಲ್ಲಿ ಗ್ರಾಮೀಣ ಜನತೆಗೂ ಪೊಲೀಸರಿಗೂ ಅನುಕೂಲವಾಗಲಿದೆ.

Advertisement

ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗಡಿಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಯಾವುದೇ ಅಪರಾಧ, ಅವಘಡ ಘಟನೆಗಳು ಸಂಭವಿಸಿದರೂ ಅಲ್ಲಿಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಿಂದಲೇ ಪೊಲೀಸರು ತೆರಳಬೇಕು. ದೂರದಲ್ಲಿರುವ ಮಾಳ, ಹೊಸ್ಮಾರು, ಬೆಳ್ಮಣ್‌ ಈ ಪ್ರದೇಶಗಳಿಗೆ ತೆರಳಲು ಸಾಕಷ್ಟು ಸಮಯ ಹಿಡಿಯುತ್ತದೆ. ನಗರದಿಂದ ದೂರವಿರುವ ಠಾಣಾ ಸರಹದ್ದಿನ ಪ್ರದೇಶಗಳು ಕಾಡಿನಿಂದ ಆವೃತ ಪ್ರದೇಶಗಳಾಗಿವೆ. ರಾತ್ರಿ ಹೊತ್ತಲ್ಲಿ ಅನಾಹುತಗಳು
ನಡೆದಲ್ಲಿ ತತ್‌ಕ್ಷಣಕ್ಕೆ ತುರ್ತಾಗಿ ಅಲ್ಲಿಗೆ ತಲುಪಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. 20ರಿಂದ30 ಕಿ.ಮೀ. ದೂರದವರೆಗೆ ಕ್ರಮಿಸಿ ಸ್ಪಂದಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಗುತ್ತದೆ.

ಪ್ರಸ್ತಾವ ಮೂಲೆಗುಂಪು
ಕಾರ್ಕಳ ತಾಲೂಕಿನ ಮಾಳ ಪರಿಸರದಲ್ಲಿ ನಕ್ಸಲ್‌ ಚಟುವಟಕೆಗಳು ಹೆಚ್ಚಿತ್ತು. ಅಂದು ಬಜಗೋಳಿಯಲ್ಲಿ ಹೊಸ ಪೊಲೀಸ್‌ ಠಾಣೆ ತೆರೆಯುವುದು. ಕಾರ್ಕಳದ ಪೊಲೀಸ್‌ ಠಾಣೆಯನ್ನು ಬೆಳ್ಮಣ್‌ಗೆ ಸ್ಥಳಾಂತರಿಸುವುದು ಎಂದು ಪ್ರಸ್ತಾವನೆಯಲ್ಲಿತ್ತು. ಬಳಿಕ ಅದು ಮೂಲೆಗುಂಪಾಗಿದೆ. ಹೊಸ್ಮಾರಿನಲ್ಲಿ ಚೆಕ್‌ ಪೋಸ್ಟ್‌ ಇದೆ. ಕಟ್ಟಡವೂ ಇದೆ. ಸಿಬಂದಿಯಿಲ್ಲ.

ಅಲ್ಲಿ ಹೊರಠಾಣೆ ತೆರೆಯುವ ಪ್ರಸ್ತಾವ ಈ ಹಿಂದೆ ಇತ್ತು. ಹೊರಠಾಣೆ ತೆರೆದಲ್ಲಿ ಅಲ್ಲಿಗೆ ಓರ್ವ ಎಎಸ್‌ಐ, 3ರಿಂದ 4 ಹೆಡ್‌ಕಾನ್‌ಸ್ಟೆಬಲ್‌, 5ರಿಂದ 6 ಕಾನ್‌ಸ್ಟೆಬಲ್‌ ಹುದ್ದೆ ದೊರಕುತ್ತದೆ. ಚೆಕ್‌ ಪೋಸ್ಟ್‌ ಇರುವಲ್ಲಿಯೇ ಕಟ್ಟಡ ಮೇಲ್ದರ್ಜೆಗೇರಿಸಿ ಹೊರಠಾಣೆ ತೆರೆಯುವುದಕ್ಕೂ ಅವಕಾಶವಿದೆ.

ಸಚಿವರ ಮೇಲೆ ಭರವಸೆ
ಕಾರ್ಕಳ ಕ್ಷೇತ್ರ ಶರವೇಗದಲ್ಲಿ ಎಲ್ಲ ರಂಗದಲ್ಲೂ ಬೆಳೆದಿದೆ ಹಾಗೂ ಬೆಳೆಯುತ್ತಿದೆ. ಜನದಟ್ಟಣೆ ಅಧಿಕವಾಗುತ್ತಿದೆ. ನಗರ, ಹಳ್ಳಿಗಳಲ್ಲಿ ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ನಗರ, ಗ್ರಾಮಾಂತರ ಪ್ರತ್ಯೇಕ ಕಡೆ ಪೊಲೀಸ್‌ ಠಾಣೆ ಕಾರ್ಯಾಚರಿಸುವುದು ಅಗತ್ಯವೆನಿಸಿದೆ. ಕ್ಷೇತ್ರದ ಶಾಸಕರು ಸರಕಾರದ ಮಹತ್ವ ಸ್ಥಾನ ಪಡೆದು ಸಚಿವರಾಗಿದ್ದಾರೆ. ನಗರದಲ್ಲಿರುವ ಗ್ರಾಮಾಂತರ ಠಾಣೆಯನ್ನು ಗ್ರಾಮಾಂತರಕ್ಕೆ ಸ್ಥಳಾಂತರಿಸುವುದು, ಬಜಗೋಳಿಗೆ ಹೊರಠಾಣೆ ತೆರೆಯುವ ಕಾರ್ಯ ಅವರಿಂದ ಸಾಧ್ಯವಾಗುವುದು ಎನ್ನುವ ನಂಬಿಕೆ ಇಲ್ಲಿನ ಪೊಲೀಸರು, ನಾಗರಿಕರದ್ದಾಗಿದೆ.

Advertisement

ಯಾವೆಲ್ಲ ಗ್ರಾಮಗಳು ಸರಹದ್ದಿನಲ್ಲಿವೆ?
ಕಾರ್ಕಳ ನಗರ ಠಾಣೆಗೆ 11 ಗ್ರಾಮಗಳು ಒಳಪಡುತ್ತವೆ. ಗ್ರಾಮಾಂತರ ಠಾಣೆಗೆ 18 ಗ್ರಾಮಗಳು ಸೇರುತ್ತವೆ. ಕಲ್ಯಾ, ನಂದಳಿಕೆ, ಕೆದಿಂಜೆ, ಬೋಳ, ನಿಟ್ಟೆ, ಕಾಂತಾವರ, ದುರ್ಗ, ಮುಡಾರು, ನಲ್ಲೂರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಸೂಡ, ಬೆಳ್ಮಣ್‌, ಮುಲ್ಲಡ್ಕ, ಮುಂಡ್ಕೂರು, ಇನ್ನಾ, ಬೆಳುವಾಯಿ ಈ ಗ್ರಾಮಗಳು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿವೆ. ಗ್ರಾಮಾಂತರ ಠಾಣೆಯನ್ನು ನಗರದಿಂದ ಬೇರ್ಪಡಿಸಿ ಈ ಮೇಲಿನ ಒಂದು ಕಡೆಗೆ ಸ್ಥಳಾಂತರಿಸಿದಲ್ಲಿ ಗ್ರಾಮೀಣ ಜನತೆಗೆ ಅನುಕೂಲವಾಗುವುದರ ಜತೆಗೆ ಅಪರಾಧ ತಡೆಗೂ ಬಲ ಸಿಗುತ್ತದೆ.

ಇರುವುದೆಲ್ಲವ ಬಿಟ್ಟು
ಇದ್ಯಾಕೆ? ಕಾರ್ಕಳ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸಿ ಇತ್ತೀಚೆಗಷ್ಟೆ ಸರಕಾರ ಆದೇಶ ಹೊರಡಿಸಿದೆ. ನಗರ ಠಾಣೆಗೆ ಠಾಣಾಧಿಕಾರಿಯಾಗಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ನೇಮಕವಾಲಿದ್ದಾರೆ. ವರ್ಷಕ್ಕೆ 300ಕ್ಕೂ ಅಧಿಕ ಪ್ರಕರಣ ದಾಖಲಾಗುವ ಬ್ರಹ್ಮಾವರ, ಬೈಂದೂರು ಹೊರತಾಗಿ ವರ್ಷಕ್ಕೆ 150 ಪ್ರಕರಣ ದಾಖಲಾಗುವ ಕಾರ್ಕಳ ನಗರ ಠಾಣೆಯನ್ನು ಸರಕಾರ ಮೇಲ್ದರ್ಜೆಗೇರಿಸಿದೆ. ವೃತ್ತನಿರೀಕ್ಷಕರ ಕಚೇರಿ ಠಾಣೆ ಪಕ್ಕದಲ್ಲಿದ್ದು ಅಲ್ಲಿ ಇನ್‌ ಸ್ಪೆಕ್ಟರ್‌ ಇರುವಾಗ ಪ್ರತ್ಯೇಕ ಇನ್‌ಸ್ಪೆಕ್ಟರ್‌ ಯಾಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಪರಿಶೀಲನೆ
ಗ್ರಾಮಾಂತರ ಠಾಣೆ ಹೆಸರಿನಲ್ಲಿಯೇ ಕಟ್ಟಡ ಇದೆ. ಇದೇ ಕಟ್ಟಡದಲ್ಲಿ ವೃತ್ತ ನಿರೀಕ್ಷಕರ ಕಚೇರಿ, ನಗರ ಠಾಣೆ ಕಾರ್ಯಾಚರಿಸುತ್ತಿದೆ. ಅಂದಿನ ಪರಿಸ್ಥಿತಿಗೆ ತಕ್ಕಂತೆ ಈ ವ್ಯವಸ್ಥೆಗಳು ಜಾರಿಗೆ ಬಂದಿರುವ ಸಾಧ್ಯತೆಯಿದೆ. ಗ್ರಾಮೀಣ ಭಾಗಕ್ಕೆ ಸ್ಥಳಾಂತರವಾರುವ ಬಗ್ಗೆ ಈ ಹಿಂದೆ ಏನೆಲ್ಲ ಪ್ರಕ್ರಿಯೆಗಳು ನಡೆದಿವೆ ಎನ್ನುವುದು ತಿಳಿದಿಲ್ಲ. ಸಾಧ್ಯತೆ ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವೆ.
-ನಾಗರಾಜ್‌ ಟಿ.ಡಿ., ವೃತ್ತ ನಿರೀಕ್ಷಕ ಕಾರ್ಕಳ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next