ಗದಗ: ನಗರಸಭೆಯಲ್ಲಿ ಆಪರೇಷನ್ “ಹಸ್ತ’ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಹಾಗೂ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದವರಿಗೆ ಪ್ರವಾಸ ಭಾಗ್ಯ ಕಲ್ಪಿಸಿದೆ.
ಗುರುವಾರ ರಾತ್ರಿ ನಗರದ ಸಂಸದರ ಜನ ಸಂಪರ್ಕ ಕಾರ್ಯಾಲಯದ ಮೂಲಕ ಐಷಾರಾಮಿ ಬಸ್‌ಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಜನರನ್ನು ಮೂರು ದಿನಗಳ ಪ್ರವಾಸಕ್ಕೆ ಕರೆದೊಯ್ಯಲಾಗಿದೆ.
ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಎಂ.ಎಸ್.ಕರಿಗೌಡ್ರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರು ತಲುಪಿರುವ ಬಿಜೆಪಿ ಮುಖಂಡರ ತಂಡ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಬೆಳಗ್ಗೆ 9.20ಕ್ಕೆ ಆಸ್ಸಾಂನ ಗುವಾಹಟಿಗೆ ಪ್ರಯಾಣ ಬೆಳೆಸಿದೆ. ಶನಿವಾರ ಆಸ್ಸಾಂನ ಕಾಮಾಕ್ಯ ದೇವಿ ದರ್ಶನ ಪಡೆಯಲಿದ್ದು, ಬಳಿಕ ರವಿವಾರ ಉತ್ತರ ಭಾರತದ ಹಲವು ಧಾರ್ಮಿಕ ಹಾಗೂ ಪ್ರವಾಸಿ
ತಾಣಗಳಿಗೆ ಭೇಟಿ ನೀಡಲಿದ್ದಾರೆ.
ಆಪರೇಷನ್ “ಹಸ್ತ’ ಆತಂಕ: ಇತ್ತೀಚೆಗೆ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಒಟ್ಟು 35 ವಾರ್ಡ್‌ಗಳ ಪೈಕಿ ಬಿಜೆಪಿ 18, ಕಾಂಗ್ರೆಸ್ 15 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಈ ಪೈಕಿ ಪಕ್ಷೇತರರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಅಲ್ಲದೇ, ಸ್ಥಳೀಯ ಶಾಸಕರ ಮತ ಸೇರಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿ ಸಿದಂತಾಗುತ್ತದೆ.
Related Articles
ಬಿಜೆಪಿಯಿಂದ ಯಾರಾದರೂ ಕಾಂಗ್ರೆಸ್ ಪರ ವಾಲಿದರೆ ಬಿಜೆಪಿಗೆ ಅಧಿಕಾರ ಕೈ ತಪ್ಪಲಿದೆ ಎಂಬ ಆತಂಕವೂ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಇದೇ ಕಾರಣದಿಂದ ಬಿಜೆಪಿ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಚುನಾವಣೆಯಲ್ಲಿ ಪಕ್ಷದ ಪರವಾಗಿ ಶ್ರಮಿಸಿದ ಪ್ರಮುಖರನ್ನು ಖುಷಿಪಡಿಸುವ ಉದ್ದೇಶದಿಂದ ಪ್ರವಾಸ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ನಗರಸಭೆಯನ್ನು ಗೆದ್ದಿರುವ ಸಂಭ್ರಮಾಚರಣೆಗಾಗಿ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆಯೇ ಹೊರತು, ಆಪರೇಷನ್ ಕಾಂಗ್ರೆಸ್ ಆತಂಕದಿಂದಲ್ಲ. ಎಲ್ಲ ಬಿಜೆಪಿ ಸದಸ್ಯರು ಪಕ್ಷದ ಪರವಾಗಿಯೇ ಇದ್ದಾರೆ. ಅವರನ್ನು ಹಿಡಿದುಟ್ಟುಕೊಳ್ಳುವ ಅಗತ್ಯವೂ ಇಲ್ಲ. ಈ ಪ್ರವಾಸಕ್ಕೆ ಪಕ್ಷದಿಂದ ಯಾವುದೇ ರೀತಿಯಲ್ಲಿ ಆರ್ಥಿಕ ನೆರವು ನೀಡಿಲ್ಲ. ಮೂರು ದಿನಗಳ ಪ್ರವಾಸ ಮಾಡಿ ವಾಪಸ್ಸಾಗಲಿದ್ದಾರೆ.
ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ