ಸುಮಾರು 35 ವರ್ಷಗಳ ಹಿಂದೆ ನೂರು ಮಂದಿ ಶ್ರೀಲಂಕಾ ಉಗ್ರರ ಜತೆಗೂಡಿ ಮಾಲ್ಡೀವ್ಸ್ ನ ಒಂದು ಗುಂಪು ಮಾಲೆಯಲ್ಲಿರುವ ಅಧ್ಯಕ್ಷರ ಅರಮನೆಯನ್ನು ವಶಕ್ಕೆ ತೆಗೆದುಕೊಂಡು, ಅಧ್ಯಕ್ಷ ಗಯೂಮ್ ವಿರುದ್ಧ ಕ್ಷಿಪ್ರಕ್ರಾಂತಿಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಭಾರತ “ಆಪರೇಶನ್ ಕ್ಯಾಕ್ಟಸ್” ಕಾರ್ಯಾಚರಣೆ ಮೂಲಕ ಮಾಲ್ಡೀವ್ಸ್ ದ್ವೀಪವನ್ನು ಹೇಗೆ ರಕ್ಷಿಸಿತ್ತು ಎಂಬ ಮಾಹಿತಿ ಇಲ್ಲಿದೆ…
ಮಾಲ್ಡೀವ್ಸ್ ರಕ್ಷಣೆಗೆ ಭಾರತದ ಸೇನಾಪಡೆ!
1988ರ ನವೆಂಬರ್ 3ರಂದು ಸೇನೆಯ ಸೌತ್ ಬ್ಲಾಕ್ ಆಫೀಸ್ ನಿಂದ ಜನರಲ್ ವಿಎನ್ ಶರ್ಮಾ ಅವರು ಹೊರಡಲು ಅನುವಾಗುತ್ತಿದ್ದಂತೆ ದೂರವಾಣಿ ಕರೆಯೊಂದು ಬಂದಿತ್ತು..ಅದು ಬೇರೆ ಯಾರ ಕರೆಯೂ ಅಲ್ಲ ಪ್ರಧಾನಮಂತ್ರಿ ಕಚೇರಿಯ ವಿದೇಶಾಂಗ ಅಧಿಕಾರಿ ರೋನೇನ್ ಸೇನ್ ಅವರದ್ದಾಗಿತ್ತು!
“ಮಾಲ್ಡೀವ್ಸ್ ದ್ವೀಪದಲ್ಲಿ ಎಮರ್ಜೆನ್ಸಿ ಸ್ಥಿತಿ ನಿರ್ಮಾಣವಾಗಿದೆ. ಸರ್, ಮಾಲ್ಡೀವ್ಸ್ ರಾಜಧಾನಿ ಮಾಲೆಯನ್ನು ಕಳೆದ ರಾತ್ರಿ ಸುಮಾರು 100ರಿಂದ 200 ಶ್ರೀಲಂಕಾದ ಉಗ್ರಗಾಮಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಗಯೂಮ್ ತಮ್ಮ ನಿವಾಸದಲ್ಲಿ ಅಡಗಿಕೊಂಡಿದ್ದಾರೆ. ಗಯೂಮ್ ಅರಮನೆ, ಭದ್ರತಾ ಪಡೆಯನ್ನು ಉಗ್ರರು ಮತ್ತು ಮಾಲ್ಡೀವ್ಸ್ ಬಂಡಾಯಗಾರರು ತಮ್ಮ ವಶಕ್ಕೆ ಪಡೆದು, ಹಲವು ಸಚಿವರನ್ನು ಒತ್ತೆಯಾಳನ್ನಾಗಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ನಾವು ತಕ್ಷಣದ ನೆರವು ನೀಡಲು ನಾವು SOS ಅನ್ನು(ಅಂತಾರಾಷ್ಟ್ರೀಯ ಕೋಡ್ ಸಿಗ್ನಲ್) ಹೊಂದಿದ್ದೇವೆ. ಮಾಲ್ಡೀವ್ಸ್ ರಕ್ಷಣೆಗಾಗಿ ನಾವು ಎನ್ ಎಸ್ ಜಿ (ರಾಷ್ಟ್ರೀಯ ಭದ್ರತಾ ಪಡೆ)ಯನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ, ಆದರೆ ಸೇನೆ ನಮಗೆ ನೆರವು ನೀಡಬಹುದೇ? ಎಂದು ಸೇನ್ ಅವರು ಜನರಲ್ ಶರ್ಮಾ ಅವರ ಬಳಿ ಕೇಳಿದ್ದರು.
“ಖಂಡಿತಾ ನಾವು ನೆರವು ನೀಡುತ್ತೇವೆ” ರೋನೇನ್, ತಕ್ಷಣವೇ ನಾವು ಈ ಬಗ್ಗೆ ಕಾರ್ಯತಂತ್ರ ರೂಪಿಸುತ್ತೇವೆ. ನೀವು ನಿರಂತರವಾಗಿ ಸಂಪರ್ಕದಲ್ಲಿರಿ .,..ನಾವು ಕಾರ್ಯಾಚರಣೆ ಬಗ್ಗೆ ಪ್ರಧಾನಿಯವರಿಗೆ ಯಾವಾಗ ಮಾಹಿತಿ ನೀಡಬಹುದು? ಎಂದು ಶರ್ಮಾ ಅವರು ಪ್ರಶ್ನಿಸಿದ್ದರು.
ಮಾತುಕತೆಯ ನಂತರ ಆಪರೇಶನ್ ಕ್ಯಾಕ್ಟಸ್ ಕಾರ್ಯಾಚರಣೆಯ ರೂಪರೇಷೆ ಸಿದ್ಧಗೊಳ್ಳತೊಡಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತದ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆ ಕೈಜೋಡಿಸಿದ್ದವು. ಒಂದು ಸಾವಿರಕ್ಕೂ ಅಧಿಕ ಹವಳದ ದ್ವೀಪಗಳನ್ನು ಹೊಂದಿದ್ದ ಮಾಲ್ಡೀವ್ಸ್ ಕ್ಷಿಪ್ರಕ್ರಾಂತಿಗೆ ಒಳಗಾಗಿತ್ತು…
ಬಂಡುಕೋರ ಉದ್ಯಮಿ ಅಬ್ದುಲ್ಲಾ ಲೂತುಫಿ ನೇತೃತ್ವದ ಮಾಲ್ಡೀವ್ಸ್ ಗುಂಪು ಶ್ರೀಲಂಕಾದ ಪೀಪಲ್ಸ್ ಲಿಬರೇಷನ್ ಆಫ್ ತಮಿಳು ಈಳಂ(PLOTE)ನ ಉಗ್ರರ ಜತೆಗೂಡಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಸರ್ಕಾರವನ್ನು ಉರುಳಿಸಲು ಮುಂದಾಗಿತ್ತು.
ಕ್ರಿಪ್ರಕ್ರಾಂತಿಯಿಂದ ಕಂಗಾಲಾಗಿದ್ದ ಅಧ್ಯಕ್ಷ ಗಯೂಮ್ ಶ್ರೀಲಂಕಾ, ಪಾಕಿಸ್ತಾನ, ಸಿಂಗಾಪೂರ್, ಅಮೆರಿಕ ಮತ್ತು ಯುನೈಟೆಡ್ ಕಿಂಗ್ ಡಮ್ ಗೆ ಸೇನೆಯನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ತಕ್ಷಣದ ನೆರವು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಗಯೂಮ್ ಗೆ ಎಲ್ಲಾ ಭರವಸೆಯೂ ಹೊರಟು ಹೋಗಿತ್ತು. ಕೊನೆಗೆ ಸಂಪರ್ಕಿಸಿದ್ದು ಭಾರತವನ್ನು! ಅಂದು ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ತಕ್ಷಣವೇ ಸ್ಪಂದಿಸಿ ಸೇನಾ ನೆರವು ನೀಡುವುದಾಗಿ ತಿಳಿಸಿತ್ತು.
ಗಯೂಮ್ ಗೆ ಕ್ಷಿಪ್ರಕ್ರಾಂತಿ ಬಿಸಿ ಮುಟ್ಟಿದ್ದೇಕೆ:
1978ರಲ್ಲಿ ಮೌಮೂನ್ ಅಬ್ದುಲ್ ಗಯೂಮ್ ಮಾಲ್ಡೀವ್ಸ್ ನ ಅಧ್ಯಕ್ಷರಾದ ಮೇಲೆ ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಸಂಕಷ್ಟದ ಪರಿಣಾಮ ಹಲವು ಬಾರಿ ಕ್ಷಿಪ್ರಕ್ರಾಂತಿಯ ಬಿಸಿಮುಟ್ಟಿತ್ತು. 1980 ಹಾಗೂ 1983ರಲ್ಲಿಯೂ ಗಯೂಮ್ ಕ್ರಿಪ್ರಕ್ರಾಂತಿ ಎದುರಿಸಿದ್ದು, 1988ರ ನವೆಂಬರ್ 3ರ ಕ್ಷಿಪ್ರಕ್ರಾಂತಿಯಿಂದ ಮಾಲ್ಡೀವ್ಸ್ ನಲುಗಿಹೋಗಿತ್ತು!
ಈ ಕ್ರಿಪ್ರಕ್ರಾಂತಿಯ ಹಿಂದಿದ್ದು ಮಾಲ್ಡೀವ್ಸ್ ಉದ್ಯಮಿ ಅಬ್ದುಲ್ಲಾ ಲೂತುಫಿ ಮತ್ತು ಅಹ್ಮದ್ ನಾಸೀರ್. ಇವರು ಶ್ರೀಲಂಕಾ ಉಗ್ರಗಾಮಿ ಸಂಘಟನೆಗೆ ಹಣ ಪಾವತಿಸುವ ಮೂಲಕ ಕ್ಷಿಪ್ರಕ್ರಾಂತಿಯ ಸಂಚು ರೂಪಿಸಿದ್ದರು. ಸುಮಾರು 100ರಿಂದ 200 ಮಂದಿ ಉಗ್ರರು ಮಾಲೆ ಮೇಲೆ ಏಕಾಏಕಿ ದಾಳಿ ನಡೆಸಿ ಪ್ರಮುಖ ಸರ್ಕಾರಿ ಕಚೇರಿಗಳನ್ನು, ವಿಮಾನ ನಿಲ್ದಾಣ, ಬಂದರು, ಟೆಲಿವಿಷನ್ ಹಾಗೂ ರೇಡಿಯೋ ಸ್ಟೇಷನ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡುಬಿಟ್ಟಿದ್ದರು!
ಲುಂಗಿಧಾರಿ ಬಾಡಿಗೆ ಉಗ್ರರು ಟಿವಿ ಮತ್ತು ರೆಡಿಯೋ ಕೇಂದ್ರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಟೆಲಿಫೋನ್ ಎಕ್ಸ್ ಚೇಂಚ್ ಅನ್ನು ಹತೋಟಿಗೆ ತೆಗೆದುಕೊಳ್ಳುವ ಬಗ್ಗೆ ಅವರು ಯೋಚಿಸಿರಲಿಲ್ಲವಾಗಿತ್ತು…ಇದು ಅವರಿಗೆ ದುಬಾರಿ ಬೆಲೆ ತೆರುವಂತೆ ಮಾಡಿತ್ತು!
ರಣತಂತ್ರ:
ನವೆಂಬರ್ 3ರಂದು ಜನರಲ್ ವಿಎನ್ ಶರ್ಮಾ ಅವರು ಲೆಫ್ಟಿನೆಂಟ್ ಜನರಲ್ ರೋಡ್ರಿಗಸ್ ಅವರನ್ನು ಭೇಟಿಯಾಗಿ ಮಾಲ್ಡೀವ್ಸ್ ನಲ್ಲಿನ ಸನ್ನಿವೇಶದ ಬಗ್ಗೆ ವಿವರಣೆ ನೀಡಿದ್ದರು. ತಕ್ಷಣವೇ ಡೈರೆಕ್ಟರ್ ಜನರಲ್ ಮಿಲಿಟರಿ ಆಪರೇಶನ್ಸ್ (DGMO) ಅನ್ನು ಸಂಪರ್ಕಿಸಿ ವಾಯು ಪಡೆ ಮತ್ತು ನೌಕಾಪಡೆ ಸನ್ನದ್ಧವಾಗಿರುವಂತೆ ಅಲರ್ಟ್ ಸಂದೇಶ ರವಾನಿಸಲಾಗಿತ್ತು.
ಬಳಿಕ ಲೆಫ್ಟಿನೆಂಟ್ ಜನರಲ್ ರೋಡ್ರಿಗಸ್ ಅವರು ಖುದ್ದಾಗಿ ಆಗ್ರಾದಲ್ಲಿನ ಪ್ಯಾರಾಚೂಟ್ ಬ್ರಿಗೇಡ್ ಗೆ ಕರೆ ಮಾಡಿ, ಕೂಡಲೇ ಒಂದು ಪ್ಯಾರಾಚೂಟ್ ಬೆಟಾಲಿಯನ್ ಅನ್ನು ಕ್ಷಿಪ್ರ ಕಾರ್ಯಾಚರಣೆಗಾಗಿ ವಾಯುಪಡೆ ಮೂಲಕ ಮಾಲ್ಡೀವ್ಸ್ ಗೆ ರವಾನಿಸಲು ಸೂಚನೆ ನೀಡಿದ್ದರು.
ರಾಜೀವ್ ಗಾಂಧಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆದಿದ್ದು, ಸಭೆಯಲ್ಲಿ ಭೂ, ವಾಯು ಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು. ನವೆಂಬರ್ 3ರಂದು ಮಧ್ಯಾಹ್ನ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಮಾಲ್ಡೀಮ್ಸ್ ಅಧ್ಯಕ್ಷ ಗಯೂಮ್ ಗೆ ಸೇನಾ ನೆರವು ನೀಡಲು ಅನುಮತಿ ನೀಡಿತ್ತು. ತಕ್ಷಣವೇ ಆಗ್ರಾದಲ್ಲಿರುವ ಪ್ಯಾರಾ ಬ್ರಿಗೇಡ್ ಗೆ ಸಂದೇಶ ರವಾನಿಸಲಾಗಿತ್ತು.
ಆ ಸಂದರ್ಭದಲ್ಲಿ ಬ್ರಿಗೇಡಿಯರ್ ಫಾರೂಕ್ ಬಲ್ಸಾರಾ ನೇತೃತ್ವದಲ್ಲಿ ಪ್ಯಾರಾ ಮಿಲಿಟರಿ ಕಾರ್ಯಾಚರಣೆ ಯೋಜನೆ ಸಿದ್ಧವಾಗತೊಡಗಿತ್ತು. ಏತನ್ಮಧ್ಯೆ ನೌಕಾ ಯುದ್ಧವಿಮಾನಗಳು ಮಾಲ್ಡೀವ್ಸ್ ತಲುಪಿದ್ದು, ಹುಲುಲೇ ಏರ್ ಸ್ಟ್ರಿಪ್ ನಲ್ಲಿನ ಪ್ಯಾರಾ ಲಾಂಚಿಂಗ್ ಪ್ಯಾಡ್ ನ ಫೋಟೋಗಳನ್ನು ರವಾನಿಸಿದ್ದವು. ನವೆಂಬರ್ 3ರ ರಾತ್ರಿ ಭಾರತೀಯ ವಾಯುಪಡೆ ಇಲ್ಯುಶಿನ್ II-76 ವಿಮಾನ ಪ್ಯಾರಾಚೂಟ್ ಬ್ರಿಗೇಡ್ ಪಡೆಯೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಭಾರತೀಯ ಸೇನಾ ಪಡೆ 2,030 ಕಿಲೋ ಮೀಟರ್ ದೂರವಿರುವ ಮಾಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 9ಗಂಟೆಯ ಅವಧಿಯೊಳಗೆ ತಲುಪಿದ್ದವು.
ಭಾರತೀಯ ಸೇನಾಪಡೆ ವಿಮಾನ ನಿಲ್ದಾಣದ ಗಡಿಯಲ್ಲಿ ಸುತ್ತುವರಿದಿದ್ದರು, ಆದರೆ ಯಾವುದೇ ಪ್ರತಿರೋಧ ಕಂಡುಬರಲಿಲ್ಲವಾಗಿತ್ತು. ಯಾಕೆಂದರೆ ಭಾರತೀಯ ಸೇನಾಪಡೆ ಆಗಮಿಸುತ್ತಿದೆ ಎಂಬ ಸುದ್ದಿ ತಿಳಿದು ಲಂಕಾ ಉಗ್ರರು ಕಾಲ್ಕಿತ್ತಿದ್ದರು!
ಲಂಕಾ ಉಗ್ರರು ಮಾಲ್ಡೀವ್ಸ್ ಸಾರಿಗೆ ಸಚಿವ ಅಹ್ಮದ್ ಮುಜುಟುಬಾ ಮತ್ತು ಪತ್ನಿ ಉರ್ಸುಲಾ ಸೇರಿದಂತೆ 27 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಹಡಗಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆಗ ಭಾರತೀಯ ನೌಕಾಪಡೆ ಹಡಗಿನ ಬೆನ್ನಟ್ಟಿತ್ತು. ಐಎನ್ ಎಸ್ ಗೋದಾವರಿ ಮತ್ತು ಐಎನ್ ಎಸ್ ಬೆಟ್ವಾ ಶ್ರೀಲಂಕಾದ ಕರಾವಳಿ ಪ್ರದೇಶದಲ್ಲಿ ಅಪಹೃತ ಹಡಗನ್ನು ತಡೆದಿತ್ತು. ಆ ವೇಳೆಯಲ್ಲಿ ಶ್ರೀಲಂಕಾ ಉಗ್ರರು ಇಬ್ಬರು ಒತ್ತೆಯಾಳುಗಳನ್ನು ಹತ್ಯೆಗೀಡು ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು.
ಇದರಿಂದ ಕುಪಿತಗೊಂಡ ಭಾರತೀಯ ನೌಕಾಪಡೆ ಎಲ್ಲೆಡೆ ಸುತ್ತುವರಿದು ಗುಂಡಿನ ದಾಳಿ ನಡೆಸಲು ಮುಂದಾಗುತ್ತಿದ್ದಂತೆಯೇ ಶ್ರೀಲಂಕಾ ಉಗ್ರರು ಶರಣಾಗಿಬಿಟ್ಟಿದ್ದರು. ಬಂಧಿತ ಉಗ್ರರನ್ನು ಐಎನ್ ಎಸ್ ಗೋದಾವರಿಯಲ್ಲಿ ಕರೆದೊಯ್ಯುವ ಮೂಲಕ ಮಾಲ್ಡೀವ್ಸ್ ನ ಕ್ಷಿಪ್ರಕ್ರಾಂತಿ ಯತ್ನ 16 ಗಂಟೆಯೊಳಗೆ ಅಂತ್ಯಕಂಡಿತ್ತು!
ಭಾರತ- ಮಾಲ್ಡೀವ್ಸ್ ಸ್ನೇಹ:
ಮಾಲ್ಡೀವ್ಸ್ ಅನ್ನು ಕ್ಷಿಪ್ರಕ್ರಾಂತಿಯಿಂದ ಭಾರತೀಯ ಸೇನೆ ರಕ್ಷಿಸಿದ್ದಕ್ಕಾಗಿ ಗಯೂಮ್ ಪ್ರಧಾನಿ ರಾಜೀವ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ದರು. ಅಷ್ಟೇ ಅಲ್ಲ ಭಾರತೀಯ ಪ್ಯಾರಾ ಅಧಿಕಾರಿಗಳು ಹಾಗೂ ಅಗತ್ಯವಿರುವ ಯೋಧರನ್ನು ಮಾಲೆಯಲ್ಲಿ ನಿಯೋಜಿಸುವಂತೆ ಗಯೂಮ್ ರಾಜೀವ್ ಗಾಂಧಿ ಬಳಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಒಪ್ಪಿಗೆ ಕೂಡಾ ನೀಡಿದ್ದರು. ಹೀಗೆ ಆಪರೇಷನ್ ಕ್ಯಾಕ್ಟಸ್ ಕಾರ್ಯಾಚರಣೆ ನಡೆದು ಒಂದು ವರ್ಷದ ನಂತರ ಭಾರತೀಯ ಯೋಧರ ಒಂದು ಪಡೆ ಭಾರತಕ್ಕೆ ವಾಪಸ್ ಆಗಿತ್ತು…ಹೀಗೆ ಎರಡು ದೇಶಗಳ ನಡುವೆ ಸ್ನೇಹ ಬೆಳೆದಿತ್ತು. ಆದರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಲ್ಡೀವ್ಸ್ ನ ಸಚಿವರು ಅವಹೇಳನ ಮಾಡಿದ್ದರ ಪರಿಣಾಮ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಭಾರತ ಕೂಡಾ ಆಕ್ರೋಶ ವ್ಯಕ್ತಪಡಿಸಿತ್ತು. ಭಾರತದ ನೂರಾರು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವಿನ ಸಂಬಂಧ ಹಳಸಿದೆ.