Advertisement

ಆನೆ ಕಾರಿಡಾರ್‌ಗೆ ಗಜಪಡೆ ಸಾಗಹಾಕಲು ಕಾರ್ಯಾಚರಣೆ ಶುರು

04:43 PM Dec 23, 2018 | |

ಕಲಘಟಗಿ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದಲ್ಲದೆ, ರೈತರ ಹೊಲಗಳಿಗೆ ನುಗ್ಗಿ ಬೆಳೆಹಾನಿಗೆ ಕಾರಣವಾಗುತ್ತಿರುವ ಗಜಪಡೆಯನ್ನು ಆನೆ ಕಾರಿಡಾರ್‌ ಪ್ರದೇಶಕ್ಕೆ ಸಾಗಹಾಕಲು ಅರಣ್ಯ ಇಲಾಖೆ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಬೆಳಗ್ಗೆಯಿಂದಲೇ ಕಾರ್ಯಾಚರಣೆ ಶುರುವಾಗಿದ್ದು, ರಾತ್ರಿ 8:30ರ ವೇಳೆಗೆ ಶಾಡಂಬಿ ಕೆರೆಗೆ ಒಂದು ಆನೆ ಆಗಮಿಸಿ ನೀರು ಕುಡಿದಿದ್ದು, ಇನ್ನುಳಿದ ಆನೆಗಳು ಬರಬಹುದೆಂದು ಅಧಿ ಕಾರಿಗಳೂ ಸೇರಿದಂತೆ ಕಾರ್ಯಾಚರಣೆ ತಂಡ ಚಾತಕ ಪಕ್ಷಿಯಂತೆ ಕಾಯುತ್ತಿದೆ.

Advertisement

ಐದು ತಂಡ: ಶಾಡಂಬಿ ಕೆರೆ ದಂಡೆಯಲ್ಲಿಯೇ ಕುಳಿತು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿರುವ ಡಿಎಫ್‌ಒ ಡಿ. ಮಹೇಶಕುಮಾರ ಮಾಧ್ಯಮದವರೊಂದಿಗೆ ಮಾತನಾಡಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ವಲಯಗಳ ನುರಿತ ಇಲಾಖಾ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಕರೆಯಿಸಲಾಗಿದೆ. ತಲಾ 25 ಜನರ ಐದು ತಂಡಗಳನ್ನಾಗಿಸಿ ಕಾಡಾನೆಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬೆಳಗ್ಗೆಯಿಂದ ಕಲಘಟಗಿ ಮತ್ತು ಮುಂಡಗೋಡ ಅರಣ್ಯ ಪ್ರದೇಶಗಳಲ್ಲೆಲ್ಲ ತಂಡ ಗಸ್ತು ತಿರುಗಿದರೂ ಆನೆಗಳ ಸುಳಿವು ಗೋಚರವಾಗಿರಲಿಲ್ಲ. ತಾಜಾ ಲದ್ದಿಗಳು ಮಾತ್ರ ಕಂಡುಬರುತ್ತಲಿದೆ. ತಾಲೂಕಿನ ಅಡವಿಯಂಚಿನ ಜಮೀನು ಸನಿಹ ಹಾಗೂ ಅರಣ್ಯ ಪ್ರದೇಶದ ಕೆರೆ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗುವುದು. ಕಾರ್ಯಾಚರಣೆಯನ್ನು ರವಿವಾರವೂ ಮುಂದುವರಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಹೆಸ್ಕಾಂ, ಪೊಲೀಸ್‌, ಆರೋಗ್ಯ ಇಲಾಖೆ ಸಹಕಾರವನ್ನೂ ಪಡೆಯಲಾಗಿದೆ ಎಂದು ವಿವರಿಸಿದರು.

ಎಲ್ಲ ತಂಡಗಳಿಗೆ ಅವಶ್ಯಕ ಸಿಡಿಮದ್ದುಗಳು, ಝಾಂಜ್‌, ತಮಟೆ, ಫೈರ್‌ ಆರ್ಮ್, ಕತ್ತಿ, ಬಡಿಗೆ ಹಾಗೂ ಟಾರ್ಚ್‌ಗಳನ್ನು ಪೂರೈಸಲಾಗಿದೆ. ರಾತ್ರಿ ಸಮಯದಲ್ಲಿ ಅರಣ್ಯ ಪ್ರದೇಶದ ಅಲ್ಲಲ್ಲಿ ಬೆಂಕಿ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಾಲ್ಗೊಂಡವರು ಯಾರ್ಯಾರು?
ಡಿಎಫ್‌ಒ ಡಿ. ಮಹೇಶಕುಮಾರ, ಎಸಿಎಫ್‌ ಬಿ.ವೈ. ಇಳಿಗೇರ ಮಾರ್ಗದರ್ಶನದಲ್ಲಿ ಆರ್‌ ಎಫ್‌ಒಗಳಾದ ಚಂದ್ರಕಾಂತ ಹಿಪ್ಪರಗಿ, ಬಿ.ಆರ್‌. ಚಿಕ್ಕಮಠ, ವಿಜಯಕುಮಾರ ಗಿರಿತಮ್ಮಣ್ಣನವರ ಮೊದಲಾದವರ ನೇತೃತ್ವದಲ್ಲಿ ಕಾರ್ಯಾಚರಣೆ ಜರುಗುತ್ತಲಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಹಾವೇರಿ ಜಿಲ್ಲೆಯ ಹಾನಗಲ್‌, ಧುಂಡಸಿ ಹಾಗೂ ಉತ್ತರಕನ್ನಡ ಜಿಲ್ಲೆಯ ಸಾಂಬ್ರಾಣಿ, ಮುಂಡಗೋಡ, ಕಿರವತ್ತಿ, ಯಲ್ಲಾಪುರ ಮತ್ತು ಹಳಿಯಾಳ ಅರಣ್ಯ ವಲಯಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next