ಕುಂದಾಪುರ: ಜಿಲ್ಲೆಯ ವಿವಿಧೆಡೆ ಜ್ವರ ಕ್ಲಿನಿಕ್‌ಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದ್ದು ಇತರ ರಾಜ್ಯಗಳಿಂದ ಬರುವವರ ಗಂಟಲ ದ್ರವ ಸಂಗ್ರಹಣೆಗೆ ಸೆಲ್ಕೋ ಸಂಸ್ಥೆ ಒದಗಸಿದ ಕಿಯೋಸ್ಕ್ ಗಳು ಅನುಕೂಲವಾಗಲಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಅವರು ಶುಕ್ರವಾರ ತಾ. ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೋವಿಡ್ ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹದ 15 ಕಿಯೋಸ್ಕ್ ಗಳನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರದಲ್ಲಿ ಆರಂಭಿಸಿದ ಸಂಚಾರಿ ಪರೀಕ್ಷಾ ವಾಹನ ರಾಜ್ಯಾದ್ಯಂತ ಮೆಚ್ಚುಗೆ ಪಡೆದಿದೆ. ಪಾಸಿಟಿವ್ ಹೊಂದಿದವರನ್ನು ಬೇರೆ ಕಡೆ ಕರೆದೊಯ್ಯುವ ಬದಲು ಅವರಿ ದ್ದಲ್ಲಿಯೇ ಮಾದರಿ ಸಂಗ್ರಹಿಸುವ ಕಾರ್ಯ ನಿರ್ವಹಿಸಿದ ಡಾ| ನಾಗಭೂಷಣ ಉಡುಪ ಅವರು ಅಭಿನಂದನಾರ್ಹರು ಎಂದರು. ಕುಂದಾಪುರ, ಬೈಂದೂರಿನಲ್ಲಿ ಅತಿ ಹೆಚ್ಚು 755 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಬಹುತೇಕ ಹತೋಟಿಗೆ ಬಂದಿವೆ. ಸಾವಿರದಷ್ಟು ಪ್ರಕರಣಗಳನ್ನು ನಿಭಾಯಿಸಿದ ವೈದ್ಯರೇ ನಿಜವಾದ ಕೊರೊನಾ ವಾರಿಯರ್ಸ್. ಇಷ್ಟು ಸಂಖ್ಯೆಯ ಪ್ರಕರಣ ಬಂದಾಗ ಎದೆಗುಂದದೆ ಹಗಲು ರಾತ್ರಿ ಶ್ರಮಿಸಿದ್ದಾರೆ ಎಂದರು.
ಕೋವಿಡ್ ಆಸ್ಪತ್ರೆಯಾಗಿ ಮುಂದರಿಕೆ
ಕುಂದಾಪುರ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮುಂದುವರಿಯಲಿದ್ದು ಪ್ರಕರಣಗಳ ಸಂಖ್ಯೆ ಕಡಿಮೆಯಾದಾಗ ಅಲ್ಲಿಗೆ ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸಿ, ಆಕ್ಸಿಜನ್ ಸಲಕರಣೆಗಳನ್ನು ಹೆಚ್ಚಿಸಿ ಇನ್ನಷ್ಟು ಸೌಕರ್ಯಗಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದರು. ಎಸಿ ಕೆ. ರಾಜು, ತಾಲೂಕು ಆರೋಗ್ಯಾಧಿ ಕಾರಿ ಡಾ| ನಾಗಭೂಷಣ್ ಉಡುಪ, ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ಡಾ| ರಾಬರ್ಟ್ ರೆಬೆಲ್ಲೋ, ಫಿಸಿಶಿಯನ್ ಡಾ| ನಾಗೇಶ್, ಸೆಲ್ಕೋ ಸಂಸ್ಥೆಯ ಸಹಾಯಕ ಜನರಲ್ ಮ್ಯಾನೆಜರ್ ಗುರುಪ್ರಸಾದ್ ಶೆಟ್ಟಿ ಇದ್ದರು.