Advertisement

ಅಂತಾರಾಷ್ಟ್ರೀಯ ಗಾಳಿಪಟ-ಸಾಂಸ್ಕೃತಿಕ ಉತ್ಸವಕ್ಕೆ ತೆರೆ; ಮೆರಗು ತಂದ ಜನಸಾಗರ

04:01 PM Jan 23, 2023 | Team Udayavani |

ಹುಬ್ಬಳ್ಳಿ: ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಉತ್ಸವಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿತು. ರಜಾದಿನವಾಗಿದ್ದರಿಂದ ಮಕ್ಕಳೊಂದಿಗೆ ಪೋಷಕರು ಇಡೀ ದಿನವನ್ನು ಅಲ್ಲಿಯೇ ಕಳೆದರು. ದಿನಪೂರ್ತಿ ದೇಸಿಯ ಆಟಗಳೇ ಪಾರಮ್ಯ ಮೆರೆದವು.

Advertisement

ಸಾರ್ವಜನಿಕರಿಗಾಗಿ ಗ್ರಾಮೀಣ ಸೊಗಡು ನೆನಪಿಸುವಂತಹ ಲಗೋರಿ, ಚಿನ್ನಿದಾಂಡು, ಗೋಣಿ ಚೀಲ ಓಟ, ಚೆಸ್‌, ಹಗ್ಗ ಜಗ್ಗಾಟ, ಮ್ಯೂಸಿಕಲ್‌ ಚೇರ್‌ನಂತಹ ಹಲವು ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು, ಮಹಿಳೆಯರೆನ್ನದೆ ಸಂತಸದ ಆಟದಲ್ಲಿ ತೊಡಗಿದ್ದರು. ಬೆಳಗ್ಗೆ ಫಿಷ್‌, ಡ್ರ್ಯಾಗನ್‌, ಡೆಲ್ಟಾ, ಇನ್‌ಪ್ಲಾಟೇಬಲ್‌, ಆಕ್ಟೋಪಸ್‌, ಲಿಫ್ಟರ್ಸ್‌, ಮಾರಿಯೋ ಸೇರಿದಂತೆ ಹಲವು ಗಾಳಿ ಪಟಗಳು ಹಾರಾಟ ಮಾಡಿದವು. ವಿದೇಶ ಹಾಗೂ ಭಾರತದ ವಿವಿಧ ಭಾಗದಿಂದ ಬಂದಿದ್ದ ಗಾಳಿಪಟ ಹಾರಿಸುವ ಪಟುಗಳನ್ನು ಕ್ಷಮತಾ ಸೇವಾ ಸಂಸ್ಥೆಯ ಮುಖ್ಯಸ್ಥ ಗೋವಿಂದ ಜೋಶಿ ಅವರು ಉಡುಗೊರೆ ನೀಡಿ ಬೀಳ್ಕೊಟ್ಟರು. ಬಳಿಕ ಪೋಷಕರು ಮಕ್ಕಳೊಂದಿಗೆ ಗಾಳಿಪಟ ಹಾರಿಸಿದರು.

ಹಗ್ಗಜಗ್ಗಾಟದಲ್ಲಿ ಬಾಲಕ-ಬಾಲಕಿಯರ ತಲಾ ಎರಡು ತಂಡಗಳು ಸೆಣಸಾಟ ನಡೆಸಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಜಂಗಿಕ ಕಾಟಾ ನಿಕಾಲಿ ಕುಸ್ತಿ ವಿಶೇಷವಾಗಿತ್ತು. ಸ್ಥಳೀಯ ಪೈಲ್ವಾನರು ಮಾತ್ರ ಪಾಲ್ಗೊಳ್ಳಲಿದ್ದರು. ಆದರೆ ಕೊನೆಯ ಕ್ಷಣದಲ್ಲಿ ದಾವಣಗೆರೆ, ಬೆಳಗಾವಿ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದರು. ಎಂಟು ಜನ ಮಹಿಳಾ ಪೈಲ್ವಾನರು ಆಗಮಿಸಿದ್ದು ಗಮನ ಸೆಳೆಯಿತು. ಕುಸ್ತಿಯಲ್ಲಿ ವಿಜೇತ ಪೈಲ್ವಾನರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕುಣಿದು ಕುಪ್ಪಳಿಸಿದ ಯುವಪಡೆ 
ರವಿವಾರ ಸಂಜೆ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಖ್ಯಾತ ಗಾಯಕರು ಸಂಗೀತ ರಸದೌತಣ ಉಣಬಡಿಸಿದರು. ಗಾಯಕರಾದ ವಾಸುಕಿ ವೈಭವ, ಅನುರಾಧಾ ಭಟ್‌, ಸಂಗೀತಾ ರವೀಂದ್ರನಾಥ್‌, ಚೇತನ್‌ ನಾಯ್ಕ, ಅಶ್ವಿ‌ನ್‌ ಶರ್ಮಾ, ಮಹನ್ಯಾ ಪಾಟೀಲ ಮೊದಲಾದವರು ಜನರನ್ನು ಸಂಗೀತ ಸುಧೆಯಲ್ಲಿ ತೇಲಿಸಿದರು. ಯುವಪಡೆ ಗಾಯಕರೊಂದಿಗೆ ದನಿಗೂಡಿಸಿದ್ದಲ್ಲದೆ ಕುಣಿದು ಕುಪ್ಪಳಿಸಿತು.

ಮೋದಿ ಆಲೋಚನೆ ಕೂಸು
ದೇಸಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಆಲೋಚನೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. ಅವರ ಇಚ್ಛೆಯಂತೆ ಅಂತಾರಾಷ್ಟ್ರೀಯ ಉತ್ಸವದ ಮೂಲಕ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವ ಹಾಗೂ ಕ್ಷಮತಾ ಸಂಸ್ಥೆಯ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು. ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಎರಡು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ನೂರಾರು ಯುವಕರ ಪರಿಶ್ರಮದ ಫಲವಾಗಿ ಇಷ್ಟೊಂದು ಅಚ್ಚುಕಟ್ಟಾಗಿ ಉತ್ಸವ ಮೂಡಿಬಂದಿದೆ. ಮುಂದಿನ ವರ್ಷದಿಂದ ಎರಡು ದಿನಗಳ ಬದಲಾಗಿ ಮೂರು ದಿನಗಳಿಗೆ ಹೆಚ್ಚಿಸಲಾಗುವುದು ಎಂದರು.

Advertisement

ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಗ್ರಾಮೀಣ ಸೊಗಡಿನ ದೇಸಿ ಕ್ರೀಡೆಗಳನ್ನು ನೆನಪಿಸುವ ಕೆಲಸ ಆಗಿದೆ. ಪ್ರತಿಯೊಂದರಲ್ಲೂ ಭಾರತೀಯತೆ ಮರುಕಳಿಸಬೇಕು ಎನ್ನುವ ಕಾರಣಕ್ಕೆ ದೇಸಿ ಆಟಗಳನ್ನು ಆಯೋಜಿಸಲಾಗಿತ್ತು. ಸ್ಟಾಲ್‌ಗ‌ಳ ಬಾಡಿಗೆ ಅರ್ಧದಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೈಗಾರಿಕೆ, ವೈದ್ಯಕೀಯ ಕ್ಷೇತ್ರ ಅಲ್ಲದೆ ಇಲ್ಲಿನ ಮೂರುಸಾವಿರ ಮಠ ಹಾಗೂ ಸಿದ್ಧಾರೂಢಸ್ವಾಮಿ ಮಠದಿಂದಾಗಿ ನಗರ ಪ್ರಸಿದ್ಧಿ ಪಡೆದಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದ ಮೂಲಕ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಹತ್ತಾರು ಮೂಲಸೌಲಭ್ಯದ ಮೂಲಕ ಜನರಿಗೆ ಮನರಂಜನೆ ಇರಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next