Advertisement

ಓಪನ್‌ ಬಸ್‌ನಲ್ಲಿ ಮೈಸೂರು ಅಂದ ಸವಿಯರಿ

11:28 AM Oct 08, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಪ್ರವಾಸಿಗರು ಸಾಂಸ್ಕೃತಿಕನಗರಿಯ ಅಂದ ಸವಿಯಲು ಅನುಕೂಲವಾಗುವಂತೆ ಓಪನ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ದಸರೆಯ ಆಕರ್ಷಣೆ ಕಣ್ತುಂಬಿಕೊಳ್ಳಲು ಮೈಸೂರಿಗೆ ಬರುವ ಪ್ರವಾಸಿಗರು ತೆರೆದ ಬಸ್‌ ಏರಿ ಮೈಸೂರಿನ ಅಂದ ಸವಿಯುತ್ತಾ, ಪ್ರಮುಖ ಸ್ಥಳಗಳ ವೀಕ್ಷಣೆ ಮಾಡಬಹುದು. 

Advertisement

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡುವ ಸಲುವಾಗಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬಿಎಂಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸಿರುವ ತೆರೆದ ಬಸ್‌ ಪ್ರವಾಸಕ್ಕೆ ಭಾನುವಾರ ಚಾಲನೆ ದೊರೆಯಿತು.

ವಿದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ತೆರೆದ ಬಸ್‌ಗಳು ಮೈಸೂರಿನಲ್ಲಿ ಮೊದಲ ಬಾರಿಗೆ ಪ್ರವಾಸಕ್ಕೆ ತೆರೆದುಕೊಂಡವು. ಪ್ರವಾಸಿಗರ ಅನುಕೂಲಕ್ಕಾಗಿ ವಿಶೇಷ ವಿನ್ಯಾಸ ಹಾಗೂ ಬ್ರಾಂಡ್‌ನ‌ ಬಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಪ್ರವಾಸಿಗರಿಗೆ ವಿಶೇಷ ದಸರಾ ಪ್ರವಾಸ ಕಲ್ಪಿಸಲು ಬಿಎಂಟಿಸಿಯಲ್ಲಿದ್ದ ಏಕೈಕ ತೆರೆದ ಬಸ್‌ (ಕಾವೇರಿ)ನ್ನು ಕೆಎಸ್‌ಟಿಡಿಸಿಗೆ ನೀಡಿದೆ. 

150 ರೂ. ಟಿಕೆಟ್‌: ವಿಶೇಷವಾಗಿ ವಿನ್ಯಾಸವಾಗಿರುವ ಈ ತೆರದ ಬಸ್‌ನಲ್ಲಿ 32 ಸೀಟುಗಳಿವೆ. ಈ ಬಸ್‌ ಪ್ರವಾಸ ಮಾಡಲು ಬಯಸುವವರು ಆನ್‌ಲೈನ್‌ ಅಥವಾ ನೇರವಾಗಿ ಟಿಕೆಟ್‌ ಪಡೆದು ಪ್ರವಾಸಮಾಡಬಹುದು. ಒಬ್ಬರಿಗೆ 150 ರೂ. ನಿಗದಿಪಡಿಸಲಾಗಿದ್ದು ಲಘು ಉಪಹಾರ ಒಳಗೊಂಡಿರುತ್ತದೆ.

ಅಂದಾಜು ಒಂದೂವರೆ ಗಂಟೆಯ ಪ್ರವಾಸದಲ್ಲಿ ಪ್ಯಾಲೇಸ್‌ಗೆàಟ್‌, ಹಾರ್ಡಿಂಜ್‌ ವೃತ್ತ, ಕೆ.ಆರ್‌.ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋಪೋಲ್‌ ವೃತ್ತ, ರೈಲ್ವೆ ನಿಲ್ದಾಣ, ಕೆ.ಆರ್‌.ಆಸ್ಪತ್ರೆ, ಬನ್ನಿಮಂಟಪ, ಎಲ್‌ಐಸಿ ಕಚೇರಿ ವೃತ್ತ, ಫೈಲಟ್‌ ಸರ್ಕಲ್‌, ಉಪನಗರ ನಿಲ್ದಾಣ, ವಸ್ತುಪ್ರದರ್ಶನದ ಎದುರಿನ ಪ್ಯಾಲೇಸ್‌ ವೀಕ್ಷಿಸಬಹುದು. ಅಲ್ಲದೆ ಪ್ರವಾಸದಲ್ಲಿ ಕಾಣಸಿಗುವ ಸ್ಥಳಗಳ ಇತಿಹಾಸವನ್ನೂ ತಿಳಿಸಲಾಗುತ್ತದೆ.

Advertisement

ಯೋಜನೆಗೆ ಚಾಲನೆ: ನಗರದ ಹೋಟೆಲ್‌ ಹೊಯ್ಸಳ ಆವರಣದಲ್ಲಿ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ತೆರೆದ ಬಸ್‌ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಜನಾರ್ದನ್‌ ಇನ್ನಿತರರು ಹಾಜರಿದ್ದರು.

ಬಸ್‌ನಲ್ಲಿ ಯಾವ ಪ್ರವಾಸಿ ತಾಣ ಭೇಟಿ?: ನಗರದಲ್ಲಿ  ಕೆಎಸ್‌ಟಿಡಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಹಾಪ್‌ ಆನ್‌ ಹಾಪ್‌ ಯೋಜನೆಗೂ ಚಾಲನೆ ನೀಡಲಾಯಿತು. ಪ್ರವಾಸಿಗರು 150 ರೂ. ದಿನದ ಪಾಸ್‌ ಪಡೆದು ದಿನಪೂರ್ತಿ ಈ ಬಸ್‌ನಲ್ಲೇ ಪ್ರಯಾಣ ಮಾಡಬಹುದು. ಇಂತಹ ಹತ್ತು ಬಸ್‌ಗಳನ್ನು ಆರಂಭಿಸಲಾಗುತ್ತಿದ್ದು,  ಮೈಸೂರಿನ 15 ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.

ಆರ್ಟ್‌ಗ್ಯಾಲರಿ, ಅರಮನೆ, ಪ್ರಾಣಿ ಸಂಗ್ರಹಾಲಯ, ಮಾಲ್‌ ಆಫ್ ಮೈಸೂರು, ಕಾರಂಜಿಕೆರೆ, ಸ್ಯಾಂಡ್‌ ಮ್ಯೂಸಿಯಂ, ಚಾಮುಂಡಿಬೆಟ್ಟ, ಮೇಣದ ವಸ್ತು ಸಂಗ್ರಹಾಲಯ, ಐತಿಹಾಸಿಕ ವಸ್ತು ಸಂಗ್ರಹಾಲಯ, ಸೆಂಟ್‌ ಫಿಲೋಮಿನಾ ಚರ್ಚ್‌ ಇತ್ಯಾದಿ ಸ್ಥಳಗಳನ್ನು ಈ ಯೋಜನೆಯಲ್ಲಿ ವೀಕ್ಷಿಸಬಹುದು. ನಗರದ ಎಲ್ಲಾ ನಿಲ್ದಾಣದಲ್ಲಿ ಪ್ರತಿ ಹತ್ತು ನಿಮಿಷಕೊಮ್ಮೆ ಈ ಬಸ್‌ಗಳು ಲಭ್ಯವಿದ್ದು,

ಈ ಬಸ್‌ಗಳಿಗೆ ದಸರಾ ವೈಭವದ ವಿಶೇಷ ಮೆರುಗು ನೀಡಲಾಗಿದೆ. ಹವಾ ನಿಯಂತ್ರಿತ ಪರಿಸರ ಸ್ನೇಹಿ ವೋಲ್ವೋ ಬಸ್‌ಗಳು, ಅಂತರ-ಪ್ರತಿ ಹತ್ತು ನಿಮಿಷಕ್ಕೊಂದು ಬಸ್‌ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ನಿಲ್ದಾಣದಲ್ಲಿ ಬೇಕಾದರೂ ಬಸ್‌ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ. 

ದಸರಾ ಮಹೋತ್ಸವದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಹಲವು ಕಾರ್ಯಕ್ರಮ ರೂಪಿಸಿದ್ದು, 8. 05 ಕೋಟಿ ರೂ. ಮೀಸಲಿಡಲಾಗಿದೆ. ಅ.14 ರಿಂದ 18ರವರೆಗೆ ಪುರಭವನದ ಮೇಲೆ ತ್ರಿಡಿ ಮ್ಯಾಪಿಂಗ್‌ ಪ್ರದರ್ಶನ, ಅ.13ರಂದು ಕೃಷ್ಣರಾಜ ಬುಲೇವಾರ್ಡ್‌ ರಸ್ತೆಯಲ್ಲಿ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌, 18ರಂದು ಟ್ರೆಶರ್‌ ಹಂಟ್‌, ಅ.10 ರಿಂದ ಜನವರಿ 10ರವರೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ದಸರಾ ಲ್ಯಾಂಟರ್ನ್ ಫೆಸ್ಟ್‌ ನಡೆಯಲಿದೆ. 
-ಬಿ.ರಾಮು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next