ಧಾರವಾಡ: ಸಾಂಸ್ಕೃತಿಕ ಸಮಾರಂಭಗಳಲ್ಲಿ ರಾಜಕಾರಣಿಗಳು ಇರುವ ಅಗತ್ಯವಿಲ್ಲ. ಇದಕ್ಕೆ ಪೂರಕವಾದ ಸರಕಾರಿ ಪ್ರೋಟೋಕಾಲ್ ಎನ್ನುವ ಪದ್ಧತಿಯನ್ನೇ ತೆಗೆದು ಹಾಕಬೇಕು ಎಂದು ಹಿರಿಯ ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ್ ಹೇಳಿದರು. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಗುರುವಾರ ನಡೆದ ಕರ್ನಾಟಕ ನಾಟಕ ಅಕಾಡೆಮಿಯ ರಾಜ್ಯಮಟ್ಟದ ಪ್ರಥಮ ಹವ್ಯಾಸಿ ರಂಗಭೂಮಿ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರಕಾರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ನೀಡಿದ ನೆಪವೊಡ್ಡಿ ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹೀಗೆ ರಾಜಕಾರಣಿಗಳ ಹೆಸರನ್ನು ಆಮಂತ್ರಣ ಪತ್ರಿಕೆಗಳಲ್ಲಿ ಕಡ್ಡಾಯವಾಗಿ ನಮೂದಿಸಲಾಗುತ್ತದೆ. ಆದರೆ ಯಾವ ರಾಜಕಾರಣಿಗಳು ಆ ಸಮಾರಂಭಗಳತ್ತ ಸುಳಿಯುವುದಿಲ್ಲ. ಅಷ್ಟೇ ಅಲ್ಲ ಅವರಿಗೆ ಸಾಂಸ್ಕೃತಿಕ ಸಮಾರಂಭಗಳಲ್ಲಿ ಮಾತನಾಡಲು ವಿಷಯಗಳೂ ಇರುವುದಿಲ್ಲ.
ಹೀಗಾಗಿ ಈ ಪದ್ಧತಿಯನ್ನು ರದ್ದುಗೊಳಿಸಲು ಒಗ್ಗಟ್ಟಿನಿಂದ ಹೋರಾಟ ರೂಪಿಸಬೇಕಿದೆ ಎಂದರು. ತಡವಾಗಿ ಬರುವ ಜನಪ್ರತಿನಿಧಿಗಳಿಗೆ ಸಾಹಿತಿಗಳು ಕಾದು ಕುಳಿತುಕೊಳ್ಳಬೇಕು. ಅನುದಾನ ಕೊಟ್ಟ ಮಾತ್ರಕ್ಕೆ ಎಲ್ಲರಿಗೂ ಜೀ ಹೂ..ಝೂರ್ ಎನ್ನುವ ಅಗತ್ಯವಿಲ್ಲ. ಹಿಂಡು ಜನರೊಂದಿಗೆ ಬಂದು ಕಾರ್ಯಕ್ರಮದ ಅರ್ಧದಲ್ಲೇ ಎದ್ದು ಹೋಗುವ ರಾಜಕಾರಣಿಗಳ ವರ್ತನೆಗಳಿಂದ ಸಾಂಸ್ಕೃತಿಕ ಸಮಾರಂಭಗಳ ಸ್ವರೂಪವೇ ಹಾಳಾಗುತ್ತಿದೆ ಎಂದು ಕಿಡಿಕಾರಿದರು.
ಮರಾಠಿ ರಂಗಭೂಮಿಯಲ್ಲಿ ನಾಟಕಗಳಿಗೆ ಸಿಗುವ ಪ್ರಾಶಸ್ತÂ ಕರ್ನಾಟಕದಲ್ಲಿ ಸಿಗುತ್ತಿಲ್ಲ. ದೊಡ್ಡ ನಟರು ಸಮಾರಂಭಕ್ಕೆ ಬರಲು ವಿಮಾನ ಸಾರಿಗೆ ಭತ್ಯೆ ಕೇಳುತ್ತಿರುವುದು ವಿಷಾದನೀಯ. ಹವ್ಯಾಸಿ ರಂಗಭೂಮಿ ಬೆಳೆಯಬೇಕಾದರೆ ತನ್ನಲ್ಲಿನ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಅಗತ್ಯವಿದೆ ಎಂದರು. ಸಮಾರೋಪ ಭಾಷಣ ಮಾಡಿದ ನಟಿ, ಗಕರ್ಮಿ ಅರುಂಧತಿ ನಾಗ, ಕನ್ನಡ ರಂಗಭೂಮಿ ಬೆಳೆಯಲು ಸದಾ ಕ್ರಿಯಾಶೀಲ ಚಟುವಟಿಕೆಗಳ ಅಗತ್ಯವಿದೆ ಎಂದರು.
ನಾನು ಕನ್ನಡದವಳಲ್ಲ. ಆದರೂ ಕನ್ನಡ ಕಲಿತವಳು. ಉತ್ತಮ ಕನ್ನಡ ಕಲಿಸಿದವರು ಕನ್ನಡಿಗರು. ಇದಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗಶಂಕರ ಕಟ್ಟುವ ಕನಸು ಇದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ರಂಗಾಯಣ ನಿರ್ದೇಶಕ ಡಾ| ಪ್ರಕಾಶ ಗರುಡ ಮಾತನಾಡಿ, ರಂಗಭೂಮಿಯ ವಿಭಜನೆ ಸರಿಯಲ್ಲ. ವೃತ್ತಿ ರಂಗಭೂಮಿಗೆ ಈಗ ಪ್ರೇಕ್ಷಕರು ಇಲ್ಲ ಎನ್ನುವ ಮಾತು ಸುಳ್ಳು.
ಆದರೆ ವೃತ್ತಿ ರಂಗಭೂಮಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ತನ್ನ ಪ್ರೇಕ್ಷಕರನ್ನು ಗಳಿಸಿಕೊಳ್ಳಬೇಕಿದೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಶೇಖ, ಡಾ| ಡಿ.ಎಸ್.ಚೌಗಲೆ ಇದ್ದರು. ಕೊನೆಯಲ್ಲಿ ಕಲಬುರ್ಗಿಯ ಸಂಚಿ ಸಾರಂಭ ತಂಡದಿಂದ ದೊರೆ ಈಡಿಪಸ್ ನಾಟಕ ಪ್ರದರ್ಶನಗೊಂಡಿತು.