ಬೆಂಗಳೂರು: ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ ನಡೆಯಲಿದ್ದು, ಸೋಮವಾರ ಬೆಳಗ್ಗೆ 7 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮತದಾನ ಪ್ರಾರಂಭವಾಗುವುದಕ್ಕೂ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ನಿಲ್ಲಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಮೇ 27ರ ಬೆಳಗ್ಗೆ 7 ಗಂಟೆ ಬಳಿಕ ಪಕ್ಷಗಳು ಅಥವಾ ಅಭ್ಯರ್ಥಿಗಳು ಯಾವುದೇ ರೀತಿಯ ಬಹಿರಂಗ ಪ್ರಚಾರ ಕೈಗೊಳ್ಳುವಂತಿಲ್ಲ.
ರಾಜ್ಯದ 8 ನಗರಸಭೆ, 32 ಪುರಸಭೆ ಹಾಗೂ 21 ಪಟ್ಟಣ ಪಂಚಾಯಿತಿಗಳು ಸೇರಿ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ ನಡೆಯಲಿದೆ. ಒಟ್ಟು 1,296 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದ್ದು 4,360 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಮೇ 27ರ ಬೆಳಗ್ಗೆ 7ರಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ನೀತಿ ಸಂಹಿತೆ ಜಾರಿ ಬಗ್ಗೆ ತೀವ್ರ ನಿಗಾ ಇಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ.
ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಚುನಾವಣಾ ಪ್ರಚಾರವನ್ನು ಮತದಾನ ಆರಂಭವಾಗುವ 48 ಗಂಟೆಗಳ ಮುಂಚೆ ಮುಕ್ತಾಯಗೊಳಿಸಬೇಕಾಗುತ್ತದೆ. ಆದ್ದರಿಂದ ಮೇ 27ರ ಬೆಳಗ್ಗೆ 7 ಗಂಟೆ ನಂತರ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಪರ ಯಾರೊಬ್ಬರೂ, ಯಾವುದೇ ವಿಧದಲ್ಲಿ ಬಹಿರಂಗ ಪ್ರಚಾರ ನಡೆಸತಕ್ಕದ್ದಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.