Advertisement

ಅಬ್ಬರದ ಚುನಾವಣಾ ಪ್ರಚಾರಕ್ಕೆ ಬಿತ್ತು ತೆರೆ

03:26 PM May 11, 2018 | Team Udayavani |

ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆ ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿನ ಅಬ್ಬರ, ಆಡಂಬರ, ಹಣದ ಹೊಳೆ ಹರಿಸುತ್ತಿದ್ದ ಹಿಂದಿನ ಚುನಾವಣೆಗಳು ದೇಶಾದ್ಯಂತ ಗಮನ ಸೆಳೆದಿವೆ. ಆದರೆ,
ಪ್ರಸ್ತುತ 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಅಬ್ಬರ ಜಿಲ್ಲೆಯ ಮಟ್ಟಿಗೆ ಸಪ್ಪೆಯಾಗಿದೆ.
2008ರ ಚುನಾವಣೆ ಅಣಕಿಸುವಂತೆ ಮಾಡಿರುವ ಚುನಾವಣಾ ಪ್ರಚಾರಕ್ಕೆ ತೆರೆಬಿದ್ದಿದೆ.

Advertisement

ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಚುನಾವಣೆಗಳು ರಾಜಕೀಯ ಪಕ್ಷಗಳ ರಾಷ್ಟ್ರೀಯ ಅಧಿನಾಯಕರನ್ನೇ ಆಕರ್ಷಿಸಿವೆ. ಆದರೆ, 2018ರ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಮೂರು ಪಕ್ಷಗಳ ಅಭ್ಯರ್ಥಿಗಳು ಸದ್ದಿಲ್ಲದೇ, ಪ್ರತಿದಿನ ಬೆಳಗ್ಗೆ ಮತಕ್ಕಾಗಿ ಮತದಾರರ ಮನೆಬಾಗಿಲಿಗೆ ತೆರಳುತ್ತಿದ್ದಾರೆ. ಇದು ಚುನಾವಣಾ ಪ್ರಚಾರಕ್ಕೆಂದು ರಾಜಕೀಯ ಪಕ್ಷಗಳ ರಾಜ್ಯ, ರಾಷ್ಟ್ರೀಯ ಮುಖಂಡರು ಜಿಲ್ಲೆಗೆ ಬಂದು ಹೋಗಿದ್ದರೂ ಅಪರೂಪವೆಂಬಂತೆ ಕಾಣುತ್ತಿದ್ದು, ಅಭ್ಯರ್ಥಿಗಳೇ ತಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ ಎಂಬಂತೆ ಕಂಡುಬರುತ್ತಿದೆ.

ಚುನಾವಣೆ ಘೋಷಣೆಗೂ ಮುನ್ನವೇ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಚುನಾವಣಾ ಪ್ರಚಾರಕ್ಕೆ ಜಿಲ್ಲೆಯಿಂದಲೇ ನಾಂದಿ ಹಾಡಿದ್ದರು. ಬಳಿಕ ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಕಂಪ್ಲಿ ಕ್ಷೇತ್ರ ವ್ಯಾಪ್ತಿಯ ಕುರುಗೋಡು, ಸಿರುಗುಪ್ಪ, ಕಾನಾಹೊಸಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಇಲ್ಲಿನ ತೆಲುಗು ಭಾಷಿಕರನ್ನು ಸೆಳೆಯಲು ನಗರಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಬಾಪಿರಾಜು ಮತ್ತು ಕೇಂದ್ರ ಸಚಿವ ಕೋಟ್ಲ ಜಯ ಸೂರ್ಯಪ್ರಕಾಶ್‌ ರೆಡ್ಡಿಯವರು ಸದ್ದಿಲ್ಲದೆ ಪ್ರಚಾರ ನಡೆಸಿದ್ದರು. ಅಲ್ಲದೇ, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಬಹಿರಂಗ ಸಭೆ ನಡೆಸಿದ್ದರು. ಕೇಂದ್ರದ ಸಚಿವೆ ಸ್ಮೃತಿ ಇರಾನಿ ಸಂಡೂರು, ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ, ಉತ್ತರ ಪ್ರದೇಶದ ಸಿಎಂ
ಯೋಗಿ ಆದಿತ್ಯನಾಥ್‌ ಹೊಸಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರದ ಮಾಜಿ ಸಚಿವೆ
ದಗ್ಗುಬಾಟಿ ಪುರಂದೇಶ್ವರಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಸಿರುಗುಪ್ಪದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎಸ್‌.  –ಸೋಮಲಿಂಗಪ್ಪ ಪರ ಪ್ರಚಾರ ನಡೆಸಿದ್ದರು. ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಸಹ ಸಿರುಗುಪ್ಪದಲ್ಲಿ
ಪ್ರಚಾರ ನಡೆಸಿದ್ದು, ಇದರೊಂದಿಗೆ ಕೊಟ್ಟೂರು, ಹಡಗಲಿ ಕ್ಷೇತ್ರಕ್ಕೂ ಭೇಟಿ ನೀಡಿದ್ದು, ಸಿರುಗುಪ್ಪ ಕ್ಷೇತ್ರವನ್ನೇ
ಕೇಂದ್ರೀಕರಿಸಿರುವುದು ವಿಶೇಷ. ಇನ್ನು ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಿಚ್ಚ
ಸುದೀಪ್‌, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮಾಜಿ ಕ್ರಿಕೆಟ್‌ ಆಟಗಾರ ಮಹ್ಮದ್‌ ಅಜರುದ್ದೀನ್‌ ರೋಡ್‌
ಶೋ ನಡೆಸಿದರು. 

ಪತಿಯ ಪರ ಪತ್ನಿಯರ ಪ್ರಚಾರ: ವಿಧಾನಸಭೆ ಚುನಾವಣೆ ನಿಮಿತ್ತ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರು
ಬಿರುಬಿಸಲನ್ನೂ ಲೆಕ್ಕಿಸದೆ ಪತಿಯ ಪರವಾಗಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ ಪತ್ನಿ ಜಿ.ವಿಜಯಾ, ಮಹಿಳೆಯರ ಹಣೆಗೆ ಕುಂಕುಮವಿಟ್ಟು ಮತಯಾಚನೆ ಮಾಡಿದರು. ಪ್ರತಿಸ್ಪರ್ಧಿ ಅನಿಲ್‌ಲಾಡ್‌ ಪತ್ನಿ ಆರತಿಲಾಡ್‌ ಸಹ ಪತಿಯ ಪರ ಮತಯಾಚನೆ ಮಾಡಿದರು. ಸಿರುಗುಪ್ಪ ಕ್ಷೇತ್ರದಲ್ಲಿ ಎಂ.ಎಸ್‌. ಸೋಮಲಿಂಗಪ್ಪ ಪತ್ನಿ ಶಾರದಮ್ಮ, ಮಕ್ಕಳಾದ ಸಿದ್ದಪ್ಪ, ವೆಂಕಟಪ್ಪ, ಕಂಪ್ಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಎನ್‌. ಗಣೇಶ್‌ ಪತ್ನಿ ಜೆ.ಎನ್‌. ಶ್ರೀದೇವಿ ಪತಿಯ ಗೆಲುವಿಗಾಗಿ ಚುನಾವಣಾ ಪ್ರಚಾರ ನಡೆಸಿದರು.

ಹಿಂದೆ ಹೀಗಿತ್ತು ಪ್ರಚಾರ
ಜಿಲ್ಲೆಯ ಮಟ್ಟಿಗೆ ಅದೊಂದು ಕಾಲವಿತ್ತು. ಆನೆ ನಡೆದಿದ್ದೇ ದಾರಿ ಎಂಬಂತೆ ಜಿಲ್ಲೆಯಲ್ಲಿ ಆಗಿದ್ದೇ ಅಬ್ಬರದ ಪ್ರಚಾರ. ಚುನಾವಣಾ ಆರಂಭವಾಗುತ್ತಿದ್ದಂತೆ ಓಣಿ, ಓಣಿ ರಾಜಕೀಯ ಪಕ್ಷಗಳ ಯುವ ಪಡೆಗಳು ತಾತ್ಕಾಲಿಕವಾಗಿ ತಲೆಯೆತ್ತುತ್ತಿದ್ದವು. ಕೂಲಿಯೊಂದಿಗೆ ಮಧ್ಯಾಹ್ನ, ರಾತ್ರಿ ಊಟದ ಪಾಕೇಟ್‌ಗಳು, ಹಿರಿಯ ನಾಗರಿಕರಿಗೆ ಮದ್ಯದ ಬಾಟಲ್‌, ಕುಟುಂಬಕ್ಕೊಂದು ಕೋಳಿ ಜತೆಗೆ ಮತಕ್ಕೊಂದಿಷ್ಟು ಮೌಲ್ಯ ಎಲ್ಲವೂ ಲಭ್ಯವಾಗುತ್ತಿತ್ತು. ವೃತ್ತಿಯನ್ನು ತೊರೆದು ಒಂದಷ್ಟು ದಿನಗಳು ಚುನಾವಣಾ ಕೆಲಸಕ್ಕೆ ಸೀಮಿತವಾಗುತ್ತಿದ್ದರು. ಇದರೊಂದಿಗೆ ಓಣಿ ಓಣಿಗಳಲ್ಲಿ ರಾಜಕೀಯ ಪಕ್ಷಗಳ ಬಾವುಟ, ಕರಪತ್ರಗಳು ರಾರಾಜಿಸುತ್ತಿದ್ದವು. ಇವುಗಳನ್ನು ಕಂಡಾಕ್ಷಣ ಈ ಓಣಿಯಲ್ಲಿ ಇಂಥಹದ್ದೇ ಪಕ್ಷಕ್ಕೆ ಉತ್ತಮ ಬೆಂಬಲವಿದೆ ಎಂಬುದರ ಜತೆಗೆ ಓಣಿಗಳಲ್ಲಿ ರಾರಾಜಿಸುತ್ತಿದ್ದ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಇದು ಅಭ್ಯರ್ಥಿಗಳಿಗೂ ಒಂದಷ್ಟು ನಿರಾಳತೆಯನ್ನು ಮೂಡಿಸುತ್ತಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next