Advertisement

ಏಳು ದಿನದ ಅಧಿವೇಶನಕ್ಕೆ ತೆರೆ

03:45 AM Feb 15, 2017 | Team Udayavani |

ವಿಧಾನಮಂಡಲ: ರಾಜ್ಯ ವಿಧಾನಮಂಡಲದ ವರ್ಷದ ಮೊದಲ ಅಧಿವೇಶನ ಮಂಗಳವಾರ ತೆರೆ ಬಿದ್ದಿತು.
ವಿಧಾನಸಭೆಯಲ್ಲಿ ಏಳು ದಿನ ನಡೆದ ಅಧಿವೇಶನದಲ್ಲಿ ಒಟ್ಟು 36 ಗಂಟೆಗಳ ಕಾಲ ಕಲಾಪ ನಡೆದಿದ್ದು,ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ 12 ಗಂಟೆ 58 ನಿಮಿಷ ಚರ್ಚೆ ನಡೆದಿದ್ದು ಕೇವಲ 15 ಜನ ಸದಸ್ಯರು ಭಾಗವಹಿಸಿದ್ದರು.
ವಿಧಾನಪರಿಷತ್‌ನಲ್ಲಿಯೂ ಹದಿನೈದು ಜನ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Advertisement

ಪ್ರಮುಖವಾಗಿ ಪ್ರಾಣಿ ಹಿಂಸೆ ತಡೆಯುವ ಕಂಬಳ, ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಅನುಮತಿ ನೀಡುವ ಕಾಯ್ದೆ, ಭೂ ಕಂದಾಯ ವಿಧೇಯಕಗಳ ತಿದ್ದುಪಡಿ, ಸೇರಿದಂತೆ ಐದು ವಿಧೇಯಕಗಳು ಅಂಗೀಕೃತವಾಗಿದ್ದು, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ್ಕೆ ಶಾಸಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ವಾಪಸ್‌ ಪಡೆಯಿತು. ರಾಜ್ಯದಲ್ಲಿರುವ ಕ್ಲಬ್‌ಗಳ ನಿಯಂತ್ರಣ ಕುರಿತ ಅಧ್ಯಯನ ವರದಿ ಸೇರಿದಂತೆ ಐದು ವರದಿಗಳನ್ನು ಮಂಡಿಸಲಾಯಿತು.

ವಿಧಾನಸಭೆಯಲ್ಲಿ ಅಂಗೀಕಾರವಾದ ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆ ಪರಿಷತ್‌ನಲ್ಲಿ ಸದಸ್ಯರು ವಿರೋಧ ಹಿನ್ನೆಲೆಯಲ್ಲಿ ಪರಾಮರ್ಶೆಗಾಗಿ ಸದನ ಸಮಿತಿಗೆ ವಹಿಸಲಾಯಿತು. ಏಳು ದಿನ ನಡೆದ ಅಧಿವೇಶನದ ಉಭಯ ಕಲಾಪಗಳಲ್ಲಿ ಸದಸ್ಯರ ಹಾಜರಾತಿ ತೀರಾ ಕಡಿಮೆ ಕಂಡು ಬಂದಿತು. ಹಾಜರಿ ಪುಸ್ತಕದಲ್ಲಿ ಹಾಜರಿ ಹಾಕಿ ಕಲಾಪದಲ್ಲಿ
ಪಾಲ್ಗೊಳ್ಳದಿರುವುದು ಈ ಅಧಿವೇಶನದಲ್ಲಿ ಕಂಡು ಬಂದಿತು.

ವಿವಿಧ ವಿಧೇಯಕಗಳಿಗೆ ಒಪ್ಪಿಗೆ
ವಿಧಾನ ಪರಿಷತ್‌: ವಿಧಾನಸಭೆಯಲ್ಲಿ ಅನುಮೋದನೆಯಾಗಿದ್ದ ಕರ್ನಾಟಕ ನ್ಯಾಯವಾದಿಗಳ ಕಲ್ಯಾಣ ನಿಧಿ (ತಿದ್ದುಪಡಿ)
ವಿಧೇಯಕ 2017ಕ್ಕೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅನುಮೋದನೆ ನೀಡಲಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದ ವಿಧೇಯಕದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಈ ವೇಳೆ ಬಿಜೆಪಿಯ ಗಣೇಶ್‌ ಕಾರ್ಣಿಕ್‌, ರಾಮಚಂದ್ರಗೌಡ, ಹನುಮಂತ ನಿರಾಣಿ, ಜೆಡಿಎಸ್‌ನ ರಮೇಶ್‌ ಬಾಬು, ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ಐವಾನ್‌ ಡಿಸೋಜಾ, ಶರಣಪ್ಪ ಮಟ್ಟೂರು ಇತರರು ಸಲಹೆ ನೀಡಿದರು. ಬಳಿಕ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಿತು. ವಿಧಾನ ಸಭೆಯಲ್ಲಿ ಅಂಗೀಕಾರವಾಗಿದ್ದ ಕನಿಷ್ಠ ಮಜೂರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೂ ಸದನ ಒಪ್ಪಿಗೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next