Advertisement

4 ದಿನದ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

06:00 AM May 27, 2018 | |

ಉಡುಪಿ: ನಾಲ್ಕು ದಿನದ ಮಗುವಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವೀ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಅರವಿಂದ ಬಿಷ್ಣೋಯ್‌ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿತು. ಗರ್ಭಾವಸ್ಥೆ ಯಲ್ಲಿರುವಾಗ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ ಮುಖ್ಯಸ್ಥ ಡಾ| ಮುರಳೀಧರ ಪೈ ಅವರು ಕೆಲವು ನ್ಯೂನತೆಗಳನ್ನು ಪತ್ತೆ ಮಾಡಿದ್ದರು. ಬಳಿಕ ಭ್ರೂಣವು ದೊಡ್ಡ ಅಪಧಮನಿಗಳ ವರ್ಗಾವಣೆ ಹೊಂದಿದ ನ್ಯೂನತೆ ತಿಳಿಯಿತು. 

Advertisement

ರೋಗ ಪತ್ತೆ ಮೊದಲೇ ತಿಳಿದ ಕಾರಣ ಜನನವಾದ ತತ್‌ಕ್ಷಣ ವೈದ್ಯರು ಕಾರ್ಯಪ್ರವೃತ್ತರಾದರು. ನವಜಾತ ಶಿಶು ತಜ್ಞ ಡಾ| ಲೆಸ್ಲಿ ಲೂಯಿಸ್‌ ಅವರ ತಂಡ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಆಮ್ಲಜನಕ ಕಡಿಮೆಯಾಗಿರುವುದು ಕಂಡುಬಂತು ಮತ್ತು ಚರ್ಮ ನೀಲಿ ಬಣ್ಣಕ್ಕೆ ತಿರುಗುವುದರಲ್ಲಿತ್ತು. ತತ್‌ಕ್ಷಣ ಔಷಧಿ ಆರಂಭಿಸಿ ನಾಲ್ಕು ದಿನದ ಪುಟಾಣಿಗೆ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದರು. 

ಡಾ| ಬಿಷ್ಣೋಯ್‌ ಅವರ ತಂಡ ಸತತ ಮೂರೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಸಾಮಾನ್ಯ ಅಪಧಮನಿಗಳನ್ನು ಬದಲಿಸಲು ಯಶಸ್ವಿಯಾಯಿತು. ಅನಂತರ ಚರ್ಮದ ಬಣ್ಣ ಮತ್ತೆ ಗುಲಾಬಿ ಬಣ್ಣಕ್ಕೆ ಮಾರ್ಪಟ್ಟಾಗ ಯಶಸ್ಸನ್ನು ಸೂಚಿಸಿತು. ಒಂದು ದಿನ ಬಳಿಕ ವೆಂಟಿಲೇಟರ್‌ ತೆಗೆದು ಹಾಕಲಾಯಿತು. ಕಂದ ತಾಯಿ ತೊಡೆಯಲ್ಲಿ ಮಲಗಲು ಸಿದ್ಧವಾಯಿತು. 9ನೆಯ ದಿನ ತಾಯಿ ಎದೆಹಾಲು ಕುಡಿಸಿದರು. 12ನೆಯ ದಿನ ಮಗುವನ್ನು ಮನೆಗೆ ಕರೆದೊಯ್ದರು. 

“ಈ ಮಗು ಇತರ ಮಗುವಿನಂತೆ ಸಾಮಾನ್ಯ ಜೀವನ ನಡೆಸಬಹುದು’ ಎಂದು ಬಿಷ್ಣೋಯ್‌ ಹೇಳಿದರು. ಡಾ| ಬಿಷ್ಣೋಯ್‌ ಸೇರ್ಪಡೆಯಿಂದ ಆಸ್ಪತ್ರೆಯಲ್ಲಿ ಅಗತ್ಯದ ಶಿಶುಗಳಿಗೆ ಸಕಾಲಿಕ ಶಸ್ತ್ರಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗಿದೆ’ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next