Advertisement
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಆರ್. ಧ್ರುವನಾರಾಯಣ ಹಾಗೂ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ನಡುವೆ ಯಾರು ಸಂಸದರಾಗಲಿದ್ದಾರೆ ಎಂಬ ಬಹಳ ದಿನಗಳ ಪ್ರಶ್ನೆಗೆ ಉತ್ತರ ದೊರಕಲಿದೆ.
Related Articles
Advertisement
ಹನೂರು, ತಿ. ನರಸೀಪುರ, ವರುಣಾ, ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಲೀಡ್ ಬರುತ್ತದೆ ಎಂಬುದು ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ. ಹನೂರಿನಲ್ಲಿ 15 ರಿಂದ 20 ಸಾವಿರ ಲೀಡ್, ತಿ. ನರಸೀಪುರದಲ್ಲಿ 7-8 ಸಾವಿರ, ವರುಣಾದಲ್ಲಿ 15-20 ಸಾವಿರ, ಹೆಗ್ಗಡದೇವನಕೋಟೆ 10 ಸಾವಿರ ಲೀಡ್ ದೊರಕುತ್ತದೆ ಎಂದು ನುಡಿದಿದ್ದಾರೆ.
ಮತಗಣಿತ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 5 ಸಾವಿರ ಲೀಡ್ ಬರಬಹುದು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೂ ಸಮ-ಸಮ ಮತಗಳು, ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬಿಜೆಪಿಗೆ 2-3 ಸಾವಿರ ಲೀಡ್ ಬರಬಹುದು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸ್ವಲ್ಪ ಹೆಚ್ಚಿನ ಮತಗಳು ಬಂದರೂ, ಇನ್ನುಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಅಂತರದ ಮುನ್ನಡೆ ಸಾಧಿಸುತ್ತದೆ. ಇದು ಗೆಲುವಿಗೆ ಪೂರಕವಾಗಲಿದೆ ಎಂಬುದು ಮುಖಂಡರ ಮತಗಣಿತ.ಇನ್ನು ಬಿಜೆಪಿ ಗುಂಪಿನವರು, ದಾಖಲೆಯ ಮತದಾನ ಆಗಿರುವುದು ನಮ್ಮ ಪಕ್ಷಕ್ಕೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ದೇಶಾದ್ಯಂತ ಪ್ರಧಾನಿ ನರೇಂದ್ರ ಅಲೆಯಿದ್ದು ಅದು ಸಹಕಾರಿಯಾಗಲಿದೆ.ಹಿಂದಿನ ಚುನಾವಣೆಗಳಲ್ಲಿ ಉಪ್ಪಾರ ಸಮುದಾಯ ಬಿಜೆಪಿ ಬೆಂಬಲಿಸಿದ್ದೇ ನಾವು ನೋಡಿರಲಿಲ್ಲ. ಆದರೆ ಈ ಬಾರಿ ಅನೇಕ ಮೋಳೆಗಳಲ್ಲಿ ಉಪ್ಪಾರ ಯುವಕರು ಮೋದಿಯವರ ಮುಖ ನೋಡಿ ಬಿಜೆಪಿಗೆ ಓಟು ಹಾಕಿದ್ದಾರೆ ಎಂಬುದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಅನಿಸಿಕೆ.
ಮತ ಪೂರಕ: ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಅತಿ ಹೆಚ್ಚಿನ ಮುನ್ನಡೆ ದೊರಕುತ್ತದೆ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್, ಬಿಎಸ್‌ಪಿಗಿಂತ ಹೆಚ್ಚಿನ ಮತಗಳನ್ನು ಪಡೆಯುತ್ತೇವೆ. ಹನೂರು, ತಿ. ನರಸೀಪುರ, ಹೆಗ್ಗಡದೇವನಕೋಟೆ, ವರುಣಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ ಇದು ನಮಗೆ ಪೂರಕವಾಗಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.
ಇಲ್ಲಿಯವರೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್ ಅನ್ನೂ, ಲಿಂಗಾಯತರು ಬಿಜೆಪಿಯನ್ನೂ ಬೆಂಬಲಿಸುತ್ತಿದ್ದರು. ಬಿಜೆಪಿ ಗೆಲುವಿಗೆ ದಲಿತರ ಮತಗಳು ದೊರಕದಿದ್ದುದೇ ಅಡ್ಡಿಯಾಗಿತ್ತು. ಆದರೆ ಈ ಬಾರಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರ ವರ್ಚಸ್ಸಿನಿಂದಾಗಿ ದಲಿತ ಮತಗಳು ಬಿಜೆಪಿಗೆ ಬರಲಿವೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲುವು ಖಂಡಿತ ಎಂಬುದು ಅವರ ಅನಿಸಿಕೆ. ಈ ಎಲ್ಲ ಊಹಾಪೋಹ, ಅಂದಾಜುಗಳಿಗೆ ಗುರುವಾರ ತೆರೆ ಬೀಳಲಿದೆ.
● ಕೆ.ಎಸ್. ಬನಶಂಕರ ಆರಾಧ್ಯ