Advertisement

ನಗರದ ಮಾಹಿತಿಗೆ ಓಪನ್‌ ಡೇಟಾ ವೇದಿಕೆ ಉತ್ತಮ ಉಪಕ್ರಮ

09:55 PM Jan 11, 2020 | mahesh |

ನಗರದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಇಲಾಖೆಗಳ ಮಾಹಿತಿ ಸ್ಥಳೀಯರಿಗೆ ಅಗತ್ಯವಾಗಿ ಬೇಕಾಗುತ್ತದೆ. ಇದು ಪಾರದರ್ಶಕ ಆಡಳಿತಕ್ಕೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಓಪನ್‌ ಡೇಟಾ ಫ್ಲಾಟ್‌ಫಾರ್ಮ್ ವ್ಯವಸ್ಥೆಯನ್ನು ಜಾರಿಗೊಳಿಸುವುದು ಅವಶ್ಯ. ಈ ಯೋಜನೆ ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಅಳವಡಿಸಲಾಗಿದ್ದು, ಈಗ ಮಂಗಳೂರಿಗೂ ಈ ಯೋಜನೆಯನ್ನು ಜಾರಿಗೊಳಿಸುವ ಆವಶ್ಯಕತೆಯಿದೆ. ಈ ಯೋಜನೆಯಿಂದ ಸಾರ್ವಜನಿಕರಿಗಾಗುವ ಅನುಕೂಲಗಳು ಬಗ್ಗೆ
ಮಾಹಿತಿ ಇಲ್ಲಿ ನೀಡಲಾಗಿದೆ.

Advertisement

ನಗರದ ಸರಕಾರಿ ಸಂಸ್ಥೆಗಳ ಮಾಹಿತಿ ಹಾಗೂ ಕಾರ್ಯಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಒಂದೇ ಕಡೆ ಮಾಹಿತಿ ಲಭ್ಯವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಓಪನ್‌ ಡೇಟಾ ಫ್ಲಾಟ್‌ಫಾರ್ಮ್ (ಮುಕ್ತ ಅಂಕಿ ಅಂಶ ವೇದಿಕೆ) ವ್ಯವಸ್ಥೆ ರೂಪಿಸಲಾಗುತ್ತಿದೆ.

ನಗರ ಪ್ರದೇಶದಲ್ಲಿ ಸರಕಾರದ ವಿವಿಧ ಇಲಾಖೆಗಳ, ಸಂಸ್ಥೆಗಳ ವಿವರ ಹಾಗೂ ಅವಶ್ಯ ಅಂಕಿ ಅಂಶಗಳು, ಯೋಜನೆಗಳ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಇದೊಂದು ಉಪಯುಕ್ತ ಸೌಲಭ್ಯವಾಗಿದೆ.

ಓಪನ್‌ ಡೇಟಾ ಫ್ಲಾಟ್‌ಫಾರ್ಮ್ ಸೌಲಭ್ಯವನ್ನು ಜಾರಿಗೆ ತರುವ ಬಗ್ಗೆ ಈಗಾಗಲೇ ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವಥ ನಾರಾಯಣ್‌ ಅವರು ಘೋಷಿಸಿದ್ದಾರೆ. ಸರಕಾರಿ ಕೆಲಸಗಳಲ್ಲಿ ಸಾರ್ವಜನಿಕರು ಭಾಗವಹಿಸಲು ಜನರಿಗೆ ಮುಕ್ತ ಮಾಹಿತಿ ಒದಗಿಸಲು ಇಂತಹ ವ್ಯವಸ್ಥೆಯೊಂದು ಆವಶ್ಯಕತೆ ಇದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಈ ಸೌಲಭ್ಯವನ್ನು ಮಂಗಳೂರು ಸಹಿತ ಮಹಾನಗರಗಳಲ್ಲೂ ರೂಪುಗೊಳ್ಳುವುದು ಅವಶ್ಯವಾಗಿದೆ.

ಓಪನ್‌ ಡೇಟಾ ವೇದಿಕೆ
ಬೆಂಗಳೂರಿನಲ್ಲಿ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಬೆಂಗಳೂರಿನ ಪ್ರಮುಖ ಸರಕಾರಿ ಸಂಸ್ಥೆಗಳ ಮಾಹಿತಿ, ಅಂಕಿ ಅಂಶಗಳು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಈ ಸಂಸ್ಥೆಗಳು ಕೈಗೊಂಡಿರುವ ಯೋಜನೆಗಳು, ಜಾರಿಗೆ ತಂದಿರುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯು ಒಂದೇ ಕಡೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರ ಜತೆಗೆ ಬೆಂಗಳೂರು ನಗರದ ರೆಸ್ತೆಗಳ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಜತೆಗೆ ಬೆಂಗಳೂರು ನಗರ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳು, ತಜ್ಞರ ಸಭೆಯನ್ನು ಕೂಡ ನಡೆಸಲು ನಿರ್ಧರಿಸಲಾಗಿದೆ. ಜನವರಿ ಅಂತ್ಯದೊಳಗೆ ಈ ಸೌಲಭ್ಯವನ್ನು ರೂಪಿಸುವ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

Advertisement

ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟು ಆನೇಕ ಯೋಜನೆಗಳು, ಸೌಲಭ್ಯಗಳು, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಸಹಿತ ವಿವಿಧ ಇಲಾಖೆಗಳಿಂದಲೂ ನಗರ ವ್ಯಾಪ್ತಿಯೊಳಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆ, ಮೆಸ್ಕಾಂ, ಮಹಾನಗರ ಪಾಲಿಕೆ ವಿವಿಧ ವಿಭಾಗಗಳು, ಕೇಬಲ ನಿರ್ವಹಣಾ ಸಂಸ್ಥೆಗಳು, ಒಳಚರಂಡಿ, ನೀರಿನ ಪೈಪ್‌ ಸೋರಿಕೆ ಸರಿಪಡಿಸಲು ಗುಂಡಿ ತೋಡುವುದು ಸಹಿತ ಯಾವುದಾದರೂ ಒಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ.

ಆದರೆ ಇವುಗಳ ಬಗ್ಗೆ ನಾಗರಿಕರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಓಪನ್‌ ಡೇಟಾ ವೇದಿಕೆಯಂತಹ (ಓಪನ್‌ ಡೇಟಾ ಫ್ಲಾಟ್‌ಫಾರ್ಮ್) ವ್ಯವಸ್ಥೆ ನಿಟ್ಟಿನಲ್ಲಿ ಉಪಯುಕ್ತವಾಗಲಿದೆ. ಮಳೆಗಾಲದಲ್ಲಿ ಭೂಕುಸಿತ, ರಸ್ತೆಗುಂಡಿಗಳ ಬಗ್ಗೆಯೂ ಪಾಲಿಕೆ ಅಧಿಕಾರಿಗಳಿಗೆ ಆ್ಯಪ್‌ನಲ್ಲಿ ತುರ್ತು ಹಾಗೂ ನಿಖರವಾಗಿ ಮಾಹಿತಿ ನೀಡಬಹುದಾಗಿದೆ.

ಪ್ರಸ್ತುತ ಡಿಜಿಟಲೀಕರಣ ಯುಗ. ಆನ್‌ಲೈನ್‌, ಆ್ಯಪ್‌ ವ್ಯವಸ್ಥೆ ಗಳು ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ಆಡಳಿತ ವ್ಯವಸ್ಥೆಗಳಲ್ಲಿ ದೂರವಾಣಿ, ಆನ್‌ಲೈನ್‌ ಜಾಗದಲ್ಲಿ ಇದೀಗ ಆ್ಯಪ್‌ಗ್ಳು ಪ್ರಾಮುಖ್ಯ ಪಡೆದುಕೊಂಡಿವೆ. ಸರಕಾರಿ ಸೇವೆಗಳು ಹಾಗೂ ಮಾಹಿತಿಗೆ ಆ್ಯಪ್‌ಗ್ಳ ಬಳಕೆಯಾಗುತ್ತಿವೆ. ನಗರಾಡಳಿತಗಳು ಆ್ಯಪ್‌ಗ್ಳ ಮೊರೆ ಹೋಗುತ್ತಿವೆ. ಬಹುತೇಕ ನಗರಗಳ ಆಡಳಿತ ವ್ಯವಸ್ಥೆಯ ವಿವಿಧ ವಿಭಾಗಗಳಲ್ಲಿ ಆ್ಯಪ್‌ಗ್ಳನ್ನು ರೂಪಿಸಿ ಸಾರ್ವಜನಿಕರಿಂದ ದೂರುಗಳು ಸ್ವೀಕರಿಸುವ, ಮಾಹಿತಿಗಳ ದಾಖಲೀಕರಣ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯನ್ನು ತೆಗೆದುಕೊಂಡರೆ ಸರಕಾರಿ ಸೇವೆಯಲ್ಲಿ ಆ್ಯಪ್‌ಗ್ಳ ಬಳಕೆ ಇದೆ. ಇಂತಹ ಕಾಲಘಟ್ಟದಲ್ಲಿ ಓಪನ್‌ ಡೇಟಾ ವೇದಿಕೆ ರೂಪಿಸುವುದು ಕಷ್ಟದ ಕೆಲಸವಲ್ಲ.

ಮಂಗಳೂರಿನಲ್ಲಿ ಸ್ಪಾರ್ಟ್‌ ನಗರ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಇದರಲ್ಲಿ ವ್ಯವಸ್ಥೆಗಳು ಕೂಡಾ ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಈ ಹಿನ್ನೆಲೆಯಲ್ಲಿ ಓಪನ್‌ ಡೇಟಾ ಫ್ಲಾಟ್‌ಫಾರ್ಮ್ ಸೇರಿದಂತೆ ಅಧುನಿಕ ವ್ಯವಸ್ಥೆ ಪೂರಕವಾಗುತ್ತದೆ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next