Advertisement
ಸರ್ಕಾರಿ ಕೆಲಸಗಳಲ್ಲಿ ಸಾರ್ವಜನಿಕರು ಭಾಗವಹಿಸಲು ಜನರಿಗೆ ಮುಕ್ತ ಮಾಹಿತಿ ಒದಗಿಸ ಅವಶ್ಯಕತೆ ಇದೆ. ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಬೆಂಗಳೂರಿನ ಪ್ರಮುಖ ಸರ್ಕಾರಿ ಸಂಸ್ಥೆಗಳ ಮಾಹಿತಿಯು, ಅಂಕಿ ಅಂಶಗಳು ಸಾರ್ವಜನಿಕರಿಗೆ ಮುಕ್ತವಾಗಿ ಲಭಿಸಬೇಕಿದೆ. ಹೀಗಾಗಿ, ಈ ಸಂಸ್ಥೆಗಳು ಕೈಗೊಂಡಿರುವ ಯೋಜನೆಗಳ, ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ಸಿಗುವಂತೆ “ಓಪನ್ ಡೇಟಾ ಪ್ಲಾಟ್‌ಫಾರ್ಮ್’ ಮಾಡಲಾಗುತ್ತದೆ.
Related Articles
Advertisement
ಅಭಿವೃದ್ಧಿಗೆ ನಿರ್ಣಯ: ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ನಗರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳ ವಿಚಾರ ಸಂಕಿರಣ ಹಾಗೂ ಕಾರ್ಯನಿರ್ವಹಣೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿಲಾಯಿತು. ಇಲ್ಲಿ ಮುಖ್ಯವಾಗಿ ಸಕಾಲ ಯೋಜನೆಯ ಯಶಸ್ವಿ ಅನುಷ್ಠಾನ ಹಾಗೂ ನಗರಾಭಿವೃದ್ಧಿಗೆ ಎಲ್ಲ ಇಲಾಖೆಗಳ ಅಗತ್ಯ ಸಮನ್ವಯತೆಯನ್ನು ಕಾಯ್ದುಕೊಳ್ಳುವ ಮೂಲಕ ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂಬ ನಿರ್ಣಯಕ್ಕೆ ಬರಲಾಯಿತು.
ಗೋಷ್ಠಿಯನ್ನು ಉದ್ದೇಶಿಸಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಬಿಬಿಎಂಪಿಯು ಸ್ಥಳೀಯ ಮಟ್ಟದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುಮತಿಯನ್ನು ಆನ್‌ಲೈನ್ ಮೂಲಕ ಪಡೆಯುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಗಣನೀಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆಗಾಗಿ ಪ್ರತ್ಯೇಕ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರು ನಗರವನ್ನು 3 ಡಿ ನಗರವನ್ನಾಗಿಸಲು ಪಾಲಿಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ನಗರದಲ್ಲಿ ಕೆರೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಉಳಿದಂತೆ ನಗರದಾದ್ಯಂತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು ಎಂದು ಹೇಳಿದರು. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಕಡಿವಾಣ ಹೇರಲು ವಲಯ ನಿಯಮವಾಳಿಗೆ ತಿದ್ದುಪಡಿ ತರಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಮೂರು ಲಕ್ಷ ವಾಣಿಜ್ಯ ಕಟ್ಟಡಗಳಿವೆ.
ಆದರೆ, ಬೆಸ್ಕಾಂನಿಂದ ಒಂದೂವರೆಪಟ್ಟು ಹೆಚ್ಚು ಕಟ್ಟಡಗಳು ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆದಿವೆ. ಈಗ ಇಂತಹ ಕಟ್ಟಡಗಳಿಗೆ ನೀರು, ವಿದ್ಯುತ್ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು.ಈ ನಿಯಮ ಜಾರಿಯಾದರೆ ಅಕ್ರಮ ಕಡಿಮೆಯಾಗಲಿದೆ. ಇನ್ನು ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಅಡ್ಡಿಯಾಗುತ್ತಿದ್ದು, ಈ ವಿಚಾರದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸದಿದ್ದರೆ ಕಾರ್ಯಾಚರಣೆ ಸುಲಭ ಎಂದರು. ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಮಣ ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು-ದೆಹಲಿ ಹೋಲಿಕೆ ಸರಿಯಲ್ಲ: ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ನೀರಿನ ವಿಚಾರದಲ್ಲಿ ಬೆಂಗಳೂರು ಹಾಗೂ ನವದೆಹಲಿ ಹೋಲಿಕೆ ಸರಿಯಲ್ಲ. ನವದೆಹಲಿಯಲ್ಲಿ 3 ಕೋಟಿ ಜನರಿಗೆ ನೀರು ನೀಡಲು 33 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ಆದರೆ, ಬೆಂಗಳೂರು ಜಲಮಂಡಳಿಯಲ್ಲಿ 1.2 ಕೋಟಿ ಜನರಿಗೆ ನೀರು ಕೇವಲ 4 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಳಚೆ ನೀರು ಕೆರೆ ಸೇರುತ್ತಿದೆ ಎಂಬ ದೂರು ಇದೆ. ಆದರೆ ಈಗ 1,500 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿಗಳನ್ನು ನಿರ್ಮಿಸಿ ಶೇ.50 ರಷ್ಟು ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತಿದೆ. ಸಣ್ಣ ರಸ್ತೆ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳಿಂದ ಒಳಚರಂಡಿ ನಿರ್ಮಾಣ ಕಷ್ಟವಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳ ಸಮನ್ವಯತೆ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ವೈಫಲ್ಯದ ಪರಿಣಾಮಗಳು ಪೊಲೀಸರ ಮೇಲೆ: ನಗರ ಸಂಚಾರ ವಿಭಾಗದ ಉಪ ಆಯುಕ್ತ ರವಿಕಾಂತೇಗೌಡ ಮಾತನಾಡಿ, ನಗರಾಭಿವೃದ್ಧಿ ಯೋಜನೆಗಳ ವೈಫಲ್ಯಗಳ ಫಲಿತಾಂಶವನ್ನು ಟ್ರಾಫಿಕ್ ಪೊಲೀಸರು ಅನುಭವಿಸುತ್ತಿದ್ದಾರೆ. ಹೀಗಾಗಿ, ಎಲ್ಲ ಇಲಾಖೆಗಳು ಯೋಜನೆ ರೂಪಿಸುವ ಮುನ್ನ ಎಲ್ಲ ಇಲಾಖೆಗಳನ್ನು ಒಳಗೊಳ್ಳಬೇಕಾದ ಅಗತ್ಯವಿದೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಳದ ಬಳಿಕ, ನಿಯಮ ಉಲ್ಲಂಘನೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿಯಲ್ಲಿ ಯಾವುದೇ ಪಾರ್ಕಿಂಗ್ ನಿಯಮವಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ವಾಹನ ನಿಲ್ಲುಸುತ್ತಾರೆ. ಅಲ್ಲದೆ, ನಗರಾಭಿವೃದ್ಧಿ ಯೋಜನೆಯಲ್ಲಿ ಪ್ರತಿಭಟನೆ ನಡೆಸುವವರಿಗೆ ಸೂಕ್ತ ಸ್ಥಳವನ್ನು ಗುರುತಿಸಬೇಕಿದೆ. ಅದರ ಜತೆಗೆ ಅನಾವಶ್ಯಕ ವಾಹನಗಳ ತಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.