ಬೆಂಗಳೂರು: ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಸೋಮವಾರ ದೇಶವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆ. ಬೆಂಗಳೂರಿನ ವಾಣಿವಿಲಾಸ ಮತ್ತು ಕೆಸಿ ಜನರಲ್ ಆಸ್ಪತ್ರೆ, ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಎಂದಿನಂತೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಮತ್ತೊಂದೆಡೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಒಪಿಡಿ ಚೀಟಿ ನೀಡುತ್ತಿದ್ದರೂ ಕೂಡಾ ಆಸ್ಪತ್ರೆ ಒಳಗೆ ಯಾವುದೇ ವೈದ್ಯರು ಕಾರ್ಯನಿರ್ವಹಿಸುತ್ತಿಲ್ಲ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ ಒಪಿಡಿ ವಾರ್ಡ್ ಗೆ ಬಂದ ರೋಗಿಳಿಗೆ ತುರ್ತು ಇದ್ದರೆ ತುರ್ತು ನಿಗಾ ಘಟಕಕ್ಕೆ ತೆರಳಲು ಸೂಚಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ವಿಕ್ಟೋರಿಯಾ ಆಸ್ಪತ್ರೆಯ ಮಕ್ಕಳ ವಾರ್ಡ್ ಸಮೀಪ ಮಗುವಿನ ಚುಚ್ಚು ಮದ್ದು, ಇತರೆ ಪರೀಕ್ಷೆ ನಡೆಸದೇ ವಾಪಸ್ ಕಳುಹಿಸುತ್ತಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ರೋಗಿಗಳು:
ಒಪಿಡಿ ತೆರೆದಿದೆ ಅಂತೀರಾ..ಆದರೆ ಅಲ್ಲಿ ವೈದ್ಯರೇ ಇಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ರೋಗಿಗಳಿಗೆ ತಮ್ಮ ಪ್ರತಿಭಟನೆ ಕುರಿತು ವೈದ್ಯರು ಮನವರಿಕೆ ಮಾಡಿದರು. ಆದರೆ ಒಪಿಡಿಯಲ್ಲಿ ತುರ್ತು ಇದ್ದರೆ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರು ಭರವಸೆ ನೀಡಿರುವುದಾಗಿ ವರದಿ ವಿವರಿಸಿದೆ.