ಹೈದರಾಬಾದ್: ತೆಲಂಗಾಣದ ಆಡಳಿತರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್)ಯ ನಾಲ್ವರು ಶಾಸಕರಿಗೆ ಲಂಚ ನೀಡಿ ಖರೀದಿಸಲು ಯತ್ನಿಸಿದ ವೇಳೆ ಪೊಲೀಸರು ದಿಢೀರ್ ದಾಳಿ ನಡೆಸಿ ಮೂವರನ್ನು ಬಂಧಿಸುವ ಮೂಲಕ ಆಪರೇಶನ್ ಕಮಲ ವಿಫಲಗೊಳಿಸಿದ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರೈಲಿ ರುಸ್ಸೋ ಭರ್ಜರಿ ಶತಕ: ಬಾಂಗ್ಲಾ ವಿರುದ್ಧ 205 ರನ್ ಗಳಿಸಿದ ದ.ಆಫ್ರಿಕಾ
ಬುಧವಾರ (ಅಕ್ಟೋಬರ್ 26) ರಾತ್ರಿ ಫಾರ್ಮ್ ಹೌಸ್ ವೊಂದರಲ್ಲಿ ಟಿಆರ್ ಎಸ್ ನ ಪ್ರಮುಖ ನಾಯಕರಿಗೆ ಸುಮಾರು ನೂರು ಕೋಟಿ ರೂಪಾಯಿ ಹಣದ ಆಮಿಷವೊಡ್ಡಿ, ಬಿಜೆಪಿಗೆ ಸೇರ್ಪಡೆಗೊಳ್ಳಲು ಆಹ್ವಾನ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಿಆರ್ ಎಸ್ ನ ಶಾಸಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಫಾರ್ಮ್ ಹೌಸ್ ನಲ್ಲಿ ಶಾಸಕರ ಖರೀದಿಗಾಗಿ ಹಣದ “ಡೀಲ್” ನಡೆಯುತ್ತಿದ್ದಾಗಲೇ ದಾಳಿ ನಡೆಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಟೀಫನ್ ರವೀಂದ್ರ ಎನ್ ಡಿಟಿವಿಗೆ ನೀಡಿರುವ ಮಾಹಿತಿಯಲ್ಲಿ ವಿವರ ನೀಡಿರುವುದಾಗಿ ವರದಿಯಾಗಿದೆ.
ಪ್ರಮುಖ ನಾಯಕರೊಬ್ಬರಿಗೆ ನೂರು ಕೋಟಿ ರೂಪಾಯಿ ಆಫರ್ ಹೊರತಾಗಿಯೂ ಉಳಿದ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. “ನಮಗೆ ಪಕ್ಷವನ್ನು ಬದಲಾಯಿಸುವಂತೆ ಲಂಚದ ಆಮಿಷವೊಡ್ಡಿರುವುದಾಗಿ ಟಿಆರ್ ಎಸ್ ಶಾಸಕರು ಆರೋಪಿಸಿರುವುದಾಗಿ ವರದಿ ಹೇಳಿದೆ.
ಟಿಆರ್ ಎಸ್ ಶಾಸಕರಿಗೆ ಆಪರೇಶನ್ ಕಮಲದ ಹೆಸರಿನಲ್ಲಿ ಹಣದ ಆಮಿಷವೊಡ್ಡಿರುವ ಪ್ರಕರಣದಲ್ಲಿ ಸತೀಶ್ ಶರ್ಮಾ , ಹರ್ಯಾಣ ಫರಿದಾಬಾದ್ ನ ಪುರೋಹಿತ ರಾಮ್ ಚಂದ್ರ ಭಾರ್ತಿ, ತಿರುಪತಿ ಮೂಲದ ಸ್ವಾಮೀಜಿ ಡಿ.ಸಿಂಹಯಾಜಿ ಮತ್ತು ಉದ್ಯಮಿ ನಂದಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.