Advertisement

ಒತ್ತಿನೆಣೆ ಗುಡ್ಡ 3ನೇ ಬಾರಿ ಕುಸಿತ, ಜಿಲ್ಲಾಧಿಕಾರಿ ಭೇಟಿ

02:08 PM Jun 13, 2017 | Team Udayavani |

ಬೈಂದೂರು: ಗುಡ್ಡವನ್ನು ಕೊರೆದು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿರುವ ಒತ್ತಿನೆಣೆಯಲ್ಲಿ ಸೋಮವಾರ ಮತ್ತೆ ಗುಡ್ಡ ಜರಿದಿದ್ದು ಮೂರನೇ ಬಾರಿಗೆ ಹೆದ್ದಾರಿ ತಡೆ ಉಂಟಾಗಿದೆ.

Advertisement

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದಿಂದ ಧಾರಾಕಾರ ನೀರು ಹರಿಯುತ್ತಿರುವ ಪರಿಣಾಮ ಮೇಲ್ಭಾಗದಲ್ಲಿರುವ ಕಲ್ಲು ಮಣ್ಣು ಉರುಳಿ ಬಿದ್ದಿದೆ. ಎರಡು ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಉಂಟಾಗಿದೆ. ಕೂಡಲೆ ತೆರವು ಕಾರ್ಯಪ್ರಾರಂಭಿಸಲಾಯಿತು. ರಸ್ತೆಯುದ್ದಕ್ಕೂ ಹರಿಯುವ ನೀರು ಹಾಗೂ ಮಣ್ಣಿನ ರಾಶಿಯಿಂದಾಗಿ ಚತುಷ್ಪಥದ ಒಂದು ಬದಿಯ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಉಳಿದಂತೆ ದೊಂಬೆ-ಕರಾವಳಿ, ಮಧ್ದೋಡಿ ಮಾರ್ಗ ದಲ್ಲಿ ಬಹುತೇಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಸಹ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾಯಿತು.

ಜಿಲ್ಲಾಧಿಕಾರಿ ವೀಕ್ಷಣೆ
ಎರಡು ಬಾರಿ ಗುಡ್ಡ ಕುಸಿತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡರೂ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದೆ ಸ್ಥಳೀಯರ ಅಸಮಾಧಾನಕ್ಕೆ ತುತ್ತಾಗಿದ್ದರು. ಸೋಮವಾರ ಮೂರನೇ ಬಾರಿ ಗುಡ್ಡ ಕುಸಿಯುತ್ತಿದ್ದಂತೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಅವರು ಗುಡ್ಡ ಕುಸಿದ ಜಾಗವನ್ನು ವೀಕ್ಷಿಸಿದ ಬಳಿಕ ಬದಲಿ ಮಾರ್ಗಗಳಾದ ದೊಂಬೆ ಹಾಗೂ ಮಧ್ದೋಡಿ ರಸ್ತೆಗಳನ್ನು ವೀಕ್ಷಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅಸಮರ್ಪಕ ಕಾಮಗಾರಿ ಹಾಗೂ ಕಂಪೆನಿ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಕುರಿತು ಕಂಪೆನಿ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಹೆಚ್ಚುವರಿ ಸಿಬಂದಿ ನಿಯೋಜನೆ ಜತೆಗೆ ಗುಡ್ಡ ಕುಸಿಯದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬದಲಿ ರಸ್ತೆಗಳಾದ ಹೇನ್‌ಬೇರು, ದೊಂಬೆ ಹಾಗೂ ಮಧ್ದೋಡಿ ರಸ್ತೆಗಳನ್ನು ಹತ್ತು ದಿನಗಳ ಒಳಗೆ ಪೂರ್ಣಗೊಳಿಸಲು ಆದೇಶ ನೀಡಲಾಗುವುದು. ಸ್ಥಳದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕೃಷಿ ಭೂಮಿಯಲ್ಲಿ ಜೇಡಿ ಮಣ್ಣು ಮಿಶ್ರಿತ ನೀರು ತುಂಬಿರುವ ಕುರಿತು ತಹಶೀಲ್ದಾರರಿಗೆ ವರದಿ ನೀಡಲು ತಿಳಿಸಲಾಗಿದೆ. ಗುಡ್ಡ ಕುಸಿತದಿಂದ ಉಂಟಾದ ನಷ್ಟಕ್ಕೆ ಸಂಪೂರ್ಣ ಐ.ಆರ್‌.ಬಿ. ಕಂಪೆನಿಯೇ ಹೊಣೆಯಾಗಿದೆ. ಮಳೆಗಾಲದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲಿದೆ ಎಂದರು.

ಯಡಿಯೂರಪ್ಪ ಸೂಚನೆ
ಒತ್ತಿನೆಣೆ ಘಟನೆಯ ಬಗ್ಗೆ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಒತ್ತಿನೆಣೆ ಘಟನೆ ಕುರಿತು ಹೆದ್ದಾರಿ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುವ ಕಂಪೆನಿಯ ಹಿರಿಯ ಅಧಿಕಾರಿಗಳ ಜತೆ ಮಾತ ನಾಡಿದ್ದೇನೆ. ಒತ್ತಿನೆಣೆ ಗುಡ್ಡದ ಭೌಗೋಳಿಕ ಅಂಶವನ್ನು ಅಧ್ಯಯನ ಮಾಡಿ ಕಾಮಗಾರಿ ನಡೆಸಬೇಕು ಹಾಗೂ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಅಪಾಯವಾಗುವ ಸಾಧ್ಯತೆಯಿರುವುದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕಾಮಗಾರಿ ನಡೆಸಲು ತಿಳಿಸಲಾಗಿದೆ ಎಂದರು.

Advertisement

ಕುಂದಾಪುರ ಎಸಿ ಶಿಲ್ಪಾ ನಾಗ್‌, ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ, ಜಿ.ಪಂ. ಸದಸ್ಯ ಸುರೇಶ್‌ ಬಟ್ವಾಡಿ, ಬಾಬು ಶೆಟ್ಟಿ, ಐ.ಆರ್‌.ಬಿ. ಪ್ರಾಜೆಕ್ಟ್ ಮ್ಯಾನೇ ಜರ್‌ ಯೋಗೇಂದ್ರಪ್ಪ, ಪಡುವರಿ ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಡಿ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next