Advertisement

ಅರ್ಥವಾಗುವವರಿಗೆ ಮಾತ್ರ

06:00 AM Jul 07, 2018 | |

“ಪಾರ್ಲೆಜಿಯಿಂದ ಗೂಗಲ್‌ ಜಿ ವರೆಗೆ ಇಲ್ಲಿ ಹೇಳಿದ್ದೇವೆ …’

Advertisement

– ನಿರ್ದೇಶಕ ಶಿವು ಸರಳಬೆಟ್ಟು ಹೀಗೆ ಹೇಳಿದರು. ಅವರ ಮಾತು ಅಲ್ಲಿಗೆ ನಿಲ್ಲಲಿಲ್ಲ. ಪಂಚಭೂತಗಳಿಂದ ಹಿಡಿದು ಹಿಂದಿನ ಕಾಲದ ಮೌಲ್ಯ, ಆದರ್ಶ, ಬದಲಾಗುತ್ತಿರುವ ಪ್ರವೃತ್ತಿ ಸೇರಿದಂತೆ ಅನೇಕ ವಿಚಾರಗಳನ್ನು ಮಾತನಾಡುತ್ತಾ ಬಂದರು. “ಇದು ನಾನು ಮಾಡಿದ ಕಥೆ ಎನ್ನುವುದಕ್ಕಿಂತ ನಮ್ಮ ಪೂರ್ವಿಕರು ಹೇಳಿದ ಕಥೆ ಎನ್ನಬಹುದು’ ಎಂದರು. ಚಿತ್ರದಲ್ಲಿ ಹೊಸತನವಿದೆ. ಆಧ್ಯಾತ್ಮವಿದೆ, ಮನರಂಜನೆ ಇದೆ … ಹೀಗೆ ಒಂದೇ ಸಮನೆ ಹೇಳುತ್ತಾ ಹೋದರು. ಅವರು ಹೇಳಿದ್ದು “ಜೀವನ ಯಜ್ಞ’ ಸಿನಿಮಾದ ಬಗ್ಗೆ. ಇದು ಶಿವು ಅವರ ಚೊಚ್ಚಲ ಸಿನಿಮಾ. ಸಿನಿಮಾ ಟೈಟಲ್‌ನಲ್ಲಿ “ಜಿ’ಯನ್ನು ದೊಡ್ಡದಾಗಿ ಬರೆದು ಅದರ ಮುಂದೆ “ವನ ಯಜ್ಞ’ ಎಂದು ಸೇರಿಸಲಾಗಿದೆ. ಅದಕ್ಕೆ ಕಾರಣ ನಿರ್ದೇಶಕರು ಈ ಚಿತ್ರದಲ್ಲಿ ಪಾರ್ಲೆಜಿಯಿಂದ ಹಿಡಿದು ಗೂಗಲ್‌ ಜಿ ವರೆಗೆ ಹೇಳಿದ್ದಾರಂತೆ. ನಿರ್ದೇಶಕ ಶಿವು ಅವರಿಗೆ ತನ್ನ ಸಿನಿಮಾ ಬಗ್ಗೆ ತುಂಬಾನೇ ಹೇಳಿಕೊಳ್ಳಬೇಕು, ಕಥೆ ಸಾರವನ್ನು ಪತ್ರಕರ್ತರಿಗೆ ಬಿಚ್ಚಿಡಬೇಕೆಂಬ ಹಂಬಲವೇನೋ ಇತ್ತು. ಆದರೆ, ಅವರು ಅದನ್ನು ಹೇಳುವಲ್ಲಿ ಎಡವುತ್ತಿದ್ದರು. ಸುತ್ತಿಬಳಸಿ, ಪಂಚಭೂತ, ಆಧ್ಯಾತ್ಮ, ಕಲಾತ್ಮಕ, ಕಮರ್ಷಿಯಲ್‌, ಪಾರ್ಲೆ-ಜಿ, ಗೂಗಲ್‌ ಜಿ … ಹೀಗೆ ಅನೇಕ ಅಂಶಗಳನ್ನು ಮಧ್ಯೆ ತಂದು ಸಾಕಷ್ಟು ಗೊಂದಲಮಯವಾಗಿಯೇ ಮಾತನಾಡಿದರು. ಅಂತಿಮವಾಗಿ ಈ ಸಿನಿಮಾದಲ್ಲಿ ಏನು ಹೇಳಲು ಹೊರಟಿರಬಹುದೆಂದು ಅರ್ಥಮಾಡಿಕೊಂಡವರಿಗೆ ಸಿಕ್ಕಿದ್ದಿಷ್ಟು, ಇಂದಿನ ಆಧುನಿಕ ಯುಗದಲ್ಲಿ ಹಳೆಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಅದನ್ನು ಮರೆಯದೇ ಹಿಂದಿನ ಕಾಲದ ಆದರ್ಶ, ಮೌಲ್ಯಗಳ ಜೊತೆ ಸಾಗಬೇಕೆಂಬುದನ್ನು ಹೇಳಲಾಗಿದೆ ಎಂದು. ಈ ಚಿತ್ರದಲ್ಲಿ 60ರಿಂದ 70 ಪಾತ್ರಗಳಿವೆಯಂತೆ. ಆದರೆ, ಚಿತ್ರದ ಪ್ರಮುಖ ನಾಲ್ಕು ಪಾತ್ರಗಳಿಗಷ್ಟೇ ಹೆಸರಿದೆಯಂತೆ. 

ಚಿತ್ರದಲ್ಲಿ ಶೈನ್‌ ಶೆಟ್ಟಿ, ಮನೋಜ್‌ ಪುತ್ತೂರು, ರಮೇಶ್‌ ಭಟ್‌, ಸೌಜನ್ಯ ಹೆಗ್ಡೆ, ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ಶೈನ್‌ ಶೆಟ್ಟಿಗೆ, ನಿರ್ದೇಶಕರು ಏನು ಕಥೆ ಹೇಳಿದರೆಂದು ಅರ್ಥವಾಗಲೇ ಇಲ್ಲವಂತೆ. ಕೊನೆಗೆ ಅವರ ಪಾತ್ರವನ್ನಷ್ಟೇ ಕೇಳಿಕೊಂಡು, ಅದನ್ನು ಅರ್ಥೈಸಿ ನಟಿಸಿದರಂತೆ. ಮತ್ತೂಬ್ಬ ನಟ ಮನೋಜ್‌ ಪುತ್ತೂರು ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರವನ್ನು ಕಿರಣ್‌ ರೈ ಹಾಗೂ ರಂಜನ್‌ ಶೆಟ್ಟಿ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಸ್ಲೆ ಮೈಕೆಲ್‌ ಸಂಗೀತ, ಸುರೇಂದ್ರ ಪಣಿಯೂರು ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next