Advertisement

ವ್ಯಾಘ್ರ ವ್ಯಾಮೋಹ ಲಾಂಛನಕ್ಕೆ ಮಾತ್ರವೇ?

06:00 AM Nov 12, 2018 | |

ಮಾರಿಷಸ್‌ನಲ್ಲಿ ಡೋಡೋ ಹಕ್ಕಿಯ ಸಂತತಿ ನಶಿಸಿದ ಲಾಗಾಯ್ತಿನಿಂದ ಅಲ್ಲಿ ಗೋಂದು ಸ್ರವಿಸುವ ಮರ ಪ್ರಭೇದ‌ಗಳಲ್ಲಿ ಒಂದಾದ ಅಕೇಷಿಯಾ ಬೆಳೆಯುತ್ತಲೇ ಇಲ್ಲ!  ಹುಲಿಗಳನ್ನು ಸಂಗೋಪಿಸುವುದೆಂದರೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ಉಳಿದೆಲ್ಲ ಪ್ರಾಣಿಗಳನ್ನೂ ಸಂಗೋಪಿಸಿದ ಹಾಗೆ.

Advertisement

ಆರು ದಶಕಗಳ ಹಿಂದಿನ ಮಾತು. ನಾನು ಮೈಸೂರಿನ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ “ಆರೋಗ್ಯ’ ತೆಗೆದುಕೊಳ್ಳುತ್ತಿದ್ದ ಮಾಸ್ತರು “ಹುಲಿಯಿಂದ ಕುಡಿಯುವ ನೀರು ಲಭ್ಯ’ ಅಂತ ಪದೇ ಪದೇ ಒತ್ತಿ ಹೇಳುತ್ತಿದ್ದರು. ನಮಗೋ ಅಚ್ಚರಿ. ಹುಲಿ, ಕುಡಿಯುವ ನೀರು ಎತ್ತಿಂದೆತ್ತಣ ಸಂಬಂಧ ಎಂದು ಅವರ ಮಾತಿಗೆ ಒಳಗೊಳಗೇ ನಗುತ್ತಿದ್ದೆವು. “ನಿಜ ಕಣಪ್ಪ ನಾನು ಹೇಳ್ಳೋದು. ಹುಲಿಗೆ ಹುಲ್ಲು ಮೇಯುವ ಪ್ರಾಣಿಗಳೇ ಆಹಾರ. ಹುಲಿಗಳ ಸಂಖ್ಯೆ ಕಡಿಮೆಯಾದರೆ ಹೇರಳವಾಗಿ ಸಸ್ಯ ಸಂಪತ್ತು ನಾಶವಾಗುವುದು. ನೆಲ ನೀರು ಹಿಡಿದಿಟ್ಟುಕೊಳ್ಳಲಾಗದೆ ಅಂತರ್ಜಲ ಅಷ್ಟರಮಟ್ಟಿಗೆ ಬರಿದಾಗುತ್ತದೆ ಅಲ್ಲವೇ?’ ಎಂದು ಗುರುಗಳು ವಿವರಿಸಿದಾಗಲೇ ನಮಗೆ ಅರಿವಾಗಿದ್ದು. 

ತರ್ಕ ಸರಳವೇ ಇದೆ. ಒಂದು ಮರ ನಾಶವಾದರೆ ಅದರ ಸುತ್ತಲ ಅಮೂಲ್ಯ ಮಣ್ಣು ಹರಡಿಹೋಗಿ ನೆಲ ಪಾಳಾಗುವುದು. ಚೆಲ್ಲಾಪಿಲ್ಲಿಯಾದ ಮಣ್ಣು ಜಲಮೂಲಗಳನ್ನು ಸೇರಿ ಹೂಳಾಗುವುದರ ಪರಿಣಾಮ ಗೊತ್ತೇ ಇದೆ. ಕೆರೆ, ಸರೋವರಗಳಲ್ಲಿ ಬಗ್ಗಡ. ನದಿಯ ನೀರಿನ ಸರಾಗ ಚಲನೆಗೆ ತಡೆ. ಹುಲಿಗಳಷ್ಟೇ ಅಲ್ಲ ಸಿಂಹ, ಚಿರತೆಗಳೂ ಈ ನಿಟ್ಟಿನಲ್ಲಿ ಮನುಷ್ಯರಿಗೆ ಉಪಕಾರಿಗಳೇ. ಈ ವಾಸ್ತವವನ್ನು ನಿವೇದಿಸಿಕೊಳ್ಳಲು ಕಾರಣವಿದೆ. ಇತ್ತೀಚೆಗೆ ಮನುಷ್ಯ ಹುಲಿಯನ್ನು ಕೊಂದ ಎರಡು ಪ್ರಸಂಗಗಳು. ಒಂದು ಮಹಾರಾಷ್ಟ್ರದ ಬೊರಟಿ ಅರಣ್ಯ ಪ್ರದೇಶದಲ್ಲಿ “ನರಭಕ್ಷಕ’ ಎಂದು ಆರೋಪಿಸಿ “ಅವನಿ’ ಎಂಬ ಹೆಣ್ಣು ಹುಲಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅದರ 10 ತಿಂಗಳ ಎರಡು ಮರಿಗಳು ಈಗ ಅನಾಥ. ಈ ಮನಕಲಕುವ ಘಟನೆ ಮರೆಯುವ ಮುನ್ನವೇ ಉತ್ತರ ಪ್ರದೇಶದ ಲಖನೌಗೆ 210 ಕಿ.ಮೀ. ದೂರದ ದುಧ್ವಾ ಹುಲಿ ಸಂರಕ್ಷಕ ಕ್ಷೇತ್ರದಲ್ಲೇ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತೆನ್ನುವ ಕಾರಣಕ್ಕೆ 10 ವರ್ಷದ ಹೆಣ್ಣು ಹುಲಿಯನ್ನು ದೊಣ್ಣೆಗಳನ್ನು ಹಿಡಿದು ಅಟ್ಟಾಡಿಸಿ ಬಡಿದು, ಟ್ರಾÂಕ್ಟರ್‌ ಹರಿಸಿ ಕೊಂದ ಭೀಕರ ಕೃತ್ಯ ವರದಿಯಾಗಿದೆ. ಅಬ್ಬ! ಮನುಷ್ಯ ನೀನಾಗಬೇಕೇ ಇಷ್ಟು ಕ್ರೂರಿ? ಮೂಕ ಪ್ರಾಣಿಗಳಿಗೆ ತಮ್ಮ ಅಳಲು ತೋಡಿಕೊಳ್ಳಲು ನಮಗಿರುವಂತೆ ಪ್ರತಿನಿಧಿತ್ವವೇ?  ಪಂಚಾಯ್ತಿಯೇ? ಶಾಸನ ಸಭೆಯೇ? ಅವು ಮನುಷ್ಯರ ದಯಾಪರತೆ, ವಿಶ್ವಾಸವನ್ನೇ ಅವಲಂಬಿಸಿವೆ.

ವಿಕಸನದಲ್ಲಿ ಹುಲಿಗಳೆಂಬ “ದೊಡ್ಡ ಮಾರ್ಜಾಲಗಳು’ ತಮ್ಮ  ಅಸಿತ್ವಕ್ಕಾಗಿ ಬೇಟೆಯಾಡುವ ಮೂಲ ಪರಭಕ್ಷಗಳೆನ್ನುವುದನ್ನು ನಾವು ಮರೆಯಬಾರದು. ಕಾರಣವಿಲ್ಲದೇ ಯಾವುದೇ ಪ್ರಾಣಿ (ಮನುಷ್ಯನ ಹೊರತಾಗಿ ಎನ್ನಬಹುದೇನೋ!) ಆಕ್ರಮಣಕಾರಿಯಲ್ಲ. ಹಸಿವಿಲ್ಲದೆ ಆಹಾರ ಸೇವಿಸುವ ಪ್ರಾಣಿ ಮನುಜನಷ್ಟೆ ಎನ್ನುವ ಮಾತಿದೆ. ಪ್ರಾಣಿಗಳಿಗೆ ನಾಳೆಯ ಸಲುವಾಗಿ ಆಹಾರ ಕೂಡಿಡುವ ಜಾಯಮಾನವಿಲ್ಲ. ಎಲ್ಲಿಯಾದರೂ ಹುಲಿಯೋ ಚಿರತೆಯೋ ಕಾಣಿಸಿಕೊಂಡರೆ ದಿನಗಟ್ಟಲೆ ಅದು ಸುದ್ದಿಯಾಗಬೇಕಿಲ್ಲ. ಬೋನಿಗೆ ತಳ್ಳಿದರಾ, ಕೊಂದರಾ, ಯಾರನ್ನಾದರೂ ಭಕ್ಷಿಸಿತಾ ಎನ್ನುವ ಪ್ರಶ್ನೆಗಳೇ. ಅವು ಏಕೆ ಬಂದವು, ಅವುಗಳ ಅಸಹಾಯಕತೆಯೇನು ಎಂದು ಆಲೋಚಿಸಲು ನಾವು ವ್ಯವಧಾನವನ್ನೇ ಕಲ್ಪಿಸಿಕೊಳ್ಳುವುದಿಲ್ಲ. ನಮ್ಮ ಸರಹದ್ದಿಗೆ ಹಂತಕನೊಬ್ಬ ನುಸುಳಿದ್ದಾನೆಂದೇ ಆತಂಕ. ಜಾರ್ಜ್‌ ಬರ್ನಾರ್ಡ್‌ ಷಾ “ಮನುಷ್ಯ ಹುಲಿಯನ್ನು ಸಾಯಿಸಿದರೆ ಅದು ಶಿಕಾರಿ. ಆದರೆ ಅದೇ ಹುಲಿ ಮನುಷ್ಯನನ್ನು ಸಾಯಿಸಲೆತ್ನಿಸಿದರೆ ಅದು ರೌದ್ರತೆ!’ ಎಂದು ವ್ಯಂಗ್ಯವಾಡಿದ್ದರು. ಇಪ್ಪೊಂದನೆಯ ಶತಮಾನದ ಈ ದಿನಮಾನಗಳಲ್ಲಿ ಹುಲಿಯನ್ನೂ ಒಳಗೊಂಡಂತೆ ಪೀಡಕವೆನ್ನಿಸುವ ಯಾವುದೇ ಮೃಗಗಳನ್ನಾಗಲೀ ಜೀವಂತವಾಗಿ ಹಿಡಿಯುವ, ಕಟ್ಟಿಹಾಕುವ ತಂತ್ರಜ್ಞಾನವಿದೆ, ಸೂಕ್ತ ಪರಿಕರಗಳಿವೆ. ಮೃಗಗಳು ಮನುಷ್ಯನ ಸರಹದ್ದನ್ನು ಅತಿಕ್ರಮಿಸಿಲ್ಲ. ತದ್ವಿರುದ್ಧವಾಗಿ ಮನುಷ್ಯನೇ ಅವುಗಳ ಪ್ರಾಂತ್ಯಗಳನ್ನು ಹೊಕ್ಕಿದ್ದಾನೆ, ಅವುಗಳ ಪರ್ಯಾವರಣದ ಸಮತೋಲನವನ್ನು ಘಾಸಿಗೊಳಿಸಿದ್ದಾನೆ. ಮನುಷ್ಯನಿಗಿಂತಲೂ ಮೊದಲು ಸಹಸ್ರಾರು ಪ್ರಾಣಿವರ್ಗಗಳು ಇಳೆಯಲ್ಲಿ ನೆಲೆಗೊಂಡಿವೆ. 

ವಿಪರ್ಯಾಸವೇನು ಗೊತ್ತೇ? ಮನುಷ್ಯ ಭೂಮಿಯನ್ನು ತನ್ನ ಸ್ವಂತ ಆಸ್ತಿಯೆಂದೂ ಪ್ರಾಣಿಗಳಿಗೆ ತಾನು ಅದನ್ನು ಬಾಡಿಗೆಗೆ ಕೊಟ್ಟಿದ್ದೇನೆಂದೂ ಭಾವಿಸಿದ್ದಾನೆ! ಮನುಷ್ಯನ ಚಟುವಟಿಕೆಗಳು ಪ್ರಾಣಿಗಳ ಸಂಖ್ಯೆಯ ಶೇಕಡ 60ರ‌ಷ್ಟನ್ನು ಧ್ವಂಸಗೊಳಿಸಿವೆ. ಕಾಡುಗಳು ಜಲಾನಯನ ಪ್ರದೇಶಗಳೆನ್ನುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾಗಿ ನಮಗೆ ಶುದ್ಧ ಗಾಳಿ, ಶುದ್ಧ ನೀರು ಲಭ್ಯವಾಗಲೆಂಬ ಸ್ವಾರ್ಥದ ದೃಷ್ಟಿಯಿಂದಲಾದರೂ ವನ, ವನ್ಯ ಮೃಗಗಳನ್ನು ಸಂರಕ್ಷಿಸಬೇಕಿದೆ. ಅಷ್ಟೇಕೆ, “ಆಹಾರ ಚಕ್ರ ಆವೃತ್ತಿ’ ಏರುಪೇರಿಲ್ಲದೆ ಸಾಗುವಲ್ಲಿ ಹುಲಿಯ ಪಾತ್ರ ಮಹತ್ವದ್ದು.  ಕಾಡು ತಾಪ ನಿಯಂತ್ರಕವೂ ಹೌದು. ಕಾಡನ್ನು ವಿವೇಚನೆಯಿಲ್ಲದೆ ನಾಡಾಗಿಸ ಹೊರಟು ವನ್ಯ ಜೀವಿಗಳನ್ನು ಒಕ್ಕಲೆಬ್ಬಿಸುವುದೂ ಮನುಷ್ಯನೇ. ತನ್ನ ಮೇಲೆ ಎರಗುತ್ತವೆ ಎಂದು ದೂರುವವನೂ ಅವನೇ. ಮಾರಿಷಸ್‌ನಲ್ಲಿ ಡೋಡೋ ಹಕ್ಕಿಯ ಸಂತತಿ ನಶಿಸಿದ ಲಾಗಾಯ್ತಿನಿಂದ ಅಲ್ಲಿ ಗೋಂದು ಸ್ರವಿಸುವ ಮರ ಪ್ರಭೇದ‌ಗಳಲ್ಲೊಂದಾದ ಅಕೇಷಿಯಾ ಬೆಳೆಯುತ್ತಲೇ ಇಲ್ಲ!  ಹುಲಿಗಳನ್ನು ಸಂಗೋಪಿಸುವುದೆಂದರೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ಉಳಿದೆಲ್ಲ ಪ್ರಾಣಿಗಳನ್ನೂ ಸಂಗೋಪಿಸಿದ ಹಾಗೆ. 

Advertisement

ಮಹಾಭಾರತದ ಉದ್ಯೋಗಪರ್ವದ ಸಂದೇಶವೊಂದು ಈ ನಿಟ್ಟಿನಲ್ಲಿ ಉಲ್ಲೇಖಾರ್ಹ: “ಹುಲಿಗಳಿರುವ ಅರಣ್ಯ ಹಾಳುಮಾಡದಿರಿ. ಅವನ್ನು ಅರಣ್ಯದಿಂದ ಅಟ್ಟಬೇಡಿ. ಅರಣ್ಯವಿಲ್ಲದೆ ಹುಲಿಗಳು ಅಳಿದಾವು. ಹುಲಿಗಳಿಲ್ಲದೆ ಅರಣ್ಯ ನಶಿಸೀತು’.

ಹುಲಿಗಳ ಸಂರಕ್ಷಣೆಯ ಹೊರತಾಗಿ ಪರಿಸರ ಸಂರಕ್ಷಣೆ ಅಸಾಧ್ಯ. ಸಸ್ಯಾಹಾರಿ ಪ್ರಾಣಿಗಳೇ ಹುಲಿಯ ಆಹಾರ. ಇಡಿಯಾದ ಕನಿಷ್ಠತಮ ನಿರ್ದಿಷ್ಟ ಸಸ್ಯಾಹಾರಿ ಪ್ರಾಣಿಭರಿತ ಅರಣ್ಯ ಪ್ರದೇಶ ಹುಲಿಗಳಿಗೆ ಬೇಟೆಯಾಡಲು ಅನಿವಾರ್ಯ. ಇತರೇ ಪ್ರಾಣಿಗಳು ದೊರಕದಿದ್ದಾಗ ಮಾತ್ರ ಹುಲಿ ಮನುಷ್ಯರ ಮೇಲೆ ಆಕ್ರಮಣ ಮಾಡುತ್ತದೆ. ಮುಪ್ಪಾದ, ಓಡಲಾಗದ, ಇಲ್ಲವೇ ಗಾಯಗೊಂಡ ಹುಲಿ ಮನುಷ್ಯನ ಮೇಲೆರಗುವ ಸಂಭವವಿದೆ. ಸಾಮಾನ್ಯವಾಗಿ ಹುಲಿಗಳು ಮನುಜರಿಂದ ದೂರವಿರಲೇ ಬಯಸುತ್ತವೆ. ಮನುಷ್ಯ ಹುಲಿಗೆ ಭಯಪಡುವುದಕ್ಕಿಂತಲೂ ಹುಲಿಯೇ ಮನುಷ್ಯನಿಗೆ ಹೆದರುವುದು. ವೃಥಾ ಭಯ, ಗಾಬರಿಯಿಂದ ಹುಲಿಗಳ ಸಂಖ್ಯೆಯನ್ನು ಮನುಷ್ಯ ಹೇಳ ಹೆಸರಿಲ್ಲದಂತೆ ಕ್ಷೀಣವಾಗಿಸುತ್ತಿದ್ದಾನೆ.

ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ. ನಮ್ಮ ಕರೆನ್ಸಿ ನೋಟು, ನಾಣ್ಯಗಳಲ್ಲಿ ಅನ್ನ, ಆಹಾರ ಲಭ್ಯತೆಗೆ ಕಾರಣೀಭೂತವಾಗಿರುವ ಘನಗಾಂಭೀರ್ಯದ ಹುಲಿಯ ಚಿತ್ರವಿರುವುದು ನಿಜಕ್ಕೂ ಅರ್ಥಪೂರ್ಣ. ಹುಲಿ ಧೈರ್ಯ, ಸಾಹಸ, ಮುಂದಾಳತ್ವ, ಹೋರಾಟ ಪ್ರವೃತ್ತಿಯ ಪ್ರತೀಕವೂ ಹೌದು.  ಜಗ‌ತ್ತಿನಲ್ಲಿ ಸುಮಾರು 5000 ಹುಲಿಗಳಿದ್ದು ಒಂದೂವರೆ ಲಕ್ಷ ಮಂದಿಗೆ ಒಂದೇ ಹುಲಿ! ಭಾರತ‌ದಲ್ಲಿ 3000 ಹುಲಿಗಳು. ಅಂದರೆ ಜಗತ್ತಿನ ಒಟ್ಟು ಸಂಖ್ಯೆಯ ಶೇಕಡ 60 ರಷ್ಟಿರುವುದು ಸಮಾಧಾನಕರ. ಆದರೆ ಹುಲಿಗಳ ಸಂಖ್ಯೆ ವೃದ್ಧಿಸುವುದಿರಲಿ ಈ ಪ್ರಮಾಣ ಕಡೇ ಪಕ್ಷ ಸ್ಥಿರವಾಗಿರುವಂತಾದರೂ ನಿಗಾ ವಹಿಸಬೇಕಾಗಿರುವುದು ಎಲ್ಲರ ಹೊಣೆ. ಹುಲಿಯ ತುಪ್ಪುಳ, ಉಗುರು, ಚರ್ಮ, ಹಲ್ಲು ಮುಂತಾದ ವಸ್ತುಗಳನ್ನು ಕೊಳ್ಳದಿರುವ ಮೂಲಕ ಹುಲಿ ಬೇಟೆಗಾರರನ್ನು ನಿರುತ್ತೇಜಿಸಬೇಕು. ಪರಿಸರ ಜೋಪಾಸನೆ ಕುರಿತ ಅನುಸಂಧಾನ ಇಂದು ಸಾಗಬೇಕಾದ್ದು ವ್ಯಕ್ತಿ ವ್ಯಕ್ತಿಗಳ ನಡುವೆಯಾಗಲಿ, ದೇಶ ದೇಶಗಳ ನಡುವೆಯಾಗಲಿ ಅಲ್ಲ. ಬದಲಿಗೆ ವ್ಯಕ್ತಿ ಮತ್ತು ಇತರೆ ಜೀವಿಗಳ ಪ್ರಭೇದಗಳ ನಡುವೆ. ಇಷ್ಟಕ್ಕೂ ಪರಿಸರ ಉಳಿಸಿಕೊಳ್ಳುವುದು ಸುಖಭೋಗಕ್ಕಲ್ಲ, ನಮ್ಮ ಉಳಿವಿಗಾಗಿ. 

– ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next