Advertisement

ಕಾಮೆಡ್‌-ಕೆ ಹಾಗೂ ಕೆ- ಸಿಇಟಿ ಪರೀಕ್ಷೆ ಬದಲಾಗಿ ಒಂದೇ ಸಿಇಟಿ: ಎಚ್ಚರಿಕೆ ಅಗತ್ಯ

11:46 PM Jun 22, 2022 | Team Udayavani |

ಬೆಂಗಳೂರು: ಒಂದೇ ಕಾಲೇಜಿನ ಎಂಜಿನಿಯರಿಂಗ್‌ ಸೀಟಿಗೆ ಕಾಮೆಡ್‌-ಕೆ ಹಾಗೂ ಕೆ- ಸಿಇಟಿ ಪರೀಕ್ಷೆ ಬದಲಾಗಿ ಒಂದೇ “ಸಿಇಟಿ’ ನಡೆಸುವ ರಾಜ್ಯ ಸರಕಾರದ ಕ್ರಮ ಪರೀಕ್ಷಾ ಹಿತದೃಷ್ಟಿಯಿಂದ ಉತ್ತಮವಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಜಾಗ್ರತೆ ವಹಿಸಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸುಗಳ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿರುವ ಶೇ. 45ರಷ್ಟು ಸೀಟುಗಳ ಪ್ರವೇಶಕ್ಕಾಗಿ ನಡೆಸಲಾಗುತ್ತಿದೆ. ಅದೇ ರೀತಿ ಖಾಸಗಿ ಕಾಲೇಜುಗಳಲ್ಲಿರುವ ಶೇ. 30 ಸೀಟು ಹಾಗೂ ಶೇ. 25 ಸೀಟುಗಳನ್ನು ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದಡಿ ಸೀಟುಗಳನ್ನು ಕಾಮೆಡ್‌-ಕೆ ಪರೀಕ್ಷೆ ನಡೆಸಿ ಹಂಚಿಕೆ ಮಾಡಲಾಗುತ್ತಿದೆ.

ಈ ಎರಡೂ ಪರೀಕ್ಷೆಗಳ ಬದಲಾಗಿ ಒಂದೇ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆಯಾದರೂ, ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ತಜ್ಞರ ಅನಿಸಿಕೆಯಾಗಿದೆ.

ಕಾಮೆಡ್‌-ಕೆ ಪರೀಕ್ಷೆಯನ್ನು ರಾಜ್ಯದ 150 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ದೇಶದ ವಿವಿಧ 40 ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್‌-ಕೆ) “ಯುಜಿಇಟಿ-2022′ ಪರೀಕ್ಷೆಯನ್ನು ನಡೆಸುತ್ತದೆ.

ಹೀಗಾಗಿ, ದೇಶಾದ್ಯಂತ 154 ನಗರಗಳ 230 ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿದೆ. ಒಂದು ವೇಳೆ ಖಾಸಗಿಯವರ ಅನುಕೂಲಕ್ಕಾಗಿ ರಾಜ್ಯದಲ್ಲಿರುವ ವೃತ್ತಿಪರ ಕೋರ್ಸ್‌ಗಳ ಸೀಟಿಗೆ ದೇಶಾದ್ಯಂತ ಒಂದೇ ಪರೀಕ್ಷೆ ನಡೆಸಿದರೆ, ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಗಳಿರುತ್ತವೆ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ.

Advertisement

ಸಭೆಯಲ್ಲಿ ಚರ್ಚೆಯಾಗಿಲ್ಲ
ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ಇದೊಂದು ಮಹತ್ವದ ಅಂಶವಾಗಿದೆ. ಈ ಬಗ್ಗೆ ಚರ್ಚೆ ನಡೆಸಿಲ್ಲ. ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ನಿರ್ಧರಿಸಲಾಗುತ್ತದೆ. ಸದ್ಯ ಒಂದೇ ಪರೀಕ್ಷೆ ನಡೆಸಲು ಮಾತ್ರ ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಮತ್ತು ಸೀಟು ಹಂಚಿಕೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದರ ಬಗ್ಗೆ ಬುಧವಾರದ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಹೇಳುತ್ತಾರೆ.

ಸ್ಪಷ್ಟ ನಿಲುವು ತಾಳಬೇಕು
ಸದ್ಯ ಸೀಟು ಹಂಚಿಕೆ ಮತ್ತು ಶುಲ್ಕ ನಿಯಮಗಳಲ್ಲಿ ಈಗಿರುವ ನಿಯಮವನ್ನೇ ಉಳಿಸಿಕೊಂಡು ಪರೀಕ್ಷೆ ನಡೆಸುವುದರಲ್ಲಿ ಮಾತ್ರ ಒಂದೇ ಪರೀಕ್ಷೆ ನಡೆಸಬಹುದಾ?, ಅನ್ಯ ರಾಜ್ಯಗಳಿಗೆ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ನಿಯಮ ರೂಪಿಸಬೇಕಾ? ಅಥವಾ ಸದ್ಯ ಕಾಮೆಡ್‌-ಕೆ ಅಡಿ ನೀಡುತ್ತಿರುವ ಸೀಟುಗಳಿಗೆ ಮಾತ್ರ ಒಂದು ನಿಯಮ ರೂಪಿಸಬೇಕಾ ಎಂಬುದರ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಸ್ಪಷ್ಟವಾದ ನಿಲುವು ತಾಳಬೇಕಿದೆ ಎಂದು ತಿಳಿಸುತ್ತಾರೆ.

ಎರಡೂ ಪರೀಕ್ಷೆಯನ್ನು ವಿಲೀನಗೊಳಿಸಲು ಮಾತ್ರ ಈಗ ಖಾಸಗಿ ಕಾಲೇಜುಗಳು ಒಪ್ಪಿಗೆ ಸೂಚಿಸಿವೆ. ಅಧಿಕೃತವಾಗಿ ಪತ್ರ ವ್ಯವಹಾರ ನಡೆಸಬೇಕಿದೆ. ಆ ಸಮಯದಲ್ಲಿ ಸೀಟು ಹಂಚಿಕೆ ಮತ್ತು ನಿಯಮಗಳ ಕುರಿತು ಚರ್ಚಿಸಲಾಗುತ್ತದೆ.
– ಎಸ್‌. ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next