ಚೆನ್ನೈ: ಲೈಂಗಿಕ ದೌರ್ಜನ್ಯದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನ ಮನ್ಗಾಡು ಎಂಬಲ್ಲಿ ಕಳೆದ ವಾರ ನಡೆದಿದ್ದು, ಆಕೆ ಬರೆದಿದ್ದ ಸೂಸೈಡ್ ನೋಟ್ ಎಲ್ಲರ ಗಮನಸೆಳೆದಿರುವುದಾಗಿ ವರದಿ ತಿಳಿಸಿದೆ.
ಶನಿವಾರ ಸೂಸೈಡ್ ನೋಟ್ ಪತ್ತೆಯಾಗಿದ್ದು, “ಲೈಂಗಿಕ ದೌರ್ಜನ್ಯ ಕೊನೆಗೊಳ್ಳಲಿ” ಎಂಬ ತಲೆಬರಹದಡಿಯಲ್ಲಿ ಆಕೆ ತನ್ನ ಮನಸ್ಸಿನ ಬೇಗುದಿಯನ್ನು ಉಲ್ಲೇಖಿಸಿದ್ದಳು. ಲೈಂಗಿಕ ದೌರ್ಜನ್ಯಕ್ಕೊಳಗಾದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಏನನ್ನೂ ಹೇಳಿಕೊಳ್ಳಲಾರದ ಸ್ಥಿತಿ ತಲುಪಿಬಿಟ್ಟಿದ್ದೆ. ಅಷ್ಟೇ ಅಲ್ಲ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಪೋಷಕರು ಕಲಿಸಿಕೊಡಬೇಕು” ಎಂದು ಮನವಿ ಮಾಡಿಕೊಂಡಿದ್ದಳು.
ಪ್ರತಿಯೊಬ್ಬ ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಸಿಕೊಡಬೇಕು. ಸಂಬಂಧಿಗಳನ್ನಾಗಲಿ, ಶಿಕ್ಷಕರನ್ನಾಗಲಿ ಯಾರನ್ನೂ ನಂಬಬೇಡಿ. ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಸುರಕ್ಷಿತ ಸ್ಥಳವಾಗಿದೆ ಎಂದು ಸೂಸೈಡ್ ನೋಟ್ ನಲ್ಲಿ ವಿದ್ಯಾರ್ಥಿನಿ ಬರೆದಿರುವುದಾಗಿ ವರದಿ ವಿವರಿಸಿದೆ.
ಶಾಲೆಯಾಗಲಿ ಅಥವಾ ಸಂಬಂಧಿಗಳ ಮನೆ ಕೂಡಾ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂದು ವಿದ್ಯಾರ್ಥಿನಿ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಳೆ. ಈ ಹಿಂದಿನ ಶಾಲೆಯಲ್ಲಿ ಯಾರೋ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಶಾಲೆಯನ್ನು ಬದಲಾಯಿಸಿದ ಮೇಲೂ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯ ನಿಂತಿಲ್ಲವಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿರುವುದಾಗಿ ವರದಿ ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದು, ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆಯ ಸೂಸೈಡ್ ನೋಟ್ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಮೊಬೈಲ್ ಫೋನ್ ನಲ್ಲಿರುವ ಕಾಲ್ ರೆಕಾರ್ಡ್ ಅನ್ನು ಪರಿಶೀಲಿಸಿದ್ದು, ಆಕೆಯ ಸಂಪರ್ಕದಲ್ಲಿರುವವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.