Advertisement

ಒಪಿಡಿ ಬಂದ್‌ಗೆ ಕೇವಲ ನೈತಿಕ ಬೆಂಬಲ

10:36 AM Jan 03, 2018 | |

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ವಿರೋಧಿಸಿ ಮಂಗಳವಾರ ನಡೆದ ರಾಷ್ಟ್ರವ್ಯಾಪಿ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆಗಳ ಬಂದ್‌ ಕರೆಗೆ ರಾಜ್ಯದಲ್ಲಿ ನಿರಾಸೆ ಸ್ಪಂದನೆ ವ್ಯಕ್ತವಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಬೆರಳೆಣಿಕೆ ಆಸ್ಪತ್ರೆಗಳು ಹೊರತುಪಡಿಸಿ, ಉಳಿದೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ ಎಂದಿನಂತೆ ನಡೆದಿತ್ತು. ಈ ನಡುವೆ ಲೋಕಸಭೆಯಲ್ಲಿ ವಿಧೇಯಕವನ್ನು ಸ್ಥಾಯಿ ಸಮಿತಿಗೆ ವಹಿಸುವ ನಿರ್ಧಾರ ಮಾಡಿದ್ದ ಸುದ್ದಿ ತಿಳಿಯುತ್ತಿದ್ದಂತೆ ಹೋರಾಟದ ತೀವ್ರತೆ ಇನ್ನಷ್ಟು ಕಡಿಮೆಯಾಗಿದೆ. 

Advertisement

ಭಾರತೀಯ ವೈದ್ಯಕೀಯ ಸಂಘ(ಐಎಂಎ) ನಿರ್ದೇಶನಂತೆ ಮಂಗಳವಾರ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಳಿಸಲು ಐಎಂಎ ರಾಜ್ಯಘಟಕ ನಿರ್ಧರಿಸಿ, ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಿತ್ತು. ಬೆಂಗಳೂರಿನ ಮಣಿಪಾಲ್‌, ಕಿಮ್ಸ್‌, ಮಲ್ಯ, ಅಪೋಲೋ, ಫೋರ್ಟಿಸ್‌, ಜೈನ್‌ ಆಸ್ಪತ್ರೆ, ಎಂ.ಎಸ್‌.ರಾಮಯ್ಯ ಸೇರಿದಂತೆ ಬಹುತೇಕ ಆಸ್ಪತ್ರೆಯ ವೈದ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದರು.  ಆದರ ಜತೆಗೆ ಹೊರ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡಿದ್ದಾರೆ. ರಾಜಾಜಿನಗರದ ಸುಗುಣ ಆಸ್ಪತ್ರೆ, ಶಂಕರಮಠ ಬಳಿಯ ವೆಸ್ಟ್‌ ಆಫ್‌ ಕಾರ್ಡ್‌ ಆಸ್ಪತ್ರೆ, ಬಸವೇಶ್ವರನಗರ ಬಳಿಯ ಪೆನೆಶಿಯಾ, ಬ್ಯಾಟರಾಯನಪುರದ ಪ್ರೋ ಲೈಫ್‌, ರಾಜಾಜಿ ನಗರದ ಪೋರ್ಟಿಸ್‌ ಸೇರಿ ನಗರದ ಕೆಲ ಆಸ್ಪತ್ರೆಗಳು ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿದ್ದವು. ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳು ಕಾರ್ಯನಿರ್ವಹಿಸಿದವು.

ರೋಗಿಗಳ ಸಂಖ್ಯೆ ಹೆಚ್ಚಳ: ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ತೆರೆದಿದ್ದರೂ, ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ.5ರಿಂದ 10 ಏರಿಕೆ ಕಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರುವುದಿಲ್ಲ ಎಂಬ ಮಾಹಿತಿ ತಿಳಿದಿದ್ದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಮೊದಲೇ ಸೂಚನೆ ನೀಡಿದ್ದೆವು ಎಂದು ಕೆ.ಸಿ.ಜನರಲ್‌ ಆಸ್ಪತ್ರೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ವಿಧೇಯಕ ವಿರೋಧಿಸಿ ರಾಷ್ಟ್ರವ್ಯಾಪಿ ಖಾಸಗಿ ವೈದ್ಯರು ಬೀದಿಗೆ ಇಳಿದಿದ್ದರು. ಮಂಗಳವಾರ ಬೆಳಗ್ಗೆ ನಗರದ ಕಿಮ್ಸ್‌ ಸೇರಿ ಬಹುತೇಕ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ, ಸೇವೆ ಸಲ್ಲಿಸಿದರು. ಹೊರರೋಗಿಗಳ ವಿಭಾಗ ಬಂದ್‌ ಮಾಡುವುದರಿಂದ ರೋಗಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸುತ್ತಿದ್ದೇವೆ ಎಂದು ಕಿಮ್ಸ್‌ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

ವೈದ್ಯರ ಮುಷ್ಕರ ತಡವಾಗಿ ತಿಳಿದುದ್ದರಿಂದ ಒಪಿಡಿ ಸೇವೆಯನ್ನು ಎಂದಿನಂತೆ ನೀಡಿದ್ದೇವೆ. ವೈದ್ಯರ ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸಿ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಮಸೂದೆಯಲ್ಲಿ ಕೆಲವೊಂದು ಲೋಪದೋಷ ಇರಬಹದು. ಹಾಗಂತ ಮಸೂದೆಗೆ ಪೂರ್ಣ ಪ್ರಮಾಣದ ವಿರೋಧವಿಲ್ಲ ಎಂದು ಕಿಮ್ಸ್‌ ವೈದ್ಯಾಧಿಕಾರಿ ಡಾ.ಮಧುಶಂಕರ್‌ ಹೇಳಿದರು.

Advertisement

ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಜಾರಿಗೆ ತರುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ 12 ಗಂಟೆಗಳ ಒಪಿಡಿ ಬಂದ್‌ ಗೆ ರಾಜ್ಯದ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರಿನಲ್ಲಿ 30ಕ್ಕೂ ಹೆಚ್ಚು ದೊಡ್ಡ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರದಷ್ಟು ಖಾಸಗಿ ಆಸ್ಪತ್ರೆ/ಕ್ಲಿನಿಕ್‌ಗಳಿವೆ. ಆದರೆ, ಐಎಂಎ ಕರೆಗೆ ಹೆಚ್ಚಿನವರು ಕಿವಿಗೊಡದ ಪರಿಣಾಮ ನಗರದಲ್ಲಿ ಬೆರಳೆಣಿಕೆಯ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗದ ಸೇವೆ ಬಂದ್‌ ಆಗಿದ್ದವು. ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಬಂದ್‌ ಪರಿಣಾಮ ಸಾಕಷ್ಟು ಹೋರ ರೋಗಿಗಳಿಗೆ ತೊಂದರೆಯಾಗಿದ್ದು, ಪರದಾಡುತ್ತಿದ್ದ ದೃಶ್ಯ ಕಂಡುಬಂದವು.

ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದ್ದವು. ಬಹುತೇಕ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ನೀಡದೆ ಎನ್‌ಎಂಸಿ ಜಾರಿಗೆ ವಿರೋಧ ಸೂಚಿಸಿದವು. ಬೆಳಗ್ಗೆ 6ರಿಂದ ಸಂಜೆ 6ರ ತನಕ ಮುಷ್ಕರದಲ್ಲಿ  ಪಾಲ್ಗೊಂಡವು. ಸಂಜೆ 6ರ ಬಳಿಕ ಸೇವೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಜಾರಿ ವಿರುದ್ಧ ಖಾಸಗಿ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಆಸ್ಪತ್ರೆ ಆವರಣದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೋಲಾರದಲ್ಲಿ ಖಾಸಗಿ ಆಸ್ಪತ್ರೆಗಳ ನಿಯೋಗ ಅಪರ ಜಿಲ್ಲಾಧಿಕಾರಿಗಳ ಮೂಲಕ ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸಿತು. ಹಾಸನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ
ಮೌನ ಪ್ರತಿಭಟನೆ ನಡೆಸಿದರು. ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್‌ ಮಾಡಿ ಹೋರಾಟಕ್ಕೆ ಬೆಂಬಲಿಸಿದವು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಖಾಸಗಿ ವೈದ್ಯರು ಹೊರ ರೋಗಿಗಳ ವಿಭಾಗವನ್ನು ಬಂದ್‌ ಗೊಳಿಸಿ ಖಾಸಗಿ ಪ್ರತಿಭಟನೆ ನಡೆಸಿದರು. ದೊಡ್ಡಬಳ್ಳಾಪುರ  ದಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ, ಪ್ರತಿಭಟಿಸುವ ಮೂಲಕ ಕರ್ತವ್ಯ ನಿರ್ವಹಿಸಿದರು.

ಭಿನ್ನಾಭಿಪ್ರಾಯ?
ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಐಎಂಎ ಹಾಗೂ ಖಾಸಗಿ ಆಸ್ಪತ್ರೆ ನರ್ಸಿಂಗ್‌ ಹೋಮ್‌ಗಳ ಸಂಘ(ಪಿಎಚ್‌ ಎಎನ್‌ಎ)ದ ನಡುವೆ ಸಣ್ಣಮಟ್ಟದ ಭಿನ್ನಾಭಿಪ್ರಾಯ ಎದ್ದಿತ್ತು. ಮಂಗಳವಾರದ ಒಪಿಡಿ ಬಂದ್‌ಗೆ ಫ‌ನಾ ನೈತಿಕ ಬೆಂಬಲ ಮಾತ್ರ ಸೂಚಿಸಿದ್ದು, ಒಪಿಡಿ ಸೇವೆ ನೀಡಿದೆ. ಒಪಿಡಿ ಮುಚ್ಚುವುದು ಆಯಾ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಬಿಟ್ಟ ನಿರ್ಧಾರ. ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ನೈತಿಕ ಬೆಂಬಲ ನೀಡಿದೆ. ಯಾರಿಗೂ ಒಪಿಡಿ ಮುಚ್ಚುವಂತೆ ನಿರ್ದೇಶನ ನೀಡಿಲ್ಲ ಎಂದು ಫ‌ನಾ ಸ್ಪಷ್ಟಪಡಿಸಿದೆ. ಫ‌ನಾ ಹಾಗೂ ಐಎಂಎ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಎಲ್ಲರೂ ನೈತಿಕ ಬೆಂಬಲ ನೀಡಿದ್ದಾರೆ. 
ರಾಷ್ಟ್ರಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರ ಈ ಮಸೂದೆ ವೈದ್ಯಕೀಯ ಕ್ಷೇತ್ರವನ್ನು ಹಾಳು ಮಾಡಲಿದೆ ಎಂದು ಐಎಂಎ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ.ಶ್ರೀನಿವಾಸ್‌ ಹೇಳಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಸೇವೆ ಐಎಂಎ ಒಪಿಡಿ ಸೇವೆ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದ ಸ್ವಯತ್ತ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು.
ಹೀಗಾಗಿ ಪ್ರಿ-ಪ್ಯಾರಾ ಕ್ಲಿನಿಕಲ್‌ ವೈದ್ಯರಿಗೆ, ಬೋಧಕ, ಬೋಧಕೇತರ ಸಿಬ್ಬಂದಿ, ಶುಶ್ರೂಷಾ ಸಿಬ್ಬಂದಿ, ಟೆಕ್ನಿಷನ್‌ಗಳಿಗೆ ರಜೆ ನೀಡದಂತೆ ನಿರ್ದೇಶಕರು ಮತ್ತು ಡೀನ್‌ಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಆದೇಶಿಸಿತ್ತು. ತುರ್ತು ಸೇವೆಗೆ ಅನುಕೂಲವಾಗುವಂತೆ ಅಪಘಾತ ವಿಭಾಗದಲ್ಲಿ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಂಡು, ಒಳ ಮತ್ತು ಹೊರರೋಗಿಗಳಿಗೆ ತೊಂದರೆ ಆಗದಂತೆ ಸೇವೆ ನೀಡುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಇಲಾಖೆಯಿಂದ ಸೂಚಿಸಲಾಗಿತ್ತು.

ವಿಧೇಯಕ ಮಂಡನೆಯಾಗಿದ್ದರಿಂದ ಅದನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕೆಂಬುದೇ ನಮ್ಮ ಒತ್ತಾಯವಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಇದರಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಹಾಗೂ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರ ಮಹತ್ವದ್ದಾಗಿದೆ. ಒಂದೊಮ್ಮೆ ಸ್ಥಾಯಿ ಸಮಿತಿ ಯಥಾವತ್‌ ವಿಧೇಯಕ ಜಾರಿಗೆ ಶಿಫಾರಸು ಮಾಡಿದರೆ ಉಗ್ರ
ಹೋರಾಟ ಮಾಡಲಿದ್ದೇವೆ.

 ●ಡಾ.ಎಚ್‌.ಎನ್‌.ರವೀಂದ್ರ, ಅಧ್ಯಕ್ಷ, ಐಎಂಎ ರಾಜ್ಯ ಘಟಕ

Advertisement

Udayavani is now on Telegram. Click here to join our channel and stay updated with the latest news.

Next