Advertisement

ಫ‌ಲಪ್ರದ ಮಾತುಕತೆಯಾದರೆ ಮಾತ್ರ ಸಾರ್ಥಕ

12:15 AM Oct 10, 2019 | sudhir |

ತಮಿಳುನಾಡಿನ ಮಮ್ಮಲ್ಲಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಶೃಂಗ ಸಭೆ ಇತ್ತೀಚೆಗಿನ ಕೆಲವು ಅಂತಾರಾಷ್ಟ್ರೀಯ ಮತ್ತು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಚೀನದ ವುಹಾನ್‌ನಲ್ಲಿ ನಡೆದ ಮೊದಲ ಶೃಂಗ ಸಭೆ ಹಲವು ಆಯಾಮಗಳಿಂದ ಮಹತ್ವ ಪಡೆದುಕೊಂಡಿತ್ತು ಹಾಗೂ ನಿರೀಕ್ಷೆಯಂತೆ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ನಿಕಟಗೊಳಿಸಿತ್ತು. ಆದರೆ ಅನಂತರದ ಬೆಳವಣಿಗೆಗಳು ಭಾರತ ಮತ್ತು ಚೀನದ ನಡುವೆ ಸಂಘರ್ಷಮಯವಾದ ವಾತಾವರಣಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಮ್ಮಲ್ಲಪುರಂ ಶೃಂಗದ ಫ‌ಲಶ್ರುತಿಯನ್ನು ಭಾರತ ಮಾತ್ರವಲ್ಲ ಇಡೀ ಜಗತ್ತು ಕುತೂಹಲದಿಂದ ನಿರೀಕ್ಷಿಸುತ್ತಿದೆ.

Advertisement

ಜಾಗತಿಕವಾಗಿ ಭಾರತ ಈಗ ಅತ್ಯಂತ ಪ್ರಭಾವಶಾಲಿ ದೇಶವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಅಮೆರಿಕದ ಹೂಸ್ಟನ್‌ನಲ್ಲಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೊಂದಿರುವ ಪ್ರಭಾವಲಯವನ್ನು ತಿಳಿಸುತ್ತದೆ. ಆದರೆ ಭಾರತದ ಈ ಬದಲಾದ ಘನತೆಯನ್ನು ಒಪ್ಪಿಕೊಳ್ಳಲು ಚೀನ ತಯಾರಿಲ್ಲ. ಏಶ್ಯಾದಲ್ಲಿ ದೊಡ್ಡಣ್ಣನಾಗಿ ಮೆರೆಯಲು ಹವಣಿಸುತ್ತಿರುವ ಚೀನಕ್ಕೆ ಭಾರತದ ಈ ಅಭಿವೃದ್ಧಿ ಸದಾ ಮುಳ್ಳಾಗಿ ಚುಚ್ಚುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕಾರಣಕ್ಕಾಗಿಯೇ ಪಾಕಿಸ್ತಾನಕ್ಕೆ ಚೀನ ಈ ಪರಿಯಾದ ಬೆಂಬಲವನ್ನು ನೀಡುತ್ತಿರುವುದು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ಬಳಿಕದ ಬೆಳವಣಿಗೆಗಳ ನೆರಳು ಉಭಯ ನಾಯಕರ ಮಾತುಕತೆಯ ಮೇಲೆ ಬೀಳಲಿದೆ. ಈ ವಿಚಾರದಲ್ಲಿ ಚೀನದ ನಿಲುವು ಪಾಕಿಸ್ತಾನದ ಪರವಾಗಿಯೇ ಇದೆ. ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುವ ಪಾಕಿಸ್ತಾನದ ಎಲ್ಲ ಪ್ರಯತ್ನಗಳನ್ನು ಚೀನ ಬೆಂಬಲಿಸಿದೆ. ಅಲ್ಲದೆ ಕಾಶ್ಮೀರ ಜೊತೆಗೆ ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ತೀರ್ಮಾನ ಚೀನಕ್ಕೆ ಇನ್ನಿಲ್ಲದ ಉರಿಯುಂಟು ಮಾಡಿದೆ.

ಭಯೋತ್ಪಾದನೆ ವಿಚಾರದಲ್ಲೂ ಇಡೀ ಜಗತ್ತು ಪಾಕ್‌ ವಿರುದ್ಧ ನಿಂತಿದ್ದರೂ ಚೀನ ಮಾತ್ರ ಬೆಂಬಲಿಸುತ್ತಿದೆ. ಮಮ್ಮಲ್ಲಪುರಂ ಶೃಂಗಕ್ಕೂ ಮೊದಲು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಬೀಜಿಂಗ್‌ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲೂ ಚೀನ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಪುನರುಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ಯಾವ ಆಯಾಮಕ್ಕೆ ಹೊರಳಬಹುದು ಎಂಬ ಕುತೂಹಲ ಇದೆ.

ಚೀನದ ಜೊತೆಗೂ ಭಾರತ ಗಡಿ ತಕರಾರು ಹೊಂದಿದ್ದರೂ ಗಡಿಯಲ್ಲಿ ಕಳೆದ 50 ವರ್ಷಗಳಿಂದ ಒಂದೇ ಒಂದು ಗುಂಡು ಹಾರಿಲ್ಲ ಎನ್ನುವ ಅಂಶ ಉಭಯ ದೇಶಗಳ ರಾಜತಾಂತ್ರಿಕ ನೈಪುಣ್ಯತೆಯನ್ನು ತಿಳಿಸುತ್ತದೆ. ಎರಡೂ ತಿಂಗಳಿಗೂ ಹೆಚ್ಚು ಸಮಯ ನಡೆದ ಡೋಕ್ಲಾಂ ತಿಕ್ಕಾಟದ ಸಂದರ್ಭದಲ್ಲೂ ಪರಿಸ್ಥಿತಿ ಕೈಮೀರಿ ಹೋಗದಂತೆ ಎರಡೂ ದೇಶಗಳು ಸಂಯಮ ಕಾಪಾಡಿದ್ದವು. ಆದರೆ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಚೀನದ ನಿಲುವುಗಳು ಮಾತ್ರ ಭಾರತಕ್ಕೆ ಪ್ರತಿಕೂಲವಾಗಿ ಪರಿಣಮಿಸುತ್ತಿವೆ. ಭಾರತ-ಚೀನ ಮಧುರ ಬಾಂಧವ್ಯಕ್ಕೆ ತಡೆಯಾಗಿರುವುದೇ ಪಾಕಿಸ್ತಾನ.

Advertisement

ದ್ವಿಪಕ್ಷೀಯ ಮಾತುಕತೆಯಲ್ಲಿ ಕ್ಸಿ ಪಾಕಿಸ್ತಾನದ ನಶೆಯಿಂದ ಹೊರಬಂದು ವಾಸ್ತವ ವಿಚಾರಗಳಿಗೆ ಯಾವ ರೀತಿ ಪ್ರತಿಸ್ಪಂದಿಸುತ್ತಾರೆ ಎನ್ನುವುದರ ಮೇಲೆ ಶೃಂಗದ ಯಶಸ್ಸು ನಿಂತಿದೆ. ಪಾಕ್‌ ಭೂತವನ್ನು ಮನಸ್ಸಿನಿಂದ ಹೊರಗಿಟ್ಟು ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸುವತ್ತ ಗಮನ ಕೇಂದ್ರೀಕರಿಸಿದರೆ ಸರಿ. ಇಲ್ಲದಿದ್ದರೆ ಇದು ಇನ್ನೊಂದು ಮಾಮೂಲು ದ್ವಿಪಕ್ಷೀಯ ಮಾತುಕತೆಯಷ್ಟೇ ಆಗಬಹುದು.

ಇದೇ ವೇಳೆ ಭಾರತ ಈ ಶೃಂಗವನ್ನು ತನ್ನ ನಿಲುವು ಮತ್ತು ನಿರ್ಧಾರಗಳನ್ನು ಮನವರಿಕೆ ಮಾಡಿಕೊಳ್ಳಲು ಬಳಸಿಕೊಳ್ಳಬಹುದು.ಯಾವ ಕಾರಣಕ್ಕೆ 370ನೇ ವಿಧಿಯನ್ನು ರದ್ದುಪಡಿಸಬೇಕಾಯಿತು, ಪಾಕ್‌ ಪ್ರಾಯೋಜಿತ ಭಯೋತ್ಪಾದನೆಯಿಂದ ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಯಾವ ರೀತಿಯ ಆತಂಕವಿದೆ ಈ ಮುಂತಾದ ವಿಚಾರಗಳತ್ತ ಗಮನಸೆಳೆಯಬೇಕು. ಚೀನಕ್ಕೆ ಸಂಬಂಧಿಸಿದಂತೆ ಒಂದು ಅಪನಂಬಿಕೆ ಸದಾ ಭಾರತೀಯರ ಮನಸ್ಸಿನಲ್ಲಿದೆ. ಉಭಯ ದೇಶಗಳ ನಡುವೆ ಆಗಾಗ ನಡೆಯುತ್ತಿರುವ ಈ ರೀತಿಯ ಮಾತುಕತೆಗಳು ಈ ಅಪನಂಬಿಕೆಯನ್ನು ಹೋಗಲಾಡಿಸಿದರೆ ಮಾತ್ರ ಮಾತುಕತೆ ಸಾರ್ಥಕವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next