ಲಂಡನ್: ವೇತನ ಕಡಿತವಿಲ್ಲದೇ ಶಾಶ್ವತವಾಗಿ ಎಲ್ಲಾ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡಲು ಬ್ರಿಟನ್‌ನ 100 ಕಂಪನಿಗಳು ಒಪ್ಪಿಗೆ ಸೂಚಿಸಿವೆ. ಇದು ಬ್ರಿಟನ್‌ನ ಕೆಲಸದ ವಿಧಾನವನ್ನು ಬದಲಾಯಿಸುವ ಅಭಿಯಾನದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಬಣ್ಣಿಸಲಾಗಿದೆ.
ಈ 100 ಕಂಪನಿಗಳಲ್ಲಿ ಒಟ್ಟು 2,600 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಬ್ರಿಟನ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಚಿಕ್ಕದು. ಆದರೆ ವಾರದಲ್ಲಿ 4 ದಿನಗಳ ಕೆಲಸದ ಅಭಿಯಾನಕ್ಕೆ ಇದು ದೊಡ್ಡ ಮಟ್ಟದ ಮುನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಇದರೊಂದಿಗೆ ಕೈಜೋಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಯಾನದ ವಕ್ತಾರರು ಆಶಿಸಿದ್ದಾರೆ.
ಈ ಹಿಂದೆ ಇದ್ದ 5 ದಿನಗಳ ಕೆಲಸದ ಅವಧಿಯನ್ನು 4 ದಿನಕ್ಕೆ ಕಡಿತಗೊಳಿಸುವುದರಿಂದ ಕಂಪನಿಯ ಉತ್ಪಾದಕತೆ ಹೆಚ್ಚಲಿದೆ. ಕಡಿಮೆ ಅವಧಿಯಲ್ಲೇ ಇದೇ ಕೆಲಸವನ್ನು ಅವರು ಉದ್ಯೋಗಿಗಳಿಂದ ಮಾಡಿಸಬಹುದು. ಅಲ್ಲದೇ ಇದರಿಂದ ಹೆಚ್ಚಿನ ಉದ್ಯೋಗಿಗಳು ಕಂಪನಿ ಬಿಡದೇ ಅಲ್ಲೇ ಉಳಿಯಲಿದ್ದಾರೆ ಎಂದು ಅಭಿಯಾನದ ವಕ್ತಾರರು ಹೇಳಿದ್ದಾರೆ.