ಬೆಂಗಳೂರು: ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಬೆಂಗಳೂರಿನ ಜನತೆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಟಲ್ ಬಿಹಾರಿ ವಾಜಪೇಯಿ ಹೊನಲು ಬೆಳಕಿನ ಸುಸಜ್ಜಿತ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಎರಡು ಟಿಎಂಸಿ ನೀರನ್ನು ಒದಗಿಸಲು ಡಿಪಿಆರ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾಗದ ನೀರಿನ ಸಮಸ್ಯೆಯನ್ನು ಇದರಿಂದ ಬಗೆಹರಿಸಲು ಸಾಧ್ಯ. ನಾನು ನೀರಾವರಿ ಸಚಿವನಿದ್ದಾಗ ಮೇಕೆದಾಟು ಯೋಜನೆ 1996 ರಲ್ಲಿ ಪ್ರಾರಂಭವಾಯಿತು. ಈಗ ಮಾಡುತ್ತಿರುವ ಪ್ರತಿಭಟನೆಯಿಂದಲ್ಲ. 1996ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ಯೋಜನಾ ವರದಿಯನ್ನು ತಯಾರು ಮಾಡಿತ್ತು. ಅದು ವಿದ್ಯುತ್ ಉತ್ಪಾದನೆಯ ನಾಲ್ಕು ಯೋಜನೆಗಳಲ್ಲಿ ಪೈಕಿ ಮೇಕೆದಾಟು ಒಂದು. ಕೇಂದ್ರ ಸರ್ಕಾರದಿಂದ ಆಗಬೇಕೆಂಬ ಜಿಜ್ಞಾಸೆಗೆ ಒಳಗಾಗಿ ಸ್ವಲ್ಪ ದಿನ ವಿಳಂಬವಾಯಿತು. ಡಿಪಿಆರ್ ಮರುನಾಮಕರಣ ಮಾಡಿ ಒಂದೇ ಸಾರಿ ನೀರು ಸಂಗ್ರಹ ಮಾಡಿದರೆ ಉಳಿಯುತ್ತದೆ ಎಂದು ಡಿಪಿಆರ್ ಗೆ ಹೊಸ ಸ್ವರೂಪ ನೀಡಿ ಕುಡಿಯುವ ನೀರಿಗೆ ಈ ಯೋಜನೆಯನ್ನು ಸಿದ್ಧಮಾಡಿದ್ದೆವು ಎಂದರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆಯಲ್ಲಿ ಲಕ್ಷಾಂತರ ಜನರನ್ನು ಕಂಡು ಸರಕಾರಕ್ಕೆ ನಡುಕ ಹುಟ್ಟಿದೆ: ದೇಶಪಾಂಡೆ
ನಂತರ ಅಧಿಕಾರಕ್ಕೆ ಬಂದವರು ಅದನ್ನು ಮುಂದುವರೆಸಲಿಲ್ಲ. ಡಿಪಿಆರ್ ಮಾಡದೆ ಐದು ವರ್ಷ ಕಳೆದರು. ಅದನ್ನು ಮಾಡಲು ಸುಲುಭವಿತ್ತು. ಅರಣ್ಯ ಮುಳುಗದಂತೆ ನೋಡಿಕೊಂಡು ಬೆಂಗಳೂರಿಗೆ ನೀರು ಒದಗಿಸುವಂತೆ ಮಾಡಬಹುದಿತ್ತು. ಸಮ್ಮಿಶ್ರ ಸರ್ಕಾರ ಬಂದಾಗ ಡಿಪಿಆರ್ ಆಗಿದೆ. ಈಗ ತಮಿಳುನಾಡು ಕರ್ನಾಟಕದ ನಡುವೆ ವಿವಾದವಾಗಿ ಕುಳಿತಿದೆ. ಸುಲಭವಾಗಿ ಮಾಡುವುದನ್ನು ಮಾಡದೆ, ಜಟಿಲಗೊಳಿಸಿ ಈಗ ಬೆಂಗಳೂರಿನ ನೀರಿನ ಸಲುವಾಗಿ ಹೋರಾಟ ಮಾಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಯಾವ ನೈತಿಕತೆ ಇದೆ. ಇದನ್ನು ಬೆಂಗಳೂರಿನ ಜನ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಯಾರೂ ಕೂಡ ಈ ಹೋರಾಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೀರು ಒದಾಗಿಸುವುದಾದರೆ ಬಿಜೆಪಿ ಸರ್ಕಾರಕ್ಕೆ ಮಾತ್ರ ಸಾಧ್ಯ. ಕಾವೇರಿ 4 ನೇ ಹಂತ ಮಾಡಿದ್ದು, 5 ನೇ ಹಂತ ಆಗುತ್ತಿದೆ, ಬರುವ ದಿನಗಳಲ್ಲಿ ಮೇಕೆದಾಟಿನಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಅವರಿಗಿದೆ ಎಂದರು.