ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ರಾಜ್ಯಪಾಲರ ಪಾತ್ರ ಕುರಿತಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಜಾಲತಾಣಗಳಲ್ಲಿ ತುತ್ಛವಾಗಿ ಹೀಯಾಳಿಸಿಸಲಾಗುತ್ತಿದೆ. ಅವರನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ವಿಪಕ್ಷಗಳ 13 ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಆಡಳಿತಾರೂಢ ಸರ್ಕಾರದ ಪರವಾದ ಟ್ರೋಲಿಗರು ಜಾಲತಾಣಗಳಲ್ಲಿ ಸಿಜೆಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನ್ಯಾಯಾಂಗದ ಬಗ್ಗೆ ತಪ್ಪುಕಲ್ಪನೆ ಮೂಡುವುದಲ್ಲದೇ, ಸಂವಿಧಾನ ಪೀಠವನ್ನು ಅವಮಾನಿಸುವ ಕೃತ್ಯವಿದು.ಹೀಗಾಗಿ ರಾಷ್ಟ್ರಪತಿಗಳು ತಕ್ಷಣದ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿ ಕಾಂಗ್ರೆಸ್ ಸಂಸದ ವಿವೇಕ್ ಟಂಖಾ ಪತ್ರ ಬರೆದಿದ್ದಾರೆ.
ಇದಕ್ಕೆ ಪಕ್ಷದ ಇನ್ನಿತರ ಸಂಸದರಾದ ದಿಗ್ವಿಜಯ್ ಸಿಂಗ್, ಶಕ್ತಿಸಿನ್ಹ, ಪ್ರಮೋದ್ ತಿವಾರಿ, ಅಮೀ ಯಾÿಕ್, ರಂಜಿತ್ ರಂಜನ್, ಇಮ್ರಾನ್ ಪ್ರತಾಪಗಢಿ, ಆಪ್‌ನ ರಾಘವ್ ಛಡ್ಡ, ಶಿವಸೇನೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಸಮಾಜವಾದಿ ಪಕ್ಷದ ಜಯಾಬಚ್ಚನ್ ಹಾಗೂ ರಾಮ್‌ಗೊಪಾಲ್ ಯಾದವ್ ಸಹಿ ಹಾಕಿದ್ದಾರೆ. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೂ ಪ್ರತ್ಯೇಕ ಪತ್ರ ಬರೆಯಲಾಗಿದೆ.