Advertisement

ರವೀಂದ್ರ ಕಲಾಕ್ಷೇತ್ರ ಕಾಯ್ದಿರಿಸುವಿಕೆಗೆ ಇನ್ನು ಮುಂದೆ ಆನ್‌ಲೈನ್ ವ್ಯವಸ್ಥೆ ಜಾರಿ

04:48 PM Jan 10, 2022 | Team Udayavani |

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ “ಡೇಟ್ ಬ್ಲಾಕಿಂಗ್’’ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಕನ್ನಡ ಸಂಸ್ಕೃತಿ ಇಲಾಖೆಯು ಕಾಯ್ದಿರಿಸುವಿಕೆಯನ್ನು ಆನ್‌ ಲೈನ್ ವ್ಯವಸ್ಥೆಗೆ ಒಳಪಡಿಸಲು ನಿರ್ಧರಿಸಿದೆ.

Advertisement

ಕಾಯ್ದಿರಿಸುವಿಕೆಯಲ್ಲಿ ಪ್ರಭಾವಿಗಳು ಹಾಗೂ ಮಧ್ಯವರ್ತಿಗಳ ಕೈವಾಡ ಹೆಚ್ಚಿದ್ದರಿಂದ ನಿಜವಾದ ರಂಗಾಸಕ್ತರು ಹಾಗೂ ಕಲಾ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನಡೆಸಬೇಕೆಂಬ ಹೆಬ್ಬಯಕೆ ಈಡೇರುತ್ತಲೇ ಇರಲಿಲ್ಲ. ಹತ್ತಾರು ಕಾರ್ಯಕ್ರಮಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕಾಯ್ದಿರಿಸಿಕೊಂಡು ಅನ್ಯರಿಗೆ ಹೆಚ್ಚಿನ ಮೊತ್ತಕ್ಕೆ ಸಭಾಂಗಣವನ್ನು ಬಿಟ್ಟುಕೊಡುವ ದಂಧೆ ನಡೆಯುತ್ತಿತ್ತು. ಈ ವಿಚಾರ ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ “ಡೇಟ್ ಬ್ಲಾಕಿಂಗ್’’ ಹಗರಣಕ್ಕೆ ಕಡಿವಾಣ ಹಾಕಲು ಈಗ ಇಲಾಖೆ ಮುಂದಾಗಿದೆ.

ಬಹುವರ್ಷಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ವ್ಯವಹಾರ ನಡೆಯುತ್ತಿದ್ದರೂ, ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದಕ್ಕೆ ಯಾರೂ ಪ್ರಯತ್ನ ನಡೆಸಿರಲಿಲ್ಲ. ಈ ಹಿಂದೆ ಜಾರಿಗೆ ತಂದ ಆನ್‌ಲೈನ್ ವ್ಯವಸ್ಥೆಯಲ್ಲಿ ಹತ್ತಾರು ದೋಷಗಳಿದ್ದವು. ಈ ಹಿನ್ನೆಲೆಯಲ್ಲಿ ರಂಗಕರ್ಮಿಗಳು, ಹವ್ಯಾಸಿ ನಾಟಕಕಾರರು, ಸಾಹಿತಿಗಳು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರ ಗಮನ ಸೆಳೆದಿದ್ದರು. ಹೀಗಾಗಿ ಕಲಾಕ್ಷೇತ್ರದ ಕಾಯ್ದಿರಿಸುವಿಕೆ ಪದ್ಧತಿಯಲ್ಲಿನ ದೋಷ ನಿವಾರಣೆಗೆ ನಿರ್ಧರಿಸಿರುವ ಸುನೀಲ್ ಕುಮಾರ್ ಆನ್‌ಲೈನ್ ವ್ಯವಸ್ಥೆ ಜಾರಿಗೆ ತೀರ್ಮಾನಿಸಿದ್ದಾರೆ.

ದೋಷಗಳು ಏನಿದ್ದವು?

-ಒಂದು ಬ್ಯಾನರ್ ಅಡಿ ಕಾರ್ಯಕ್ರಮ ಬುಕ್ ಮಾಡಿ ಇನ್ನೊಂದು ಬ್ಯಾನರ್ ನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿತ್ತು.

Advertisement

-30 ದಿನಗಳ ಬುಕಿಂಗ್‌ ನಲ್ಲಿ 15 ದಿನಗಳು ಮಧ್ಯವರ್ತಿಗಳ ಪಾಲಾಗಿರುತ್ತಿತ್ತು.

-ನಿಜವಾದ, ಪ್ರಾಮಾಣಿಕ ರಂಗಾಸಕ್ತರಿಗೆ ಕಲಾಕ್ಷೇತ್ರದಲ್ಲಿ ಪ್ರದರ್ಶನಕ್ಕೆ ಅವಕಾಶ ಲಭಿಸುತ್ತಿರಲಿಲ್ಲ.

-ನಿಗದಿತ ದರಕ್ಕೆ ಬುಕ್ ಮಾಡಿ ಹೆಚ್ಚಿನ ದರಕ್ಕೆ ಕಲಾಕ್ಷೇತ್ರವನ್ನು ಬಾಡಿಗೆಗೆ ಬಿಡುತ್ತಿದ್ದ ಪ್ರಭಾವಿಗಳು.

-ನೀರು ಹಾಗೂ ವಿದ್ಯುತ್ ಬಳಕೆ ಬಗ್ಗೆ ನಿಖರತೆ ಇರುತ್ತಿರಲಿಲ್ಲ.

-ರಂಗ ಪರಿಕರ, ಬೆಳಕನಿ ವ್ಯವಸ್ಥೆಯ ಬಳಕೆಯ ದಾಖಲೆ ಸರಕಾರಕ್ಕೆ ಲಭ್ಯವಾಗುತ್ತಿರಲಿಲ್ಲ.

ಇದನ್ನೂ ಓದಿ:ಜಲ್ಲಿಕಟ್ಟು ಕ್ರೀಡೆಗೂ ಗೈಡ್‌ಲೈನ್ಸ್ ಜಾರಿಗೊಳಿಸಿದ ತಮಿಳುನಾಡು ಸರಕಾರ

ಅನುಕೂಲತೆಗಳೇನು?:

ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವುದರಿಂದ ಪ್ರಭಾವಿಗಳು ಹಾಗೂ ಮಧ್ಯವರ್ತಿಗಳು ನಡೆಸುವ ಡೇಟ್ ಬ್ಲಾಕಿಂಗ್ ಹಗರಣಕ್ಕೆ ತಡೆ ಬೀಳಲಿದೆ. ಬುಕ್ಕಿಂಗ್ ಮಾಡಿಕೊಳ್ಳುವಾಗ ಆಧಾರ್, ಜಿಎಸ್‌ಟಿ ದಾಖಲೆ ಸಲ್ಲಿಕೆ ಮಾಡಬೇಕಿರುವುದರಿಂದ ಮಧ್ಯವರ್ತಿಗಳಿಗೆ ಹೆಚ್ಚುವರಿ ಬುಕ್ಕಿಂಗ್ ಮಾಡಿಕೊಂಡು ಅನ್ಯರಿಗೆ ಆ ದಿನಾಂಕದಲ್ಲಿ ವೇದಿಕೆ ಬಿಟ್ಟುಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲ ಮಾಹಿತಿ ಅಪ್ಲೋಡ್ ಮಾಡಿ ಹಣ ಪಾವತಿಸಿದ ತಕ್ಷಣವೇ ಸಭಾಂಗಣ ಕಾಯ್ದಿರಿಸಲ್ಪಡುತ್ತದೆ.

ಕಾರ್ಯಕ್ರಮಗಳಿಗೆ ಹೆಚ್ಚುವರಿಯಾಗಿ ರಂಗಪರಿಕರ ಹಾಗೂ ಬೆಳಕಿನ ವ್ಯವಸ್ಥೆ ಬಳಸಿಕೊಂಡರೆ ಆನ್‌ಲೈನ್ ಮೂಲಕವೇ ಹಣ ಪಾವತಿಗೆ ಹಣ ಕಲ್ಪಿಸಲಾಗಿದ್ದು, ಸರಕಾರಿ ಆದಾಯ ಸೋರಿಕೆಯನ್ನು ತಡೆದಂತಾಗುತ್ತದೆ.

ಒಂದೊಮ್ಮೆ ಸರಕಾರದ ನಿಯಮಗಳಿಂದ ನಿಗದಿಯಾದ ಕಾರ್ಯಕ್ರಮ ನಿಂತು ಹೋದರೆ ಹಣ ಹಿಂತಿರುಗಿಸುವ ಬದಲು ಮತ್ತೊಂದು ದಿನಾಂಕಕ್ಕೆ ಕಾರ್ಯಕ್ರಮ ಆಯೋಜಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂರು ದಿನಗಳಿಗಿಂತಲೂ ಹೆಚ್ಚಿನ ದಿನಕ್ಕೆ ಸತತವಾಗಿ ಸಭಾಂಗಣ ಕಾಯ್ದಿರಿಸುವುದಕ್ಕೆ ಇನ್ನು ಮುಂದೆ ಅವಕಾಶ ಇರುವುದಿಲ್ಲ.

ಕಪ್ಪುಪಟ್ಟಿ: ಒಂದೊಮ್ಮೆ ಸಭಾಂಗಣ ಕಾಯ್ದಿರಿಸಿಕೊಂಡ ಸಂಸ್ಥೆಯ ಬದಲು ಬೇರೆ ಸಂಸ್ಥೆ ಕಾರ್ಯಕ್ರಮ ನಡೆಸಿದರೆ ಅಂಥ ವ್ಯಕ್ತಿ ಹಾಗೂ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ಧರಿಸಿದ್ದು ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ “ಸಾಂಸ್ಕೃತಿಕ ಮಾಫಿಯಾ”ಕ್ಕೆ ತಡೆವೊಡ್ಡುವುದಕ್ಕೆ ನಿರ್ಧರಿಸಿದೆ.

ದರ ಪರಿಷ್ಕರಣೆ: ಇದರ ಜತೆಗೆ ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದರವನ್ನು ಪರಿಷ್ಕರಣೆ ನಡೆಸುವುದಕ್ಕೂ ಸರಕಾರ ಚಿಂತನೆ ನಡೆಸಿದೆ. ಸದ್ಯದಲ್ಲೇ ಪರಿಷ್ಕೃತ ದರ ಪ್ರಕಟಣೆಗೆ ಇಲಾಖೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next