ಮುಂಬಯಿ : ಪವಿತ್ರ ಹಜ್ ಯಾತ್ರೆಯ ಪ್ರಕ್ರಿಯೆಯನ್ನು ಡಿಜಿಟಲೀಕರಿಸಿದ ಬಳಿಕ, ಸಹಾಯ ಧನ ಇಲ್ಲದೆಯೂ ಹಜ್ ಯಾತ್ರೆ ಈಗ ನಿರ್ವೆಚ್ಚದಾಯಕವಾಗಿದೆಯಲ್ಲದೆ ಈ ವ್ಯವಸ್ಥೆಯು ಯಾತ್ರಿ- ಸ್ನೇಹಿಯಾಗಿದೆ ಎಂದು ಕೇಂದ್ರ ಸಚಿವ ಮುಖ್‌ತಾರ್ ಅಬ್ಟಾಸ್ ನಕ್‌ವಿ ಹೇಳಿದ್ದಾರೆ.
ಸರಕಾರ ನೀಡುತ್ತಿರುವ ಹಜ್ ಸಹಾಯಧನವನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್2012ರಲ್ಲಿ ತೀರ್ಪಿತ್ತ ಬಳಿಕ 2018ರಲ್ಲಿ ಇದೇ ಮೊದಲ ಬಾರಿಗೆ ಎನ್‌ಡಿಎ ಸರಕಾರ (ಹಿಂದಿನ ಕಾಂಗ್ರೆಸ್ ಸರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವ ಧೈರ್ಯ ಮಾಡಿರಲಿಲ್ಲ) ಹಜ್ ಸಬ್ಸಿಡಿಯನ್ನು ನಿಲ್ಲಿಸಿದ ಸಂದರ್ಭದಲ್ಲಿ ಆದ ಹಜ್ ಯಾತ್ರೆ ಪ್ರಕ್ರಿಯೆ ಡಿಜಲೀಟಕರಣದಿಂದಾಗಿ ಯಾತ್ರೆಯು ಈಗ ನಿರ್ವೆಚ್ಚದಾಯಕವಾಗಿದೆ ಎಂದು ನಕ್‌ವೀ ಅವರು ಇಂದಿಲ್ಲಿ ಎರಡು ದಿನಗಳ ಖಾದಿಂ ಅಲ್ ಹಜ್ಜಜ್ (ಹಜ್ ಯಾತ್ರೆ ವೇಳೆ ಯಾತ್ರಿಗಳಿಗೆ ನೆರವಾಗುವವರು) ತರಬೇತಿ ಶಿಬಿರವನ್ನು ಉದ್ಘಾಟಿಸಿ ಹೇಳಿದರು.
2018ರಲ್ಲಿ ಹಜ್ ಸಬ್ಸಿಡಿ ನಿಲ್ಲಿಸಿದ ಬಳಿಕ ಯಾತ್ರಿಗಳು 57 ಕೋಟಿ ರೂ.ಗಳ ವಿಮಾನಯಾನ ಶುಲ್ಕವನ್ನು ಉಳಿಸಿದ್ದಾರೆ ಎಂದು ಸಚಿವ ನಕ್‌ವೀ ಹೇಳಿದರು.