Advertisement

ಆನ್‌ಲೈನ್‌ನಲ್ಲಿ ಶಾಲಾ ನೋಂದಣಿ: ಸಚಿವ ನಾಗೇಶ್‌

10:44 PM Mar 03, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ಆರಂಭಿಸಲು ಅಗತ್ಯ ಅನುಮತಿಗಾಗಿ ಇನ್ನು ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ನೀವಿದ್ದಲ್ಲಿಂದಲೇ ಬೆರಳತುದಿ ಯಲ್ಲಿ ಅರ್ಜಿ ಹಾಕಿ ಅಲ್ಪಾವಧಿಯಲ್ಲೇ ಅನುಮತಿ ಪಡೆಯಬಹುದು. ಈ ಹೊಸ ವ್ಯವಸ್ಥೆಗೆ ಶುಕ್ರವಾರ ಚಾಲನೆ ದೊರಕಿದೆ.

Advertisement

ಇದಕ್ಕಾಗಿ ಆನ್‌ಲೈನ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕೇವಲ ನಾಲ್ಕು ಹಂತಗಳಲ್ಲಿ 15ರಿಂದ 17 ದಿನಗಳಲ್ಲಿ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವ ವ್ಯವಸ್ಥೆ ಪರಿಚಯಿಸಿದೆ.
ಇದರಡಿ ರಾಜ್ಯದ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಆರಂಭಿಸಲು ನೋಂದಣಿ/ಅನುಮತಿ, ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣ ಮತ್ತು ಕೇಂದ್ರ ಪಠ್ಯಕ್ರಮ ಸಂಯೋಜನೆ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ. ಸಿ. ನಾಗೇಶ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪರಿಷ್ಕೃತ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸಂಬಂಧದ ಲಿಂಕ್‌ ಇಲಾಖೆ ವೆಬ್‌ಸೈಟ್‌ನ ಮುಖಪುಟದಲ್ಲಿ ಲಭ್ಯವಿದೆ. ಅರ್ಜಿಗಳು ಜಿಲ್ಲಾ ಉಪ ನಿರ್ದೇಶಕರಿಗೆ ನೇರವಾಗಿ ಸಲ್ಲಿಕೆಯಾಗಲಿದ್ದು, ಅಧಿಕಾರಿಯು ಮಂಜೂರಾತಿ ಪ್ರಾಧಿಕಾರಿಯಾಗಿರುತ್ತಾರೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಅರ್ಜಿಯನ್ನು ವಿಲೇವಾರಿ ಮಾಡದಿದ್ದರೆ, ಅಟೋಮೆಟಿಕ್‌ ಆಗಿ ಅರ್ಜಿ ವಿಲೇವಾರಿ ಆಗುತ್ತದೆ ಎಂದು ಮಾಹಿತಿ ನೀಡಿದರು.

ಆಡಳಿತ ಮಂಡಳಿಗಳು ಅರ್ಜಿ ಸಲ್ಲಿಕೆ ಸಂದರ್ಭ ಜಿಯೊ ಟ್ಯಾಗ್‌ನಲ್ಲಿ ಶಾಲೆಯ ಮೂಲಸೌಕರ್ಯಗಳ ಕುರಿತು ಛಾಯಾ ಚಿತ್ರಗಳು ಮತ್ತು ವೀಡಿಯೋ ತುಣುಕುಗಳನ್ನು ಅಪ್‌ಲೋಡ್‌ ಮಾಡಬೇಕು. ಇದಕ್ಕಾಗಿ ಅರ್ಜಿದಾರರು SATSKARNATAKA‘ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡು, ಆ ಮೂಲಕ ಅಪ್‌ಲೋಡ್‌ ಮಾಡಬಹುದು. ಪ್ರತಿ ಹಂತದಲ್ಲಿ ಅರ್ಜಿದಾರರಿಗೆ ಎಸ್‌ಎಂಎಸ್‌ ಬರುತ್ತದೆ. ಈ ಮಧ್ಯೆ ತಿರಸ್ಕೃತ ಅರ್ಜಿಗಳಿಗಾಗಿ ಆನ್‌ಲೈನ್‌ನಲ್ಲಿ ಮೇಲ್ಮನವಿ’ ತಂತ್ರಾಂಶವನ್ನೂ ಅಭಿವೃದ್ಧಿಪಡಿಸಲಾಗುವುದು. ಈ ಹಿಂದಿನ ವ್ಯವಸ್ಥೆಯಲ್ಲಿ ನಿರಾಪೇಕ್ಷಣ ಪತ್ರ ಪಡೆಯಲು ಹತ್ತಕ್ಕಿಂತ ಹೆಚ್ಚು ಹಂತಗಳನ್ನು ಅನುಸರಿಸಬೇಕಿತ್ತು ಎಂದರು.

ಅನಧಿಕೃತ ಶಾಲೆಗಳ ಪಟ್ಟಿ ಸಿದ್ಧ; ಪರೀಕ್ಷೆ ಬಳಿಕ ಕ್ರಮ
ಬೆಂಗಳೂರು: ರಾಜ್ಯದ ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪರೀಕ್ಷೆಗಳು ಮುಗಿಯುತ್ತಿದ್ದಂತೆ ಆ ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳ ಅನಧಿಕೃತ ಶಾಲೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ, ಸದ್ಯ ಪರೀಕ್ಷೆಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಮಕ್ಕಳಿಗೆ ಸಮಸ್ಯೆಯಾಗಬಹುದು. ಹಾಗಾಗಿ ಪರೀಕ್ಷೆಗಳು ಮುಗಿದ ಬಳಿಕ ಆ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವೇಳೆ ಮಕ್ಕಳ ಭವಿಷ್ಯಕ್ಕೆ ಸಮಸ್ಯೆಯಾಗದಂತೆ ಎಚ್ಚರಿಕೆಯನ್ನೂ ವಹಿಸಲಾಗುವುದು. ಅಲ್ಲದೆ, 2023-24ನೇ ಶೈಕ್ಷಣಿಕ ವರ್ಷದಿಂದ ಜಿಲ್ಲಾವಾರು ಅನಧಿಕೃತ ಶಾಲೆಗಳ ಪಟ್ಟಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next