Advertisement

ಗೋ ಸಾಗಾಣಿಕೆಗೆ ಆನ್‌ಲೈನ್‌ ಅನುಮತಿ ಕಡ್ಡಾಯ

09:05 AM Jun 28, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ ಗೋಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಿದ್ದು, ಇನ್ನು ಮುಂದೆ ಯಾವುದೇ ಗೋವು ಸಾಗಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

Advertisement

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಅಕ್ರಮವಾಗಿ ಗೋವುಗಳ ಸಾಗಾಣಿಕೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಅದನ್ನು ನಿಯಂತ್ರಿಸಲು ರೈತರು ಅಥವಾ ಪಶುಪಾಲಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಪಶು ಸಂಗೋಪನೆ ಇಲಾ ಖೆಯ ಜಿಲ್ಲಾ ಉಪ ನಿರ್ದೇಶಕರ ಅನುಮತಿ ಹಾಗೂ ಪಶು ವೈದ್ಯರ ಪ್ರಮಾಣ ಪತ್ರವನ್ನೂ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ರೈತರು ಹಸುವಿನ ಭಾವಚಿತ್ರ ಹಾಗೂ ಸಂಬಂಧ ಪಟ್ಟ ಪಶುಪಾಲಕರು ಅಥವಾ ರೈತರ ಆಧಾರ್‌ ಕಾರ್ಡ್‌ ಮತ್ತು ಫೋಟೊ ಗುರುತು ಕಾರ್ಡ್‌ ನೀಡಿ ಅನುಮತಿ ಪಡೆಯಬೇಕು.

ಹಲವು ಷರತ್ತು
ಹಸುಗಳನ್ನು ಸಾಕಲು ಮತ್ತು ಕೃಷಿ ಚಟುವಟಿಕೆಗಳಿಗೆ ಸಾಗಿಸಲು ಒಪ್ಪಿಗೆ ಪಡೆದ ಬಳಿಕವೂ ಕೆಲವು ಷರತ್ತುಗಳನ್ನು ಪಾಲಿಸಬೇಕಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಸು ಸಾಗಿಸಲು ಕನಿಷ್ಠ 10 ಕಿ.ಮೀ. ಒಳಗೆ ಇದ್ದರೆ ಶುಲ್ಕ ಕಟ್ಟಬೇಕಿಲ್ಲ. ಆದರೆ 10 ಕಿ.ಮೀಟರ್‌ಗಿಂತ ದೂರ ಸಾಗಿಸುವಂತಿದ್ದರೆ, ಪ್ರತಿ ಕಿಲೋ ಮೀಟರ್‌ ಲೆಕ್ಕದಲ್ಲಿ ಇಲಾಖೆ ನಿಗದಿಪಡಿಸುವ ಶುಲ್ಕವನ್ನು ಪಾವತಿಸಬೇಕಾಗಿದೆ.

ಹೈನುಗಾರಿಕೆ ಮತ್ತು ರೈತರ ಕೃಷಿ ಚಟುವಟಿಕೆಗಳ ಬಳಕೆಗೆ ಮಾತ್ರ ಸಾಗಿಸಬಹುದು. ಯಾವುದೇ ವಯಸ್ಸಿನ ಹಸು, ಕರು, ಹೋರಿ, ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸಲು ಅನುಮತಿ ನೀಡಲಾಗುವುದಿಲ್ಲ. ಒಂದು ವಾಹನದಲ್ಲಿ ಒಂದು ಅಥವಾ ಎರಡು ಹಸುಗಳನ್ನು ಮಾತ್ರ ಸಾಗಿಸಲು ಅವಕಾಶ ಇರುತ್ತದೆ. ಅಲ್ಲದೆ, ಹಸುಗಳನ್ನು ಸಾಗಿಸುವ ವಾಹನವೂ ಪಶು ಸಂಗೋಪನೆ ಇಲಾಖೆಯಲ್ಲಿ ನೋಂದಣಿ ಆಗಿರುವುದು ಕಡ್ಡಾಯವಾಗಿದೆ. ಹಸುಗಳನ್ನು ಸಾಗಿಸುವಾಗ ಅವುಗಳಿಗೆ ಬೇಕಾದ ಆಹಾರ ಹಾಗೂ ಅಗತ್ಯ ವೈದ್ಯಕೀಯ ವ್ಯವಸ್ಥೆ ಹೊಂದಬೇಕಿರುವುದು ಕಡ್ಡಾಯ.

Advertisement

ಅಕ್ರಮ ಸಾಗಾಣಿಕೆಗೆ ಶಿಕ್ಷೆ
ಯಾವುದೇ ವಯಸ್ಸಿನ ಹಸು, ಕರು, ಹೋರಿಗಳನ್ನು ಅಕ್ರಮವಾಗಿ ಸಾಗಿಸಿದರೆ, 3ರಿಂದ 7 ವರ್ಷ ಶಿಕ್ಷೆ ಮತ್ತು 50 ಸಾವಿರದಿಂದ 5 ಲಕ್ಷದ ವರೆಗೆ ಶಿಕ್ಷೆ ನೀಡಲಾಗುತ್ತದೆ.

1 ಲಕ್ಷ ಗೋ ರಕ್ಷಣೆಯ ಗುರಿ
ಸರಕಾರ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಒಂದು ಗೋಶಾಲೆ ತೆರೆಯುವುದರ ಜತೆಗೆ ಹೆಚ್ಚು ಗೋವುಗಳಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸುಮಾರು 70 ಗೋಶಾಲೆ ಗಳನ್ನು ತೆರೆಯಲು ಸರಕಾರ ನಿರ್ಧರಿಸಿದ್ದು, ರಾಜ್ಯಾದ್ಯಂತ 100 ಗೋಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ.

ಪ್ರತಿ ಗೋಶಾಲೆಯಲ್ಲಿ ಕನಿಷ್ಠ 1 ಸಾವಿರ ಗೋವುಗಳನ್ನು ಸಾಕುವ ಗುರಿ ಹೊಂದಲಾಗಿದ್ದು, ಒಂದು ಲಕ್ಷ ಗೋವುಗಳನ್ನು ಸರಕಾರಿ ಗೋಶಾಲೆಗಳಲ್ಲಿಯೇ ರಕ್ಷಿಸುವ ಗುರಿಯನ್ನು ಪಶು ಸಂಗೋಪನೆ ಇಲಾಖೆ ಹೊಂದಿದೆ.

ಗೋವುಗಳ ಸಾಗಾಟಕ್ಕೆ ಅನ್‌ಲೈನ್‌ ವ್ಯವಸ್ಥೆ ಜಾರಿಗೆ ತರುವುದರಿಂದ ಅಕ್ರಮ ಸಾಗಾಟ ತಡೆಗಟ್ಟಲು ಇದು ಸಹಕಾರಿಯಾಗಲಿದೆ.ಕೃಷಿ ಉದ್ದೇಶಕ್ಕೆ ಯಾರು ಹಸುಗಳನ್ನು ಸಾಗಿಸುತ್ತಾರೊ, ಅದರ ಬಗ್ಗೆಯೂ ಇಲಾಖೆಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ.
-ಪ್ರಭು ಚೌವ್ಹಾಣ್‌, ಪಶು ಸಂಗೋಪನೆ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next