ಧಾರವಾಡ: ಕೋವಿಡ್ 2ನೇ ಅಲೆ ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷé ಕ್ರಮ ಖಂಡಿಸಿ ಹಾಗೂ ಸಂಕಷ್ಟದಲ್ಲಿ ಇರುವ ಜನರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ಆನ್‌ಲೈನ್ ಚಳವಳಿ ನಡೆಸಲಾಯಿತು.
ಕೊರೊನಾ ಸಂಕಷ್ಟ ಎದುರಿಸಲು, ಜನರು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. 3ನೇ ಅಲೆ ಅಪ್ಪಳಿಸುವುದರೊಳಗೆ ಅಗತ್ಯ ಸೌಲಭ್ಯ, ತಜ್ಞ ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು, ಬಯೋ ಮೆಡಿಕಲ್ ಇಂಜಿನಿಯರ್‌ಗಳು ಮುಂತಾದ ಪರಿಣಿತ ಸಿಬ್ಬಂದಿ ನೇಮಕಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೊರೊನಾ ಪರೀಕ್ಷೆ ಮತ್ತು ಲಸಿಕೀಕರಣ ವ್ಯಾಪಕವಾಗಿ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಮತ್ತು ಸುಸಜ್ಜಿತ ಐಸಿಯು ಲಭ್ಯತೆಯನ್ನು ಖಾತ್ರಿಪಡಿಸಬೇಕು. ಪ್ರತೀ ವಾರ್ಡ್, ಪಂಚಾಯತ್ ಮಟ್ಟದಲ್ಲಿ ವಾರ್‌ರೂಂ (ಮಾಹಿತಿ ಕೇಂದ್ರ) ಸ್ಥಾಪಿಸಿ ವಿವಿಧ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಲಭ್ಯತೆ, ಆಕ್ಸಿಜನ್ ಲಭ್ಯತೆ, ಲಸಿಕೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ವಿಧಿ ಸುತ್ತಿರುವ ಶುಲ್ಕ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ನರೇಗಾ ಕೆಲಸದ ದಿನಗಳನ್ನು 300 ದಿನಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಲಾಯಿತು. ದುಡಿಯುವ ಮತ್ತು ಎಲ್ಲಾ ಬಡಕುಟುಂಬಗಳಿಗೆ 10000 ರೂ. ಸಹಾಯಧನ ನೀಡಬೇಕು. ಕೊರೊನಾ ಸಾಂಕ್ರಾಮಿಕ ನಿಲ್ಲುವವರೆಗೂ ಎಲ್ಲರಿಗೂ ಉಚಿತವಾಗಿ ಅಕ್ಕಿ, ಗೋ ಧಿ, ಬೇಳೆ, ಎಣ್ಣೆ, ಜೋಳ ಒಳಗೊಂಡ ರೇಷನ್ ಒದಗಿಸಬೇಕೆಂದು ಆಗ್ರಹಿಸುವುದರ ಜತೆಗೆ ಸರ್ಕಾರದ ಜನರ ಬಗೆಗಿನ ನಿಷ್ಕಾಳಜಿ, ನಿರ್ಲಕ್ಷéದ ವಿರುದ್ಧ ಜನಾಂದೋಲನಕ್ಕೆ ಸಜ್ಜಾಗಬೇಕಾಗುತ್ತದೆಂದು ಕರೆ ನೀಡಲಾಯಿತು.
ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಲಕ್ಷ್ಮಣ ಜಡಗನ್ನವರ, ಗಂಗಾಧರ ಬಡಿಗೇರ ಸೇರಿದಂತೆ ಪಕ್ಷದ ಜಿಲ್ಲಾ ಸಮಿತಿ ಸಮಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು, ಬಡಾವಣೆಗಳ, ಕೊಳಗೇರಿಗಳ, ಹಳ್ಳಿಗಳ ನಾಗರಿಕರು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ಈ ಆನ್‌ಲೈನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.