Advertisement

ಗರಿಷ್ಠ ವಿದ್ಯಾರ್ಥಿಗಳನ್ನು ತಲುಪಿದ ಆನ್‌ಲೈನ್‌ ಪಾಠ

11:53 AM Jun 05, 2020 | Suhan S |

ಬೆಳಗಾವಿ: ಕೋವಿಡ್‌-19 ಸಂದರ್ಭದಲ್ಲಿ ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸಲು ಜಗತ್ತಿನಾದ್ಯಂತ ಡಿಜಿಟಲ್‌ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಇದಕ್ಕೆ ಪೂರಕವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ಅಂಗಸಂಸ್ಥೆಗಳು ಹಾಗೂ ಸ್ವಾಯತ್ತ ಇಂಜಿನಿಯರಿಂಗ್‌ ಕಾಲೇಜುಗಳ ಮೂಲಕ ಕರ್ನಾಟಕದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಕಲಿಕೆಯಲ್ಲಿ ಸಂಪೂರ್ಣವಾಗಿ ತಲುಪಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

Advertisement

ಕರ್ನಾಟಕದಲ್ಲಿ ನೆಟವರ್ಕ್‌ ಸಂಪರ್ಕ ಅಥವಾ ಸಾಧನಗಳ ಕೊರತೆಯ ಕಾರಣ ನೀಡಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಗೂ ಸಂಬಂಧಪಟ್ಟ ಕೆಲವೇ ಸಂಘ ಸಂಸ್ಥೆಗಳು ಮುದ್ರಣ, ಎಲೆಕ್ಟ್ರಾನಿಕ್ಸ್‌, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೇ ಇಂಜಿನಿಯರಿಂಗ್‌ ಕಾಲೇಜ್‌ ಗಳು ನಡೆಸಿದ ಆನ್‌ಲೈನ್‌ ತರಗತಿಗಳು ಸರಿಯಾಗಿ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪ್ರತಿಶತ 70 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದಾರೆ ಹಾಗೂ ಶೇ 95 ರಷ್ಟು ವಿದ್ಯಾರ್ಥಿಗಳು ನಿರಂತರ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ.

ಇದಲ್ಲದೆ ಆನ್‌ಲೈನ್‌ ಮೂಲಕ ತಮ್ಮ ಕಾರ್ಯಯೋಜನೆಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದಾರೆ ಎಂಬುದು ಮಹಾವಿದ್ಯಾಲಯಗಳಿಂದ ಪಡೆದ ಅಂಕಿಅಂಶಗಳು ಪ್ರತಿಬಿಂಬಿಸುತ್ತಿವೆ. ಇದನ್ನು ರಾಜ್ಯಾದ್ಯಂತ ಎಲ್ಲ ಇಂಜಿನಿಯರಿಂಗ್‌ ಕಾಲೇಜುಗಳ ಪ್ರಾಂಶುಪಾಲರು ದೃಢಪಡಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ| ಎ.ಎಸ್‌. ದೇಶಪಾಂಡೆ ತಿಳಿಸಿದ್ದಾರೆ.

ಲಾಕ್‌ ಡೌನ್‌ ಗೂ ಮೊದಲು ಕಾಲೇಜುಗಳಲ್ಲಿ ತರಗತಿಗಳ ಮೂಲಕ ಶೇ 20 ರಿಂದ 30 ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ಲಾಕ್‌ ಡೌನ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ ಸುಮಾರು ಶೇ 40 ರಿಂದ 45 ದಷ್ಟು ಭಾಗವನ್ನು ಪೂರ್ಣಗೊಳಿಸಲಾಗಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಶೇ 70 ರಿಂದ 75 ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ. ಆನ್‌ಲೈನ್‌ ತರಗತಿಗಳು ಜೂನ್‌ 15ರವರೆಗೆ ಮುಂದುವರಿಯುತ್ತವೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ಎದುರಿಸುತ್ತಿರುವ ಕಳಪೆ ನೆಟವರ್ಕ್‌, ತಾಂತ್ರಿಕ ತೊಂದರೆ, ಬ್ಯಾಂಡ್‌ ವಿಡ್ತ್ ಸಮಸ್ಯೆ ಗಳನ್ನು ಅರ್ಥ ಮಾಡಿಕೊಂಡು ವಿಶ್ವವಿದ್ಯಾಲಯ ಇ-ಲರ್ನಿಂಗ ಘಟಕವು ಯುಟ್ಯೂಬ್‌ ಚಾನಲ್‌ ಆರಂಭಿಸಿ ವಿವಿಯ ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸಗಳಿಗೆ ಸಂಬಂಧಿಸಿದಂತೆ ಪರಿಣಿತ ಶಿಕ್ಷಕರಿಂದ ಪಾಠ ಮಾಡಿಸಿದ 322 ಕೋರ್ಸ್‌ಗಳ 10,200 ದಷ್ಟು ಉಪನ್ಯಾಸಗಳನ್ನು ಅಪ್‌ಲೋಡ್‌ ಮಾಡಿತ್ತು. ಇದಲ್ಲದೆ ಸಾಕಷ್ಟು ಕಾಲೇಜುಗಳು ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ಆರಂಭಿಸಿ ಅದರಲ್ಲಿ ತರಗತಿಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಲಾಕ್‌ಡೌನ್‌ ಅವಧಿಯ ಎರಡು ತಿಂಗಳ ಸಮಯದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

ಇದಲ್ಲದೆ ಎಲ್ಲ ಕಾಲೇಜ್‌ಗಳ ಉಪನ್ಯಾಸಕರು ಈ ಲಾಕ್‌ ಡೌನ್‌ ಅವಧಿಯಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌, ಗೂಗಲ್‌ ಮೀಟ್‌, ವೆಬ್‌ ಎಕ್ಸ್‌, ಜೂಮ್‌, ಎಮ್‌ಎಸ್‌- ಟೀಮ್‌ ಸೇರಿದಂತೆ ವಿವಿಧ ಡಿಜಿಟಲ್‌ ವೇದಿಕೆಗಳ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ, ಉಪನ್ಯಾಸ ಟಿಪ್ಪಣಿಗಳನ್ನು, ಕಾರ್ಯಯೋಜನೆಗಳನ್ನು ನೀಡಿದ್ದಾರೆ ಮತ್ತು ದೂರವಾಣಿ ಮೂಲಕವೂ ಸಂಭಾಷಣೆ ನಡೆಸಲಾಗಿದೆ. ಹೀಗಿರುವಾಗ ಕೆಲವು ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳು ಆನ್‌ಲೈನ್‌ ತರಗತಿಗಳನ್ನು ಹಮ್ಮಿಕೊಂಡ ಬಗ್ಗೆ ಹೇಳಿಕೆ ನೀಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಜ್ಞಾನ ಗಳಿಸಿದ ನಂತರವಷ್ಟೇ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡಲು ಪ್ರಯತ್ನ ಮಾಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next