Advertisement

ಆನ್‌ಲೈನ್‌ ಜೂಜು ನಿಷೇಧ ಸ್ವಾಗತಾರ್ಹ

01:09 AM Oct 11, 2021 | Team Udayavani |

ಆನ್‌ಲೈನ್‌ ಜೂಜು ನಿಷೇಧಿಸುವ ಕರ್ನಾಟಕ ಪೊಲೀಸ್‌ ತಿದ್ದುಪಡಿ ಮಸೂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಗೊಂಡು ರಾಜ್ಯಪಾಲರ ಒಪ್ಪಿಗೆ ದೊರೆತ ಅನಂತರ ಅಧಿಕೃತವಾಗಿ ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧ ಜಾರಿಯಾಗಿದೆ. ಈ ಮೂಲಕ ಕರ್ನಾಟಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ.

Advertisement

ಯುವಸಮೂಹ ಆನ್‌ಲೈನ್‌ ಜೂಜು ಮೋಹಕ್ಕೆ ಒಳಗಾಗಿ ಹಣ ಕಳೆದುಕೊಳ್ಳುವ ಜತೆಗೆ ವಿದ್ಯಾಭ್ಯಾಸ ಬಿಟ್ಟು ದಾರಿ ತಪ್ಪಿದ್ದ ಪ್ರಕರಣಗಳೂ ವರದಿಯಾಗಿದ್ದವು. ಸಮಾಜದ ಎಲ್ಲ ವರ್ಗಗಳಿಂದ ಆನ್‌ಲೈನ್‌ ಜೂಜು ನಿಷೇಧ ಕುರಿತು ಒತ್ತಾಯವೂ ಇತ್ತು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೊನೆಗೂ ಅದು ಕಾನೂನಾಗಿ ರೂಪುಗೊಂಡಿರುವುದು ಸ್ತುತ್ಯರ್ಹ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಸೂದೆ ಮಂಡನೆಯಾದಾಗ ಪಕ್ಷಾತೀತ ವಾಗಿ ಎಲ್ಲರೂ ಒಕ್ಕೊರಲಿನಿಂದ ಆನ್‌ಲೈನ್‌ ಜೂಜು ನಿಷೇಧದ ಅನಿವಾರ್ಯತೆ ಹಾಗೂ ಅಗತ್ಯತೆ ಪ್ರತಿಪಾದಿಸಿದ್ದರು. ಸರಕಾರ ಕೈಗೊಂಡ ಈ ಕ್ರಮ ನಿಜಕ್ಕೂ ಶ್ಲಾಘನೀಯ.

ಲಾಟರಿ ಹಾಗೂ ಕುದುರೆ ರೇಸ್‌ ಈ ವ್ಯಾಪ್ತಿಗೆ ಬರುವುದಿಲ್ಲವಾದರೂ ಸೈಬರ್‌ ತಾಣ, ಮೊಬೈಲ್‌ ಆ್ಯಪ್‌ ಮೂಲಕ ಆಡುವ ಜೂಜಾಟ ನಿಷೇಧಿಸಲಾಗಿದೆ. ಆನ್‌ಲೈನ್‌ ಜೂಜಿನ ವ್ಯಸನಕ್ಕೆ ಸಿಲುಕಿದ್ದ ಯುವ ಸಮೂಹ ಇದನ್ನು ಚಟ ವಾಗಿಸಿಕೊಂಡಿತ್ತು. ಕೆಲವರಂತೂ ಕ್ರಿಕೆಟ್‌ ಬೆಟ್ಟಿಂಗ್‌ನಂಥ ಆ್ಯಪ್‌ಗ್ಳ ಮೂಲಕ ಜೂಜಾಡುತ್ತಿರುವುದು ಹೆತ್ತವರಿಗೆ ತಲೆನೋವಾಗಿ ಪರಿ ಣಮಿಸಿತ್ತು. ಸರಕಾರದ ಕ್ರಮದಿಂದಾಗಿ ಹೆತ್ತವರು ಸಹ ನಿಟ್ಟುಸಿರು ಬಿಟ್ಟಿದ್ದಾರೆ. ಆನ್‌ಲೈನ್‌ ಜೂಜು ನಿಷೇಧದ ಅನಂತರ ಅನಧಿಕೃತವಾಗಿ ಪರ್ಯಾಯ ಜೂಜು ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆಯೂ ಇರು ವುದರಿಂದ ಪೊಲೀಸ್‌ ಇಲಾಖೆ ಆ ಬಗ್ಗೆ ಗಮನಹರಿಸಬೇಕಾಗಿದೆ. ಸಾಮಾಜಿಕ ಜಾಲತಾಣ, ಸೈಬರ್‌ ಕೇಂದ್ರಗಳ ಮೇಲೆ ನಿಗಾ ಇರಿಸ ಬೇಕಾಗಿದೆ. ಕ್ಲಬ್‌ಹೌಸ್‌ನಲ್ಲಿ ಪರಿಚಯಮಾಡಿಕೊಂಡು ಅನಂತರ ಆ್ಯಪ್‌ನಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿರುವುದು ಪತ್ತೆಯಾಗಿದ್ದು ಇಂತಹ ಪ್ರಕರಣಗಳ ಬಗ್ಗೆಯೂ ಪೊಲೀಸ್‌ ಇಲಾಖೆ ಕಣ್ಣಿಡಬೇಕಾಗಿದೆ. ಡ್ರಗ್ಸ್‌ ಹಾಗೂ ಆನ್‌ಲೈನ್‌ ಜೂಜು ಯುವ ಸಮೂಹವನ್ನು ದಾರಿ ತಪ್ಪಿಸುತ್ತಿತ್ತು. ಇದೀಗ ಆನ್‌ಲೈನ್‌ ಜೂಜು ನಿಷೇಧವಾಗಿದ್ದು, ಡ್ರಗ್ಸ್‌ ನಿಯಂತ್ರಣ ವಿಚಾರದಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಡ್ರಗ್ಸ್‌ ಪಿಡುಗು ಯುವ ಸಮೂಹದ ಆರೋಗ್ಯ ಹಾಳು ಮಾಡುವುದರ ಜತೆಗೆ ಡ್ರಗ್ಸ್‌ ಸೇವನೆ ಮಾಡಿ ಅಪರಾಧ ಕೃತ್ಯಗಳಲ್ಲಿ ತೊಡಗುವುದು ಹೆಚ್ಚಾಗಿದೆ. ಡ್ರಗ್ಸ್‌ ವಿಚಾರವೂ ಹೆತ್ತವರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

ಸಾರ್ವಜನಿಕರೂ ಸಹ ಅನಧಿಕೃತ ಆನ್‌ಲೈನ್‌ ಜೂಜು ಕುರಿತು ಮಾಹಿತಿ ದೊರೆತರೆ ತತ್‌ಕ್ಷಣ ಪೊಲೀಸರ ಗಮನಕ್ಕೆ ತರಬೇಕಾಗಿದೆ. ಈ ಮೂಲಕ ಉತ್ತಮ ಸಮಾಜಕ್ಕಾಗಿ ಸಾರ್ವಜನಿಕರು ಹೊಣೆಗಾರಿಕೆ ನಿಭಾಯಿಸಬೇಕಾಗಿದೆ. ನಿಷೇಧ ಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಈಗಾಗಲೇ ನಿಷೇಧಗೊಂಡಿರುವ ಕಂಪೆನಿಗಳು ಬೇರೊಂದು ರೂಪದಲ್ಲಿ ತಮ್ಮ ಅಸ್ತಿತ್ವವನ್ನು ತೋರ್ಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಎಚ್ಚರಿಕೆಯಿಂದ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next