ಬೆಂಗಳೂರು: ಆನ್‌ಲೈನ್ ಶಾಪಿಂಗ್ ಲಿಂಕ್‌ವೊಂದರಲ್ಲಿ ಕೇವಲ 49 ರೂ.ಗೆ ನಾಲ್ಕು ಡಜನ್ ಫ್ರೆಶ್ ಕೋಳಿ ಮೊಟ್ಟೆ ಆಫರ್ ಜಾಹಿರಾತು ನೋಡಿ ಖರೀದಿಸಲು ಮುಂದಾಗ ಮಹಿಳೆಯೊಬ್ಬರು 48 ಸಾವಿರ ರೂ. ಕಳೆದುಕೊಂಡಿದ್ದಾರೆ.
ವಂಸತನಗರ ಅರ್ಚನಾ ಸಿಂಗ್(38) ಹಣ ಕಳೆದುಕೊಂಡವರು.
ಅವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ಫೆ.17ರಂದು ಅರ್ಚನಾ ಸಿಂಗ್ ಇ-ಮೇಲ್‌ಗೆ “ನ್ಯೂಟ್ರಿಫ್ರೆಶ್ ಎಗ್ ಟಾಟಾ’ ಎಂಬ ಆನ್‌ಲೈನ್ ಶಾಪಿಂಗ್ ಲಿಂಕ್ ಬಂದಿದೆ. ಆರ್ಡರ್ ಮಾಡಲು ಲಿಂಕ್ ಕ್ಲಿಕ್ಕಿಸಿದಾಗ 4 ಡಜನ್ ಫ್ರೆಶ್ ಕೋಳಿಮೊಟ್ಟೆಗೆ ಕೇವಲ 49 ರೂ. ಎಂಬ ಶೀರ್ಷಿಕೆಯ ಆಫರ್ ಇರುವುದು ಕಂಡು ಬಂದಿದೆ. ಬಳಿಕ ಆ ಲಿಂಕ್‌ನಲ್ಲಿ ಕೇಳಲಾಗಿದ್ದ ಎಲ್ಲಾ ಮಾಹಿತಿ ಭರ್ತಿ ಮಾಡಿದ್ದಾರೆ. 49 ರೂ. ಪಾವತಿಸಲು ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿದಾಗ ಮೊಬೈಲ್‌ಗೆ ಒಟಿಪಿ ಬಂದಿದೆ. ಒಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಕ್ರೆಡಿಟ್ ಕಾರ್ಡ್‌ನಿಂದ ಏಕಾಏಕಿ 48 ಸಾವಿರ ರೂ. ಕಡಿತವಾಗಿರುವ ಸಂದೇಶ ಬಂದಿದೆ. ಅದರಿಂದ ಆತಂಕಗೊಂಡ ಅರ್ಚನಾ ಸಿಂಗ್, ಅನುಮಾನಗೊಂಡು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಪರಿಚಿತ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
■ ಉದಯವಾಣಿ ಸಮಾಚಾರ