ಮಂಗಳೂರು: ವಾಟ್ಸಾಪ್‌ನಲ್ಲಿ ವ್ಯಕ್ತಿಯನ್ನು ಪರಿಚಯಿಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬ ಆಮಿಷವೊಡ್ಡಿ 10 ಲಕ್ಷ ರೂ. ವಂಚನೆ ಎಸಗಿದ್ದ ಪ್ರಕರಣದಲ್ಲಿ ಕೇರಳ ಮೂಲದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳ ತ್ರಿಶೂರ್‌ನ ಮಟ್ಟೂರು ನೂಲುವ್ಯಾಲಿಯ ಕೈಪುಝ ಹೌಸ್ ನಿವಾಸಿ ಸುಧಾಕರನ್ ಅವರ ಪುತ್ರ ನಿತಿನ್ ಕುಮಾರ್ ಕೆ.ಎಸ್ ಬಂಧಿತ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ.
ಈತ ಕಳೆದ ವರ್ಷ ಒಬ್ಬರಿಂದ 10,32,000 ರೂ. ಅನ್ನು ಹಂತಹಂತವಾಗಿ ಪಡೆದುಕೊಂಡಿದ್ದ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಿರ್ಯಾದಿದಾರರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಲಾಗಿದೆ.
ಆರೋಪಿಯ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ಬಂದಿದ್ದು, ಆತನ ಸ್ನೇಹಿತ ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಕಮಿಷನ್ ಪಡೆದುಕೊಂಡು ಹಣವನ್ನು ವರ್ಗಾವಣೆ ಮಾಡಿದ್ದಾಗಿ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್ ನಿರ್ದೇಶನದಂತೆ ಸೆನ್ ಎಸಿಪಿ ರವೀಶ್ ನಾಯಕ್, ಇನ್‌ಸ್ಪೆಕ್ಟರ್ ಸತೀಶ್ ಎಂ.ಪಿ ಹಾಗೂ ಎಸ್‌ಐ ಗುರಪ್ಪ ಕಾಂತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.