ಶಿರಸಿ: ಆನ್‌ಲೈನ್ ಮಾಹಿತಿ ಕೊಟ್ಟ ಪರಿಣಾಮ ಅಕ್ಟೋಬರ್ 22ರಂದು ಬರೋಬ್ಬರಿ ಬ್ಯಾಂಕ್ ಖಾತೆಯಿಂದ ವರ್ಗಾವಣೆಗೊಂಡ 14,69,412 ರೂ. ಮರಳಿ ಖಾತೆಗೆ ಜಮಾ ಆದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲಾ ಶಿರಸಿ ವೃತ್ತದ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 22 ರಂದು ಕಾರವಾರ ಮೂಲದ ಶಿರಸಿ ನಿವಾಸಿ ಹರ್ಷಾ ಶ್ರೀಪಾದ ಭುಜಲೇ (36) ಅವರು ಅ.21 ರಂದು ಮೊಬೈಲ್‌ಗೆ ಯಾವುದೊ ಅನಾಮಧೇಯ ಲಿಂಕ್ ಬಂದಿದ್ದು, ಆ ಲಿಂಕನ್ನು ಓಪನ್ ಮಾಡಿ ಮಾಹಿತಿ ಕೊಟ್ಟಿದ್ದರು. ಅದಾದ ಬಳಿಕ ಹರ್ಷಾ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 14,69,412 ರೂ. ಹಣವನ್ನು ಕಳೆದುಕೊಂಡಿದ್ದರು.
ಪೊಲೀಸರ ಮಾರ್ಗದರ್ಶನದಲ್ಲಿ ಸೈಬರ್ ಪೋರ್ಟಲ್ ನಂಬರ 1930ಗೆ ಕರೆ ಮಾಡಿ ದೂರನ್ನು ದಾಖಲಿಸಿದ್ದರು. ಠಾಣೆಗೆ ಬಂದು ಸೈಬರ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ ಬಗ್ಗೆ ಮಾಹಿತಿ ನೀಡಿದ್ದರು. ಹಂತ ಹಂತವಾಗಿ ವರ್ಗಾವಣೆಗೊಂಡ ಹಣವನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ಪತ್ರ ವ್ಯವಹಾರ ಮಾಡಿ ಪುನಃ ಒಟ್ಟು 14,69,412 ರೂ. ಹರ್ಷಾ ಅವರ ಖಾತೆಗೆ ಮರು ಜಮಾ ಆಗಿದೆ.
ಪೊಲೀಸ್ ಉಪಾಧೀಕ್ಷಕ ಗಣೇಶ ಕೆ.ಎಲ್., ಸಿಪಿಐ ರಾಮಚಂದ್ರ ನಾಯಕ, ಪಿಎಸ್‌ಐ ರಾಜಕುಮಾರ ಉಕ್ಕಲಿ, ಮಾಂತಪ್ಪ ಕುಂಬಾರ, ನಗರ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಅನಾಮಧೇಯ ಲಿಂಕ್ ಯಾರೂ ಬಳಸ ಬೇಡಿ, ಅನಗತ್ಯ ಓಟಿಪಿಗೆ ಪ್ರತಿಕ್ರಿಯೆ ನೀಡಬೇಡಿ.
-ರಾಮಚಂದ್ರ ನಾಯಕ, ಸಿಪಿಐ ಶಿರಸಿ