ಮಂಗಳೂರು: ಕೆಮರಾ ಪಾರ್ಸಲ್ ವಿಚಾರವಾಗಿ ಆ್ಯಕ್ಟಿವೇಶನ್ ಚಾರ್ಜ್ ಎಂದು 5 ರೂ. ಗೂಗಲ್ ಪೇ ಮಾಡುವಂತೆ ಕಳುಹಿಸಿದ ಲಿಂಕ್‌ನಿಂದಾಗಿ 52,662 ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಮೇ 12ರಂದು ಕರೆಯೊಂದು ಬಂದಿದ್ದು, ಕೆಮರಾ ಪಾರ್ಸಲ್ ಇದೆ, ಆ್ಯಕ್ಟಿವೇಶನ್ ಚಾರ್ಜ್ 5 ರೂ. ಗೂಗಲ್ ಪೇ ಮೂಲಕ ಪಾವತಿಸಬೇಕು ಹೇಳಿ ಕರೆ ಮಾಡಿದ ವ್ಯಕ್ತಿ ಲಿಂಕ್ ಕಳುಹಿಸಿದ್ದಾನೆ. ಅದರಂತೆ ಲಿಂಕ್‌ಗೆ 5 ರೂ. ಪಾವತಿಸಿ, ಆ ಮೆಸೇಜನ್ನು ಕರೆ ಮಾಡಿದ ವ್ಯಕ್ತಿ ಕಳುಹಿಸಿದ ಇನ್ನೊಂದು ನಂಬರ್‌ಗೆ ಫಾರ್ವಡ್ ಮಾಡಿದ್ದಾರೆ.
ಆದರೆ ಪಾರ್ಸಲ್ ಬಾರದ ಹಿನ್ನೆಲೆಯಲ್ಲಿ ಮತ್ತೆ ಕರೆ ಮಾಡಿದಾಗ ಆದು ಸ್ವಿಚ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡು ತಮ್ಮ ಖಾತೆಯಲ್ಲಿದ್ದ ಹಣವನ್ನು ಪತ್ನಿಯ ಖಾತೆಗೆ ವರ್ಗಾಯಿಸಿದ್ದಾರೆ. ತಮ್ಮ ಖಾತೆಯಿಂದ ಯಾವುದೇ ಹಣ ಡ್ರಾ ಆಗದ ಹಿನ್ನೆಲೆಯಲ್ಲಿ ಮೇ 16ರಂದು ಪತ್ನಿಯ ಖಾತೆಯಿಂದ 45,000 ರೂ. ಮತ್ತೆ ತಮ್ಮ ಖಾತೆಗೆ ವಾಪಸ್ ಹಾಕಿಸಿದ್ದಾರೆ.
ಮೇ 17ರಂದು ಅವರ ಮೊಬೈಲ್ ನಂಬರ್‌ಗೆ ಮೆಸೇಜ್ ಬಂದಿದ್ದು, ಅದರಂತೆ ಒಂದು ಖಾತೆಯಿಂದ 46,020 ರೂ. ಮತ್ತು ಇನ್ನೊಂದರಿಂದ 6,642 ರೂ. ಕಡಿತಗೊಂಡಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆನ್‌ಲೈನ್ ವಂಚನೆಯಾಗಿರುವ ಕುರಿತು ಸ್ಟೇಟ್‌ಮೆಂಟ್ ನೀಡಿದ್ದಾರೆ. ವಂಚಕರನ್ನು ಪತ್ತೆ ಹಚ್ಚಿ ಹಣ ವಾಪಸು ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.