Advertisement

ಆನ್‌ಲೈನ್‌ ಔಷಧ ವ್ಯಾಪಾರ ಮಾರಕ

01:59 PM Oct 15, 2018 | |

ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳಿಗೆ ಆನ್‌ಲೈನ್‌ ಮೂಲಕ ಔಷಧ ವಹಿವಾಟು ಮಾರಕ ಪರಿಸ್ಥಿತಿ ತಂದಿದೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು. ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ 36ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಔಷಧ ಆನ್‌ಲೈನ್‌ ವ್ಯಾಪಾರದಿಂದ ಅಧಿಕೃತ ಔಷಧ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಡಿ-ಫಾರ್ಮ್ಪ ದವೀಧರನಾಗಿ ಔಷಧ ವ್ಯಾಪಾರಿ ಆಗಿರುವ ನನಗೆ ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳ ಅರಿವಿದೆ. ಈ ವಿಷಯದಲ್ಲಿ ಔಷಧ ವ್ಯಾಪಾರಿಗಳೆಲ್ಲ ಸಂಘಟಿತವಾಗಿ ಹೋರಾಟಕ್ಕೆ ಅಣಿಯಾಗಬೇಕು. ಆಗಲೇ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲು ಸಾಧ್ಯವಿದ್ದು, ನಿಮ್ಮ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
 
ಈಚೆಗೆ ವೈದ್ಯರು ತಮ್ಮ ನರ್ಸಿಂಗ್‌ ಹೋಂಗಳಲ್ಲೇ ಸ್ವಂತ ಔಷಧ ಅಂಗಡಿ, ಪ್ರಯೋಗಾಲಯ ಕೂಡ ತೆರೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಔಷಧ ವ್ಯಾಪಾರ ಹಾಗೂ ಪ್ರಯೋಗಾಲಯದ ಮಾಲೀಕರು ನಿರುದ್ಯೋಗಿಗಳಾಗಿ ಭವಿಷ್ಯದ ಜೀವನಕ್ಕೆ ಸಂಕಟ ಪಡುವಂತಾಗಿದೆ ಎಂಬ ಸಮಸ್ಯೆ ಅರಿವು ನನಗಿದೆ ಎಂದರು. ಜನ ಸಾಮಾನ್ಯರಲ್ಲಿ ಔಷಧ ವ್ಯಾಪಾರಿಗಳಲ್ಲಿ ಅಪಾರ ವಿಶ್ವಾಸಾರ್ಹತೆ ಇದ್ದು, ಸಣ್ಣ ಆರೋಗ್ಯ ಸಮಸ್ಯೆಗೂ ಜನರು ತಕ್ಷಣ ಬರುವುದೇ ಔಷಧ ಅಂಗಡಿಗೆ. ವೈದ್ಯರು ಇಲ್ಲದ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳೇ ಪ್ರಥಮ ಚಿಕಿತ್ಸಕರಂತೆ ಕೆಲಸ ಮಾಡುತ್ತಿದ್ದಾರೆ. ಇದು ಜನರು ಔಷಧ ವ್ಯಾಪಾರಸ್ಥರ ಮೇಲೆ ಇರಿಸಿರುವ ಅಪಾರ ನಂಬಿಕೆಯ ಒಂದು ನಿದರ್ಶನ. ಆನ್‌ಲೈನ್‌ ಔಷಧ ವ್ಯಾಪಾರದಿಂದ ಈ ಎಲ್ಲ ನೈಜ ಬಾಂಧವ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಔಷಧ ಹಿರಿಯ ಉದ್ಯಮಿ ಡಿ.ಎಸ್‌. ಗುಡ್ಡೋಡಗಿ ಅವರಿಗೆ ವಾಣಿಜ್ಯ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಎಸ್‌.ಗುಡ್ಡೋಡಗಿ, ಔಷಧ ವ್ಯಾಪಾರಸ್ಥರು ನನ್ನ ಮೇಲೆ ಅಭಿಮಾನವಿರಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಚಿರಋಣಿ ಎಂದು ತಮ್ಮ ಜೀವನಾನುಭವಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡರು. ಔಷಧ ವ್ಯಾಪಾರಸ್ಥರ ಸಂಘದ ರಾಜ್ಯಾಧ್ಯಕ್ಷ ರಘುನಾಥರೆಡ್ಡಿ, ಸಂಘದ ಜಿಲ್ಲಾಧ್ಯಕ್ಷ ಕೆ.ಆರ್‌.ಎತ್ತಿನಮನಿ, ಕಲಬುರಗಿ ವಲಯದ ಉಪ ಔಷಧ ನಿಯಂತ್ರಕ ಗೋಪಾಲ ಭಂಡಾರಿ, ಸಹಾಯಕ ಔಷಧ ನಿಯಂತ್ರಕ ಅಣ್ಣಾರಾವ್‌ ನಾಯಕ, ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋಹರ ಶೆಟ್ಟಿ, ಗಂಗಾಧರ ಸಾಲಕ್ಕಿ, ರಮೇಶ ಯಳಮೇಲಿ, ವಿ.ಜಿ. ಕೋರಚಗಾಂವ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next