ಮೈಸೂರು: ಮೈಸೂರು ವಿಶ್ವವಿದ್ಯಾಲಯ ಆನ್‌ಲೈನ್ ಕೋರ್ಸ್ ಪುನಾರಂಭ ಮಾಡಲು ವಿವಿ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ನಡೆದ ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್, ಯುಜಿಸಿ ನಿರ್ದೇಶನದ ಮೇರೆಗೆ ಈ ಹಿಂದೆ ಆನ್‌ಲೈನ್ ಕೋರ್ಸ್ ಸ್ಥಗಿತಗೊಳಿಸಲಾಗಿತ್ತು. ಇದನ್ನು ಮತ್ತೆ ಪುನಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ಸಿಗುವ ಅವಕಾಶವಿದೆ ಎಂದರು.
ಅನುಮೋದನೆ ಅಗತ್ಯವಿಲ್ಲ: ಎನ್‌ಐಆರ್‌ಎಆರ್ ರ್‍ಯಾಂಕಿಂಗ್‌ನಲ್ಲಿ 100ರ ಒಳಗೆ ಸ್ಥಾನ ಪಡೆದ ವಿವಿಗಳಿಗೆ ಆನ್‌ಲೈನ್ ಕೋರ್ಸ್ ಆರಂಭಿಸಲು ಅನುಮೋದನೆ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲ ಯಗಳ ಧನ ಸಹಾಯ ಆಯೋಗ ಹೇಳಿದೆ. ಇದರಲ್ಲಿ 27ನೇ ರ್‍ಯಾಂಕ್ ಪಡೆದಿರುವ ಮೈಸೂರು ವಿವಿಗೂ ಈ ಶೈಕ್ಷಣಿಕ ಚಟುವಟಿಕೆಗೆ ಅವಕಾಶ ದೊರೆತಿದೆ. ಇದರಿಂದ ಪ್ರಪಂಚದ ಎಲ್ಲ ಮೂಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರೊಂದಿಗೆ ವಿವಿಗೆ ಆದಾಯ ಬರಲಿದೆ ಎಂದು ಮಾಹಿತಿ ನೀಡಿದರು.
9 ಕಾಲೇಜುಗಳಿಗೆ ಸ್ವಾಯತ್ತತೆ: ವಿಶ್ವವಿದ್ಯಾಲಯ ವ್ಯಾಪ್ತಿಯ ಹತ್ತು ಕಾಲೇಜುಗಳಿಗೆ ಈ ಹಿಂದೆ ಇದ್ದ ಸ್ವಾಯತ್ತತೆ ಮುಂದುವರಿಸಲು ಹಾಗೂ ಹೊಸ ದಾಗಿ ಮದ್ದೂರು ಭಾರತೀನಗರದ (ಕೆ. ಎಂ.ದೊಡ್ಡಿ) ಭಾರತಿ ಕಾಲೇಜಿಗೂ ಸ್ವಾಯತ್ತತೆ ಮುಂದುವರಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಚೀನಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ: ಚೀನಾದಿಂದ ಈಗಾಗಲೇ ಕೆಲ ವಿದ್ಯಾರ್ಥಿಗಳು ಪ್ರವೇಶಾತಿಗಾಗಿ ಹಣ ಪಾವತಿಸಿದ್ದಾರೆ. ಸದ್ಯ ಭಾರತ ಮತ್ತು ಚೀನಾ ನಡುವೆ ವಿವಾದ ಇರುವುದರಿಂದ ಅವರಿಗೆ ವೀಸಾ ದೊರೆತಿಲ್ಲ. ಅವರಿಗೆ ವೀಸಾ ಸಿಗುವವರೆಗೂ ಆನ್‌ಲೈನ್ ನಲ್ಲಿಯೇ ತರಗತಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ವೀಸಾ ಸಿಗುವುದಿಲ್ಲ ಎಂದಾದರೆ ಅವರ ಪ್ರವೇಶ ರದ್ದು ಮಾಡಲಾಗುತ್ತದೆ ಎಂದರು.
ಎಂಸಿಎ ಕೋರ್ಸ್ ಕಡಿತ: ವಿವಿಯ ಎನ್ನೆಸ್ಸೆಸ್, ಎನ್‌ಸಿಸಿ, ದೈಹಿಕ ಶಿಕ್ಷಣ ವಿಭಾಗ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ವತಿಯಿಂದ ಅಂತರ ವಿಶ್ಚವಿದ್ಯಾ ನಿಲಯ ಕಾರ್ಯಕ್ರಮ, ಸಾಹಸ ಶಿಬಿರ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಇರುವ ಕಾರಣ ಪ್ರತ್ಯೇಕ ಪರೀಕ್ಷೆ ನಡೆಸುವುದು ಸೇರಿದಂತೆ ಯುಜಿಸಿ ನಿಯಮಾವಳಿ ಪ್ರಕಾರ ಎಂಸಿಎ ಕೋರ್ಸ್‌ನ್ನು 3 ವರ್ಷಗಳಿಂದ 2 ವರ್ಷಗಳಿಗೆ ಕಡಿತಗೊಳಿಸಲು ನಿರ್ಧರಿಸಲಾಯಿತು.
ತರಬೇತಿ ಸಂಸ್ಥೆಯೊಂದಿಗೆ ಒಪ್ಪಂದ: ಮೈಸೂರು ವಿವಿ ಹಾಗೂ ಆಡಳಿತ ತರಬೇತಿ ಸಂಸ್ಥೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಎಂಓಓಸಿಎಸ್ ಯೋಜನೆಯಡಿ ಆನ್‌ಲೈನ್ ವಿಷಯ ಅಭಿವೃದಿಪಡಿಸಲಾಗಿದ್ದು, ಆಡಳಿತ ತರಬೇತಿ ಸಂಸ್ಥೆಗೆ ತರಬೇತಿಗೆ ಬರುವ ಐಎಎಸ್, ಕೆಎಎಸ್ ಪ್ರೊಬೆಷನರಿ ಅಧಿಕಾರಿಗಳಿಗೆ ಮೈಸೂರು ವಿವಿ ಕೆಲ ವಿಷಯಗಳನ್ನು ನುರಿತ ಪ್ರಾಧ್ಯಾಪಕರಿಂದ ವಿಶೇಷ ತರಗತಿ ತೆಗೆದುಕೊಳ್ಳಲು ಸಭೆ ಒಪ್ಪಿಗೆ ನೀಡಿತು. ಸಭೆಯಲ್ಲಿ ಮೈವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಸದಸ್ಯರಾದ ಪ್ರೊ.ಜಿ.ವೆಂಕಟೇಶ್, ಪ್ರೊ. ಎನ್.ಎಂ.ತಳವಾರ್, ಪ್ರೊ.ಆರ್. ರಾಜಣ್ಣ, ಪ್ರೊ. ಎಂ.ಎಸ್. ಶೇಖರ್, ಪ್ರೊ.ನಾಗರಾಜ ನಾಯ್ಕ, ಪ್ರೊ.ಡಿ.ವಿ.ಗೋಪಾಲಪ್ಪ, ಪ್ರೊ.ಯಶೋಧಾ ಇತರರಿದ್ದರು.