ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬುದು ನಮಗೆ ತಿಳಿದಿರುವ ನುಡಿ. ಈ ಶೈಕ್ಷಣಿಕ ವರ್ಷಕ್ಕೆ ಸರಿಹೊಂದುವ ನುಡಿ ಎಂದರೆ: ಮನೆಯೇ ದಿನದ ಪಾಠಶಾಲೆ, ಆನ್‌ಲೈನ್ ಶಿಕ್ಷಕಿಯೇ ಇ- ಗುರು. ಕೋವಿಡ್ ಕಾಟದ ಕಾಲದಲ್ಲೂ ಕಲಿಕೆ-ಕಲಿಸುವಿಕೆ ನಡೆದೇಹೋಯಿತು. ಈ ಕಲಿಸುವಿಕೆಯ ಜವಾಬ್ದಾರಿ ಹೊತ್ತವರು, ಲೆಕ್ಕಕ್ಕೆ ಸಿಗದ ಅದೆಷ್ಟೋ ಶಿಕ್ಷಕರು. ಹೀಗೆ ಆನ್‌ಲೈನ್ ತರಗತಿಯಲ್ಲಿ ಪಾಠ ಹೇಳಿದವರಲ್ಲಿ ಮಹಿಳೆಯರ ಸಂಖ್ಯೆಯೇ ದೊಡ್ಡದಿತ್ತು.
ಮನೆಯಲ್ಲಿನ ಕೆಲಸ ಕಾರ್ಯಗಳ ನಡುವೆ, ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ತರಗತಿಯವರಿಗೆ ಪಾಠ ಹೇಳಿಕೊಡುವುದು ಸುಲಭದ ಮಾತಲ್ಲ. ಇಷ್ಟು ದಿನ ಶಾಲೆ- ಕಾಲೇಜುಗಳಲ್ಲಿ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಹೇಳುತ್ತಿದ್ದವರು, ಬದಲಾದ ಪರಿಸ್ಥಿತಿಯಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕುಳಿತು ಪಾಠ ಹೇಳಿಕೊಟ್ಟು, ನಮ್ಮಿಂದ ಇದೂ ಸಾಧ್ಯ ಎಂದು ತೋರಿಸಿದ್ದಾರೆ. ಎಷ್ಟೋ ಶಿಕ್ಷಕರಿಗೆ ಕಂಪ್ಯೂಟರ್ ಬಳಸುವುದರಲ್ಲಿ ಪರಿಣಿತಿ ಇರಲಿಲ್ಲ. ಅಂಥವರೂ ಸಹ ಕಲಿತು, ಬಳಸಿದ್ದಾರೆ.
ಇದರ ಜೊತೆ ಇಂಟರ್ನೆಟ್ ಅಡೆ ತಡೆ, ಹೊಸ ಸಾಫ್ಟ್ ವೇರ್‌ಗಳ ಬಳಕೆ, ವಿದ್ಯುತ್ ವ್ಯತ್ಯಯದಂತಹ ಸಮಸ್ಯೆಗಳ ಮಧ್ಯೆಯೂ ಕೆಲಸ ನಿರ್ವಹಿಸಿದ್ದಾರೆ. ಶಾಲೆ- ಕಾಲೇಜುಗಳಲ್ಲಿ ಮುಖಾಮುಖೀ ಪಾಠ ಹೇಳಿಕೊಡುವುದೇ ಕೆಲವೊಮ್ಮೆ ಕಷ್ಟ. ಅಂತಹುದರಲ್ಲಿ ಕ್ಯಾಮರಾ ಕಣ್ಣಿನ ಮೂಲಕ ಪಾಠ ಹೇಳಿ, ಪ್ರಶ್ನೆಗಳನ್ನು ಕೇಳಿ, ಹೋಂ ವರ್ಕ್ ಕೊಟ್ಟು, ನಂತರ ಮಕ್ಕಳು ಅಪ್ಲೋಡ್ ಮಾಡಿರುವ ಹೋಂ ವರ್ಕ್ ಅನ್ನು ಒಂದೊಂದಾಗಿ ಡೌನ್ಲೌಡ್ ಮಾಡಿ, ಸರಿಯಿದೆಯೇ ಎಂದು ನೋಡಿ, ತಪ್ಪಿದ್ದರೆ ಅದನ್ನು ಸರಿಮಾಡಲು ಹೇಳುವುದು… ಅಬ್ಟಾ! ಇಷ್ಟೆಲ್ಲಾ ಕೆಲಸ. ಪಾಠಕ್ಕೆ ಸಂಬಂಧಿಸಿದ ಆಫ್‌ಲೈನ್ ವಿಡಿಯೋಗಳನ್ನು ಮಾಡುವಾಗ ಶಿಕ್ಷಕರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಹೊರಗಿನ ಶಬ್ಧ ಆದಷ್ಟೂ ಕೇಳದಂತೆ ನೋಡಿಕೊಳ್ಳಬೇಕು. ಕುಕ್ಕರ್ ಶಬ್ಧ ಇರಬಹುದು, ರಸ್ತೆಯಲ್ಲಿ ವಾಹನಗಳ ಸದ್ದು, ತರಕಾರಿ ವ್ಯಾಪಾರಿಗರ ಕೂಗು… ಹೀಗೆ ಇನ್ನು ಹಲವು. ಎಷ್ಟೋ ಬಾರಿ ಸರಿಯಾಗಿ ಬರುವವರೆಗೂ ಮಾಡಬೇಕಾಗುತ್ತದೆ. ಇದರ ಮಧ್ಯೆ ಆ ಶಿಕ್ಷಕಿಯು ಮನೆಯಲ್ಲಿರುವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಗಮನ
ಕೊಡಬೇಕಿತ್ತು… ಮಕ್ಕಳಂತೂ ಪಾಠ ನಡೆಯುವಾಗ ಮ್ಯಾಮ್ ಕೇಳಿಸ್ತಿಲ್ಲ, ಮ್ಯಾಮ್ ಕಾಣಿಸ್ತಿಲ್ಲ ಅನ್ನುತ್ತಿದ್ದರು. ಅದಕ್ಕೆ ಸಮಾಧಾನದಿಂದಲೇ ಉತ್ತರಿಸುತ್ತ, ಪಾಠಕ್ಕೆ ಪೂರಕವಾದ ವಸ್ತುಗಳನ್ನು ಮನೆಯಲ್ಲಿಯೇ ಸ್ವತಃ ಮಾಡಿ ತೋರಿಸಿ, ಅರ್ಥ ಮಾಡಿಸುವಲ್ಲಿ ಶಿಕ್ಷಕಿಯರು ಸಫಲರಾಗಿದ್ದಾರೆ. ಎಷ್ಟೋ ಕಡೆ ಅವರಿಗೆ ಸಿಗಬೇಕಾದ ಪೂರ್ಣ ವೇತನ ಸಿಕ್ಕಿಲ್ಲ ಆದರೂ ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಅವರು ಕೆಲಸ ನಿರ್ವಹಿಸಿದ್ದಾರೆ. ಆ ಮೂಲಕ ಹೆಣ್ಮಕ್ಳು ಸ್ಟ್ರಾಂಗ್ ಗುರೂ ಎಂದು ಮತ್ತೂಮ್ಮೆ ಸಾರಿ ಹೇಳಿದ್ದಾರೆ.
-ಶ್ರೀಲಕ್ಷ್ಮೀ