ಕೋವಿಡ್ ಹಾವಳಿಯಿಂದಾಗಿ ಎಲ್ಲೆಡೆ ಲಾಕ್‌ಡೌನ್ ಮಾಡಲಾಗಿದೆ. ಈ ಲಾಕ್‌ಡೌನ್ ದಿಶೆಯಲ್ಲಿ ಆನ್‌ಲೈನ್‌ಗೆ ಹೆಚ್ಚು ಮಾರುಹೋಗುವ ಪರಿಸ್ಥಿತಿ ಇದೆ. ಶಾಲಾ ಕಾಲೇಜು ತರಗತಿಗಳು, ಆಫೀಸ್ ಕೆಲಸಗಳು, ಕೊರೊನಾ ತಪಾಸಣೆ ವರದಿಯಿಂದ ಸೋಂಕಿತರ ಸಂಖ್ಯೆವರೆಗೂ ಎಲ್ಲ ಮಾಹಿತಿ ಆನ್‌ಲೈನ್‌ಗಳಲ್ಲಿಯೇ ನೀಡಲಾಗುತ್ತಿದೆ. ಮೊದಲೆಲ್ಲ ಕ್ಯಾಂಪಸ್ ಆವರಣ, ಕ್ಲಾಸ್‌ನಲ್ಲಿ ಮೊಬೈಲ್ ತರೋದಕ್ಕೂ ಪರವಾನಿಗೆ ಇರಲಿಲ್ಲ, ಈಗ ಮೊಬೈಲ್‌ನಲ್ಲಿಯೇ ಕ್ಲಾಸ್ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಈ ಮೊಬೈಲ್ ಜೀವನದ ಒಂದು ಭಾಗವಾಗಿರದೇ ಜೀವನವೇ ಮೊಬೈಲ್‌ನಲ್ಲಿ ಕಳೆಯುತ್ತಿರುವುದು ವಿಷಾದನೀಯ. ಆನ್‌ಲೈನ್ ಕ್ಲಾಸ್‌ನಿಂದಾಗಿ ಎಲ್ಲರ ಕೈಗೂ ಮೊಬೈಲ್ ಸಿಕ್ಕಿದ್ದು ನಿಜ. ಆದರೆ ಅದನ್ನು ಬಳಸಿಕೊಳ್ಳುವ ಮಾರ್ಗ ಸರಿಯಿರಬೇಕು. ಮಾರ್ಗ ಸರಿ ಇದ್ದರೂ ಕೆಲವೊಮ್ಮೆ ಚಂಚಲ ಮನಸ್ಸು ಕ್ಲಾಸ್‌ಗೆ ಲಾಗಿನ್ ಆಗಿ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಸ್ಟೇಟಸ್, ಸ್ಟೋರಿ ಅಂತಾ ಸುತ್ತಾಡಿಸಿ ಬರುತ್ತದೆ. ಇನ್ನು ಕೆಲವರಿಗಂತೂ ಆನ್‌ಲೈನ್ ಗೇಮ್ ನಿಗಾದಲ್ಲಿ ಕ್ಲಾಸ್ ಮುಗಿದಿದ್ದೇ ಗೊತ್ತಾಗಲ್ಲ. ಬ್ಯಾಕ್ ಬೆಂಚರ್ ಇದೀಗ ಬ್ಲಾಕ್‌ಪೇಜ್‌ನಲ್ಲಿ ಕ್ಲಾಸ್ ಮುಗಿಸ್ತಿರೋದನ್ನ ನೋಡಬಹುದು. ಸಾಮಾಜಿಕ ಜಾಲತಾಣ, ಮೊಬೈಲ್ ಸುಳಿಯಲ್ಲಿ ದಿನವಿಡೀ ಮೊಬೈಲ್ ಹಿಡಿದಿರಬೇಕಾದ ವ್ಯವಸ್ಥೆಯೇ ನಿರ್ಮಾಣವಾದಂತಿದೆ.
ಶಿಕ್ಷಣ ಇಲಾಖೆ, ವಿಶ್ವವಿದ್ಯಾನಿಲಯಗಳ ಆದೇಶದನ್ವಯ ಶಿಕ್ಷಕರು, ಉಪನ್ಯಾಸಕರು ಮಾತ್ರ ಶ್ರದ್ಧೆಯಿಂದ ಪಾಠಗಳನ್ನು ಮಾಡುತ್ತಿರುವುದು ನಿಜ. ಲಾಕ್‌ಡೌನ್ ಇದ್ದರೂ ಕರ್ತವ್ಯ ಮಾತ್ರ ಹಾಗೇ ಇದೆ. ವಿದ್ಯಾರ್ಥಿಗಳ ತರಲೆ, ತಂಟೆ, ತಮಾಷೆ, ಹುಡುಗಾಟಿಕೆಯನ್ನು ಸಹಿಸುತ್ತಾ ಬಂದಿರುವ ಶಿಕ್ಷಕರಿಗೆ ಆನ್‌ಲೈನ್‌ನಲ್ಲೂ ಅದೇ ಪರಿಸ್ಥಿತಿ. ವಿಡಿಯೋ, ಆಡಿಯೋ ಮ್ಯೂಟ್ ಮಾಡಿ ಹೋಗುವ ವಿದ್ಯಾರ್ಥಿಗಳು ಪ್ರಶ್ನೆ, ಡೌಟ್ಸ್ ಗಳನ್ನಂತೂ ಕೇಳುವುದೇ ಇಲ್ಲ. ನೆಟ್‌ವರ್ಕ್ ಸಮಸ್ಯೆ, ಚಾರ್ಜ್ ಇಲ್ಲ ಎಂದೆಲ್ಲ ಜಾರಿಕೊಳ್ಳುವ ವಿದ್ಯಾರ್ಥಿಗಳ ಜಾಣ್ಮೆಯನ್ವಯ ಪಾಠ ಮಾಡುವ ಶಿಕ್ಷಕರು ಇದ್ದಾರೆ. ವಿದ್ಯಾರ್ಥಿ ಜೀವನ ಮುಗಿಸಿ ಬಂದಿದ್ದರಿಂದ ವಿದ್ಯಾರ್ಥಿಗಳ ಎಲ್ಲ ಸಮಸ್ಯೆ ಹಾಗೂ ತರಲೆಗಳಿಗೆ ಸಮಂಜಸ ಉತ್ತರ ನೀಡುವರು.
ಆನ್‌ಲೈನ್ ಕ್ಲಾಸ್ ಬಗ್ಗೆ ಬಹಳಷ್ಟು ಸಮಸ್ಯೆಗಳನ್ನು ಕೇಳಿದ್ದರೂ ಅದಕ್ಕೂ ಮೀರಿ ಶಿಕ್ಷಣ ಚಾಲ್ತಿಯಲ್ಲಿರುವುದು, ವಿದ್ಯಾಭ್ಯಾಸಕ್ಕೆ ಬ್ರೇಕ್ ಬೀಳದಂತೆ ನೋಡಿಕೊಂಡಿದ್ದು ಆನ್‌ಲೈನ್ ಶಿಕ್ಷಣವೇ. ಇದು ಓದುವ ವಿದ್ಯಾರ್ಥಿಗಳಿಗೆ ವರದಾನವೇ ಸರಿ. ಬಿಡುವಿನ ಸಮಯ ಮನೆಯಲ್ಲಿಯೇ ಶಿಕ್ಷಣ, ಉಪನ್ಯಾಸಕರೊಂದಿಗೆ ನೇರ ಚರ್ಚೆಗೆ ಅವಕಾಶ ಎಲ್ಲವೂ ಇರುವುದು. ಕೆಲವು ಸಲ ತಾಂತ್ರಿಕ ಸಮಸ್ಯೆಗಳಾದರೂ ಸಹ ಹಲವಾರು ಬಾರಿ ಒಳಿತನ್ನೇ ಮಾಡಿರುವುದು. ಕೋವಿಡ್ ಎಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಜೀವನವನ್ನೇ ಮರೆಸುತ್ತದೆ ಎನ್ನುವಷ್ಟರಲ್ಲಿ ಸಿಕ್ಕಿದ್ದು ಈ ಆನ್‌ಲೈನ್ ಕ್ಲಾಸ್. ಮೊಬೈಲ್ ಸಿಕ್ಕರೇ ಜಗತ್ತನ್ನೇ ಸುತ್ತುವ ಜನರ ನಡುವೆ ಮೊಬೈಲ್ ಬಳಸುವ ರೀತಿ ಬಗ್ಗೆಯೂ ತಿಳಿಸಬೇಕಾದ ಅನಿವಾರ್ಯ ಎದುರಾಗಿದೆ. ಮುಗ್ಧ ಮನಸ್ಸುಗಳ ಮೇಲೆ ಈಗಾಗಲೇ ಮೊಬೈಲ್ ಭೂತ ಆವರಿಸಿ, ಆನ್‌ಲೈನ್ ಬೇತಾಳ ಬೆನ್ನತ್ತಿದೆ. ಈ ಸುಳಿಯಲ್ಲಿ ಉಸಿರುಗಟ್ಟುವ ಮುನ್ನ ಮಕ್ಕಳಿಗೆ ಮೊಬೈಲ್‌ನ ಸರಿಯಾದ ಬಳಕೆ ಬಗ್ಗೆ ತಿಳಿಸುವುದು ಉತ್ತಮ. ಹಾಗಂತ ಮೊಬೈಲ್ ಬಿಟ್ಟಿರುವುದಲ್ಲ. ಆವಶ್ಯಕತೆ ಮತ್ತು ಮನೋರಂಜನೆ ಎರಡು ಎಷ್ಟು ಬೇಕು ಎಂದು ಅರಿತು ಉಳಿದ ಸಮಯ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು , ಮನೆಮಂದಿಯೊಡನೆ ಸಮಯ ಕಳೆಯುವುದು ಉತ್ತಮ.
ಶುಭಾ ಹತ್ತಳ್ಳಿ
ರಾಣಿ ಚನ್ನಮ್ಮ ಸ್ನಾತಕೋತ್ತರ
ಕೇಂದ್ರ ವಿಜಯಪುರ